

ಗದಗ: ನರ್ಸಿಂಗ್ ಸೇವೆಗೆ ಪ್ರಪಂಚದಾದ್ಯಂತ ವಿಪುಲವಾದ ಅವಕಾಶ ಮತ್ತು ಪ್ರೋತ್ಸಾಹಗಳಿವೆ. ವೃತ್ತಿ ಕೌಶಲ್ಯದೊಂದಿಗೆ ಶ್ರದ್ಧೆ, ನಿಷ್ಠೆಯ ಸೇವೆ ಸದಾ ಗೌರವಿಸಲ್ಪಡುತ್ತದೆ ಎಂದು ಸಂಕನೂರ ನರ್ಸಿಂಗ್ ಕಾಲೇಜಿನ ಉಪಪ್ರಾಚಾರ್ಯರಾದ ಡಾ. ವಿನ್ಸೆಂಟ್ ಪಾಟೀಲ ಅವರು ನುಡಿದರು.
ಗದುಗಿನ ಪುರದ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ದಾದಿಯರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ವೈದ್ಯಕೀಯದಲ್ಲಿ ವೇಳೆಗೆ ಬಹಳ ಮಹತ್ವ ಇರುತ್ತದೆ. ಸದಾ ರೋಗಿಗಳ ಸಂಪರ್ಕದಲ್ಲಿ ನಾವು ಇರುತ್ತೇವೆ. ಅವರ ಆರೋಗ್ಯದ ಏರಿಳಿತಗಳನ್ನು ಗಮನಿಸಿ ತಕ್ಷಣ ವೈದ್ಯರ ಸಲಹೆಯಂತೆ ಸೇವೆ ಮಾಡಿದರೆ ರೋಗಿಗಳು ಬೇಗ ಗುಣಮುಖವಾಗುತ್ತಾರೆ. ತುರ್ತು ಸಂದರ್ಭದಲ್ಲಿ ಸಮಯೋಚಿತ ಸೇವೆ ರೋಗಿಯನ್ನು ಸಾವಿನಿಂದ ದೂರಮಾಡಬಹುದಾಗಿದೆ ಎಂದರು. ಈ ವರ್ಷದ ಘೋಷವಾಕ್ಯ ಕುರಿತು ತಿಳಿಸಿದರು. ಇಂಗ್ಲೀಷ್ ಭಾಷೆ, ವೃತ್ತಿ ಕೌಶಲ್ಯ, ಸಮಯೋಚಿತ ಸೇವೆ ಕೊಡುವ ಅನುಭವದ ಸರ್ಸಿಂಗ್ ಆಫೀಸರ್ಸ್ ಗಳಿಗೆ ವಿಶ್ವದಾದ್ಯಂತ ಬಹುದೊಡ್ಡ ಬೇಡಿಕೆ ಇದೆ. ಅಂತಹ ಜ್ಞಾನ ಸಂಪನ್ನ ನರ್ಸ್ ಗಳಾಗಿ ತಾವು ಹೊರಬರಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸುದೀರ್ಘ 32 ವರ್ಷಗಳ ಅವಧಿಯ ಅತ್ಯುತ್ತಮ ನರ್ಸಿಂಗ್ ಸೇವೆ ಮಾಡಿ, ಆದರ್ಶ ನರ್ಸ್ ಆದ ಶ್ರೀಮತಿ ಡೈನಾ ಎಸ್. ಕನವಳ್ಳಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತಿಯಾಗಿ ಮಾತನಾಡಿದ ಶ್ರೀಮತಿ ಡೈನಾ ಕನವಳ್ಳಿಯವರು ಸಮಚಿತ್ತ, ಸಮಭಾವ, ಹಸನ್ಮುಖತೆಯಿಂದ ರೋಗಿಗಳ ಸೇವೆ ಮಾಡಬೇಕು. ರೋಗಿಗಳಿಗೆ ಮತ್ತು ಪರಿಚಾರಕರುಗಳಿಗೆ ತುರ್ತು ಸಂದರ್ಭಗಳಲ್ಲಿ ಮನೋಧೈರ್ಯ ತುಂಬಬೇಕು ಎಂದು ತಮ್ಮ ಸುದೀರ್ಘ ಮೂರು ದಶಕಗಳ ನರ್ಸ್ ವೃತ್ತಿಯ ಅನುಭವಗಳನ್ನು ಹಂಚಿಕೊಂಡರು.
ವೇದಿಕೆಯ ಮೇಲೆ ಗಣ್ಯರು ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರು.
ಡಾ. ಉಮೇಶ ವೀ. ಪುರದ, ಡಾ. ಶಂಭು ಪುರದ ಡಾ. ಕಾವ್ಯ ಪುರದ ಮಾತನಾಡಿದರು. ಪ್ರಾಚಾರ್ಯರಾದ ಶ್ರೀಮತಿ ಸಿಬಿಲ್ ನಿಲೂಗಲ್ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಕು. ಶಿಫಾ, ಕು. ಸುಜಾತಾ, ಕು. ಹೀನಾ, ಕು. ಗುರುಬಸಮ್ಮ ದಿನಾಚರಣೆಯ ಕುರಿತು ಮಾತನಾಡಿದರು. ವೇದಿಕೆ ಮೇಲೆ ಶ್ರೀ ಸುರೇಶ ಕನವಳ್ಳಿ, ಶ್ರೀಮತಿ ಪೂರ್ವಿತಾ ಪುರದ, ಕು. ಚೈತ್ರಾ, ಕು, ಸಹನಾ ಉಪಸ್ಥಿತರಿದ್ದರು. ಸ್ವಾಗತವನ್ನು ಕು. ದೀಪಾ ಮಾಡಿದರು. ಕು. ರೂಪಾ ಕಾರ್ಯಕ್ರಮ ನಿರೂಪಿಸಿದರೆ, ಕು. ಕರುಣಾ ವಂದನಾರ್ಪಣೆ ಮಾಡಿದರು.