ಪರವಾನಿಗಿ ಇಲ್ಲದೇ ಮರಳು ಸಾಗಾಟ ಮತ್ತು ಗಣಿ ಗುತ್ತಿಗೆ ನಿಯಮ ಉಲ್ಲಂಘಿಸಿದರ ಬಗ್ಗೆ ಲೆಕ್ಕಪರಿಶೋಧನೆಯಲ್ಲಿ ಉಲ್ಲೇಖ.

Oplus_131072
Oplus_131072
Published on

ಶಿವಾನಂದ ಹಿರೇಮಠ ಗದಗ
ಜಿಲ್ಲೆಯ ಮುಂಡರಗಿ ವ್ಯಾಪ್ತಿಯಲ್ಲಿ ನಡೆದ ಅಕ್ರಮ ಮರಳು ಗಣಿಗಾರಿಕೆ ಇಂದು ನಿನ್ನೆಯದಲ್ಲ. ಕಳೆದ 5 ವರ್ಷಗಳಿಂದಲೂ ನಿಯಮಗಳನ್ನು ಗಾಳಿ ತೂರಿ ಅಕ್ರಮ ಮರಳು ಸಾಗಾಟ ಮಾಡಿದ ಪ್ರಕರಣ ಇದಾಗಿದೆ. ಇನ್ನೊಂದೆಡೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಜಮೆ ಮಾಡಬೇಕಿದ್ದ ರಾಜಧನ, ದಂಡ, ಸ್ಥಿರ ಬಾಡಿಗೆ, ಮೇಲ್ಮೆ ಬಾಡಿಗೆ ಸೇರಿ ವಿವಿಧ ಮೊತ್ತಗಳು 2017ರಿಂದಲೂ ಬಾಕಿ ಇರುವುದು ಇಲಾಖೆಯಿಂದ ಬ್ಲಾಕ್​ ಮಾಲೀಕರಿಗೆ ವಿತರಣೆ ಆದ 2022-23ನೇ ಸಾಲಿನ ನೋಟೀಸ್​ ನಲ್ಲೇ ಉಲ್ಲೇಖಿಸಲಾಗಿದೆ. ಇನ್ನೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಡೆಸಿದ ಲೆಕ್ಕ ಪರಿಶೋಧನೆ ವರಿಯಲ್ಲಿ ಪ್ರಮುಖವಾಗಿ ಪರವಾನಿಗಿ ಇಲ್ಲದೇ ಖನಿಜ/ಮರಳು ಮಾರಾಟ ಹಾಗೂ ಗಣಿ ಗುತ್ತಿಗೆ ನಿಯಮ ಉಲ್ಲಂಘಿಸಿದ ಕ್ರಮದ ಮೇಲೆ ದಂಡ ವಿಧಿಸಿದ ಬಗ್ಗೆ ಉಲ್ಲೇಖಿಸಲಾಗಿದೆ. ಅಕ್ರಮ ಎಸಗಿದ ಮರಳು ಗುತ್ತಿಗೆದಾರ ಮೇಲೆ ಕಳೆದ 5 ವರ್ಷಗಳಲ್ಲಿ ದೂರು ದಾಖಲಿಸಲಿಲ್ಲವೇಕೆ ಎಂಬ ಅನುಮಾನ ಇಲಾಖೆ ಮೇಲೆ ಮೂಡುತ್ತಿದೆ.
ಏನಿತ್ತು ನಿಯಮ?
ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ 5 ವರ್ಷಗಳ ಅವಧಿಗೆ ಮರಳು ಗುತ್ತಿಗೆ ಪಡೆದ ಗುತ್ತಿಗೆದಾರರು ನಿಯಮಾನುಸಾರ ಗುತ್ತಿಗೆ ಪಡೆದ ಅವಧಿಯಲ್ಲೇ ಮರಳು ಮಾರಾಟ ಮಾಡಬೇಕೆಂಬ ನಿಯಮವಿದೆ. ಆದರೆ, ಅವಧಿ ಮುಗಿದರೂ ಹಲವು ಗುತ್ತಿಗೆದಾರರು ಮರಳು ದಾಸ್ತಾನು ಮಾಡಿಟ್ಟುಕೊಂಡಿದ್ದರ ಕುರಿತು ನ.23, 2023ರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದಿದ್ದರು. ಸಂಗ್ರಹಿಸಿಟ್ಟ ಮರಳನ್ನು ಸರ್ಕಾರಿ ಕಾಮಗಾರಿಗೆ ಆಧ್ಯತೆ ಮೇರೆಗೆ ಬಳಸಿಕೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೂ, ಈಗಲೂ ಹಲವಡೆ ಮರಳು ದಾಸ್ತಾನು ಇರುವುದನ್ನು ಗಣಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಕ್ರಮ ನಡೆಯುತ್ತಿರುವ ಬಗ್ಗೆ ಗಣಿ ಇಲಾಖೆ ಅಧಿಕಾರಿಗಳು ಸಮೀೆಗೆ ಬಂದ ಸಂದರ್ಭದಲ್ಲಿ ಮರಳಿನ ಮೇಲೆ ಮಣ್ಣು ಎಳೆದು ಮರಳು ಇಲ್ಲವೆಂದು ತೋರಿಸಿದ ಟನೆಗಳನ್ನು ಸಹ ಸಮೀಾ ವರದಿಯಲ್ಲಿ ಇಲಾಖೆ ಉಲ್ಲೇಖಿಸಿದೆ.

ಜಿಪಿಎಸ್​ ಅಕ್ರಮ:
ಜಿಪಿಎಸ್​ ಅಳವಡಿಸದೇ ಟಿಪ್ಪರ್​ ಗಳಲ್ಲಿ ಮರಳು ಸಾಗಾಟ ಮಾಡಿರುವ ಆರೋಪ ಪ್ರಮುಖವಾಗಿದೆ. ಮರಳು ಸಾಗಿಸುವ ಪ್ರತಿಯೊಂದು ವಾಹನವು ಜಿಪಿಎಸ್​ ಅಳವಡಿಸಿಕೊಳ್ಳಬೇಕು ಮತ್ತು ಒನ್​ ಸ್ಟೇಟ್​ ಒನ್​ ಜಿಪಿಎಸ್​ ವ್ಯವಸ್ಥೆ ಅಡಿಯಲ್ಲೇ ಮರಳು/ ಖನಿಜ ಸಾಗಾಣಿಕೆ ನಡೆಸಬೇಕೆಂಬ ನಿಯಮ ಮೀರಿದ್ದರಿಂದ ನ.17, 2023ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಗಭೂಇ/2022&23/7749 ಸುತ್ತೊಲೆಯನ್ನು ಮುಂಡರಗಿ ಬರಳು ಬ್ಲಾಕ್​ ಮಾಲೀಕರು ಉಲ್ಲಂಘಿಸಿದ್ದಾರೆ. ಒಂದೇ ಪಾಸ್​ ಅಡಿಯಲ್ಲಿ ಹಲವು ಮರಳು ಟ್ರಿಪ್​ಗಳ ಸಾಗಾಟ, ಮರಳು ಬ್ಲಾಕ್​ ನಲ್ಲಿ ಅನ್​ಅಥರೈಸಡ್​ ಎಂಟ್ರಿ, ಟಿಪ್ಪರ್​ಗಳಲ್ಲಿ ಜಿಪಿಎಸ್​ ಉಪಕರಣವನ್ನು ಟ್ಯಾಂಪರಿಂಗ್​ ಮಾಡಿರುವುದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ.

ಏನೇನು ಅಕ್ರಮ(ಇಲಾಖೆ ವರದಿಯಂತೆ):

  • ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿಯ ಬಿಜೆಪಿ ಮಂಡಳ ಅಧ್ಯಕ್ಷ ಹೇಮಗೀರಿಶ ಹಾವಿನಾಳ ಮಾಲೀಕತ್ವದ ಮರಳು ಬ್ಲಾಕ್​ನಲ್ಲಿ ಪರವಾನಿಗಿ ಇಲ್ಲದೇ ಅತ್ಯಧಿಕ ಖನಿಜ ರವಾನೆ ಮಾಡಿದ್ದನ್ನು ಲೆಕ್ಕಪರಿಶೋಧನೆ ವರದಿಯಲ್ಲಿ ಬಹಿರಂಗಗೊಂಡಿದೆ. ಪರವಾನಿಗಿ ಇಲ್ಲದೇ ರವಾನೆಗೆ ದಂಡ ಮತ್ತು ದಂಡದ ಮೇಲಿನ ಬಡ್ಡಿ ಸೇರಿ ಒಟ್ಟು 7.44 ಕೋಟಿ ಮೊತ್ತ ಹಾಗೂ ಗುತ್ತಿಗೆ ಕರಾರು ಉಲ್ಲಂಘಿಸಿದ್ದಕ್ಕೆ 36 ಸಾವಿರ ದಂಡ, ಬಡ್ಡಿಯನ್ನು ಗಣಿ ಇಲಾಖೆ ವಿಧಿಸಿದೆ. ಶಿಂಗಟಾಲೂರು ಮರಳು ಬ್ಲಾಕ್​ ನಲ್ಲಿ ಪರವಾನಿಗಿ ಇಲ್ಲದೇ ಖನಿಜ/ಮರಳು ಸಾಗಾಟಕ್ಕೆ 4.39 ಲಕ್ಷ ದಂಡ, ಬಡ್ಡಿ ಹಾಗೂ ಗುತ್ತಿಗೆ ಕರಾರು ಉಲ್ಲಂಘಿಸಿದ್ದಕ್ಕೆ 11500 ರೂ. ಮೊತ್ತವನ್ನು ಮಾಲೀಕರಿಗೆ ಇಲಾಖೆ ವಿಧಿಸಿದೆ.
    *ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದ ಅಶೋಕ ಹಳ್ಳೆಪ್ಪನ್ನವರ ಮಾಲೀಕತ್ವದ ಗಣಿಕಾರಿಕೆಯೆಲ್ಲಿ ಗಣಿ ಗುತ್ತಿಗೆಗಿಂತಲೂ ಹೆಚ್ಚು ಆಳದಲ್ಲಿ ತಗ್ಗು ತೆಗೆಯಲಾಗಿದೆ. ಪರವಾನಿಗಿ ಇಲ್ಲದೇ 1084 ಮೆಟ್ರಿಕ್​ ಟನ್​ ಮರಳು ಸಾಗಾಟ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 2021&22 ಮತ್ತು 2022-23ನೇ ಸಾಲಿನಲ್ಲಿ ಸ್ಥಿರ ತೆರಿಗೆ ಮತ್ತು ಅದರ ಮೇಲಿನ ಬಡ್ಡಿ ಸೇರಿ ಒಟ್ಟು, 5.94 ಲಕ್ಷ ರೂ ಮತ್ತು ಪರವಾನಿಗಿ ಇಲ್ಲದೇ ಖನಿಜ ರವಾನೆಗೆ 13.18 ಲಕ್ಷ ರೂ, ಗುತ್ತಿಗೆ ಕರಾರು ಉಲ್ಲಂನೆ ಮತ್ತು ದಂಡ ಸೇರಿ 11500 ರೂ. ಸೇರಿ ಒಟ್ಟು 1925425 ರೂ. ಗಳು ಇಲಾಖೆ ವರದಿಯಂತೆ ಬಾಕಿ ಪಾವತಿ ಇದೆ. ಅದೇ ರೀತಿ ಹೊಳೆ ಇಟಗಿ ಗ್ರಾಮದ ಮತ್ತೊಂದು ಮರಳು ಬ್ಲಾಕ್​ನಿಂದ 3.20 ಲಕ್ಷ ಮೊತ್ತ ಬಾಕಿ ಇದೆ.
    *ಶಿರಹಟ್ಟಿ ತಾಲೂಕಿನ ಕಲ್ಲಾಗನೂರು ಗ್ರಾಮದಲ್ಲಿ ಕಾಂಗ್ರೆಸ್​ ಪರಾಜಿತ ಅಭ್ಯಥಿರ್ ಸುಜಾತಾ ದೊಡ್ಡಮನಿ ಮಾಲೀಕತ್ವದ ಗಣಿಗಾರಿಕೆ ಬ್ಲಾಕ್​ ನಿಂದ 2021ರಿಂದ 2023ರ ವರೆಗೆ ಸ್ಥಿರ ತೆರಿಗೆ ಪಾವತಿ ಆಗಿಲ್ಲ. ಈ ಹಿನ್ನೆಲೆ ಸ್ಥಿರ ತೆರಿಗೆ ಮತ್ತು ಅದರ ಮೇಲಿನ ಬಡ್ಡಿ ಸೇರಿ 7.23 ಲಕ್ಷ ರೂ. ಬಾಕಿ ಮೊತ್ತ ಉಳಿಸಿದೆ. ಗಣಿ ಗುತ್ತಿಗೆ ಕರಾರು ಉಲ್ಲಂನೆ ಹಾಗೂ ಇತರೆ ಮೊತ್ತಗಳು ಸೇರಿ ಒಟ್ಟು 7.34 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದಾರೆ ಎಂದು ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ಮಾಡಳ್ಳಿ ಗ್ರಾಮದಲ್ಲಿನ ಮತ್ತೊಂದು ಮರಳು ಬ್ಲಾಕ್​ ಮಾಲೀಕತ್ವ ಹೊಂದಿರುವ ಸುಜಾತಾ ಅವರು 2 ಲಕ್ಷ ಬಾಕಿ ಉಳಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
    *ಮುಂಡರಗಿ ತಾಲೂಕಿನ ಗಂಗಾಪೂರು ಗ್ರಾಮದ ವಿ.ಸಿ. ಮಲ್ಲಾಡದ ಮಾಲೀಕತ್ವದ ಗಣಿಗಾರಿಕೆ ಬ್ಲಾಕ್​ ನಲ್ಲಿ ಪರವಾನಿಗಿ ಇಲ್ಲದೇ ಖನಿಜ ರವಾನೆ ಮಾಡಿದ್ದಕ್ಕೆ ದಂಡ ಮತ್ತು ಬಡ್ಡಿ ಸೇರಿ ಒಟ್ಟು 1.23 ಕೋಟಿ ಮೊತ್ತವನ್ನು ಹಾಗೂ ಗುತ್ತಿಗೆ ಕರಾರು ಉಲ್ಲಂನೆ ಮಾಡಿದ್ದಕ್ಕೆ ದಂಡ ಮತ್ತು ಅದರ ಮೇಲಿನ ಬಡ್ಡಿ ಸೇರಿ ಒಟ್ಟು 7.61 ಲಕ್ಷ ಮೊತ್ತವನ್ನು ಗಣಿ ಇಲಾಖೆ ವಿಧಿಸಿದೆ. ಒಟ್ಟು 1.30 ಕೋಟಿ ಬಾಕಿ ಪಾವತಿಸಬೇಕಿದೆ.
    *ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ರಾಜು ಡಿ. ಕಳ್ಳಿ ಮಾಲೀಕತ್ವದ ಮರಳು ಗಣಿಗಾರಿಕೆಯಲ್ಲಿ ಪರವಾಣಿಗೆ ಇಲ್ಲದೇ 11203 ಮೆಟ್ರಿಕ್​ ಟನ್​ ಮರಳು ಸಾಗಾಟ ಮಾಡಲಅಗಿದೆ. ಪರವಾಣಿಗೆ ಇಲ್ಲದೇ ರವಾನೆಗೆ ಅನುಬಂಧ&3 ರಲ್ಲಿ 2.13 ಕೋಟಿ ದಂಡ ಮತ್ತು ಬಡ್ಡಿ ವಿಧಿಸಲಾಗಿದೆ. ಗುತ್ತಿಗೆ ಕರಾರು ಉಲ್ಲಂನೆಗೆ 36500 ರೂ. ಮೊತ್ತವನ್ನು ಇಲಾಖೆ ವಿಧಿಸಿದೆ. ಇದೇ ರೀತಿ ಹಲವರು ಬಾಕಿ ಉಳಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net