

ಗಣಿ ಗುತ್ತಿಗೆ ನಿಯಮ ಉಲ್ಲಂಘಿಸಿದರ ಬಗ್ಗೆ ಲೆಕ್ಕಪರಿಶೋಧನೆಯಲ್ಲಿ ಉಲ್ಲೇಖ.
ಶಿವಾನಂದ ಹಿರೇಮಠ ಗದಗ
ಜಿಲ್ಲೆಯ ಮುಂಡರಗಿ ವ್ಯಾಪ್ತಿಯಲ್ಲಿ ತುಂಗಭದ್ರ ನದಿ ತಟದಲ್ಲಿ ನಡೆದ ಅಕ್ರಮ ಮರಳು ಗಣಿಗಾರಿಕೆ ಇಂದು ಅಥವಾ ನಾಳೆ ಮುಗಿಯುವಂತಹ ವಿಷಯವಲ್ಲ. ಮುಂಡರಗಿ ತಾಲೂಕಿನ ಶಿಂಗಟಾಲೂರಿನ ಮರಳು ಬ್ಲಾಕ್ನಲ್ಲೇ ಅತ್ಯಧಿಕ ಅಕ್ರಮ ಜರುಗಿದನ್ನು ಗಣಿ ಇಲಾಖೆ ತನ್ನ ಲೆಕ್ಕಿಪರಿಶೋಧನೆಯಲ್ಲಿ ಉಲ್ಲೇಖಿಸಿದೆ. ಹರಿಯುತ್ತಿರುವ ನದಿಯಲ್ಲೇ ಗಣಿಗಾರಿಕೆ ನಡೆಸಿ ಪರಿಸರ ಅಸಮತೋಲನಕ್ಕೆ ಕಾರಣವಾದವರ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದೂರು ದಾಖಲಿಸದೇ ಬಿಟ್ಟಿಲ್ಲ. ಮುಂಡರಗಿ ಮಂಡಲದ ಬಿಜೆಪಿ ಅಧ್ಯಕ್ಷ ಹೇಮಗಿರೀಶ ಹಾವನಾಳ, ಕಾಂಗ್ರೆಸ್ ಪರಾಜಿತ ಅಭ್ಯಥಿರ್ ಸುಜಾತಾ ದೊಡ್ಡಮನಿ, ಕಾಂಗ್ರೆಸ್ ಮುಖಂಡ ಗುರುನಾಥ ದಾನಪ್ಪನ್ನವರ ಅಷ್ಟೇ ಅಲ್ಲದೇ ಹಲವು ಸ್ಥಳಿಯ ಮುಖಂಡರು ಮತ್ತು ಉದ್ಯಮಿಗಳ ಮೇಲೂ ದೂರು ದಾಖಲಾಗಿದೆ. ಗಣಿ ಇಲಾಖೆ ಅಧಿಕಾರಿ ಚಿದಂಬರಂ ಅವರ ಚಾಣಾಕ್ಷತನದಿಂದ ಅಕ್ರಮಗಳ ತನಿಖೆಗೆ ಒಂದು ಕಾನೂನು ಚೌಕಟ್ಟು ಕಲ್ಪಿಸಲಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣ ಕೊರ್ಟ್ ಮೆಟ್ಟಿಲೇರಿದರೂ ಸಹ ಭವಿಷ್ಯದಲ್ಲಿ ಗಣಿಗಾರಿಕೆ ನಡೆಸುವರಿಗೆ ಎಚ್ಚರಿಕೆ ಗಂಟೆಯೂ ಆಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಡೆಸಿದ ಲೆಕ್ಕ ಪರಿಶೋಧನೆ ವರದಿಯಲ್ಲಿ ಪರವಾನಿಗಿ ಇಲ್ಲದೇ ಖನಿಜ/ಮರಳು ಮಾರಾಟ ಹಾಗೂ ಗಣಿ ಗುತ್ತಿಗೆ ನಿಯಮ ಉಲ್ಲಂಘಿಸಿದ ಕ್ರಮದ ಮೇಲೆ ದಂಡ ವಿಧಿಸಿದ ಬಗ್ಗೆ ಉಲ್ಲೇಖಿಸಲಾಗಿದೆ. ಪ್ರಮುಖ ರಾಜಕಾರಣಿಗಳ ಜತೆಗೆ ರಾಜಧನ, ದಂಡ, ಸ್ಥಿರ ಬಾಡಿಗೆ, ಮೇಲ್ಮೆ ಬಾಡಿಗೆ ಸೇರಿ ವಿವಿಧ ಮೊತ್ತಗಳನ್ನು ಪಾವತಿಸುವಂತೆ ಇನ್ನೂ ಹಲವರಿಗೆ ಇಲಾಖೆ ನೋಟೀಸ್ ನೀಡಿದೆ. ಪ್ರಕರಣ ಕೋರ್ಟನಲ್ಲಿದೆ.
ಟಾಸ್ಕಪೋರ್ಟಸ್ ಸಮಿತಿ:
ಗಣಿ ಇಲಾಖೆ ಅಕ್ರಮ ಮರಳು ಸಾಹಾಟಗಾರರ ವಿರುದ್ಧ ದೂರು ದಾಖಲಿಸುವುದಕ್ಕೂ ಮುನ್ನ ನ.24, 2023ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕಪೋರ್ಸ್ ಸಮಿತಿ ಸಭೆ ಜರುಗಿತ್ತು. ಮುಂಡರಗಿಯ ತುಂಗಭದ್ರ ನದಿ ತಟದಲ್ಲಿ ನಡೆದ ಅಕ್ರಮ ಮರಳು ಗಣಿಗಾರಿಕೆ ಕುರಿತು ವರದಿಗಳು ಪ್ರಸ್ತಾಪ ಆಗಿದ್ದವು. ಮರಳು ಸಾಗಿಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸದೇ ಸಾಗಿಸುವರಿಗೆ ಮೊದಲ ಬಾರಿಗೆ 10 ಸಾವಿರ ದಂಡ ವಿಧಿಸಲು ಸೂಚಿಸಲಾಗಿತ್ತು. ತಪ್ಪು ಮರುಕಳಿಸಿದರೆ 25 ಸಾವಿರ ದಂಡ ಅಥವಾ ಲೈಸೆನ್ಸ್ ರದ್ದು ಮಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಅಕ್ರಮ ಮರಳು ಸಾಗಾಟದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಸಾರಿಗೆ ಇಲಾಖೆ ಮತ್ತು ಗಣಿ ಇಲಾಖೆ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಅವರು ಅಸಮಧಾನ ವ್ಯಕ್ತಪಡಿಸಿದ್ದರು. ಖನಿಜ ತನಿಖಾ ಠಾಣೆಗಳಲ್ಲಿ ತನಿಖಾಧಿಕಾರಿಗಳನ್ನು, ಗೃಹ ರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲು ಸೂಚಿಸಿದ್ದರು.
ಲೆಕ್ಕಪರಿಶೋಧನೆಯಲ್ಲಿ ಏನಿದೆ(2022-23)?
ನ್ಯಾಯಾಲಯದಲ್ಲಿ ಪ್ರಕರಣ:
ಅಕ್ರಮ ಮರಳು ಸಾಗಾಟಕ್ಕೆ ರಾಜಧನ, ದಂಡ ಹಾಗೂ ಅದರ ಮೇಲಿನ ಬಡ್ಡಿ, ಉಪಕರ, ಮೇಲ್ಮೆ ಬಾಡಿಗೆ ಸೇರಿ ಬಾಕಿ ಶಿಲ್ಕು ಪಾವತಿಸುವಂತೆ ಇಲಾಖೆ 13ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಿತ್ತು. ಇಲಾಖೆ ಕ್ರಮದ ವಿರುದ್ಧ ಮಾಲೀಕರು ಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.