

ವಿಜಯವಾಣಿ ಸುದ್ದಿಜಾಲ ಗದಗ
ಎಪಿಎಂಸಿ ವರ್ತಕರಿಂದ ಒಣ ಮೆಣಸಿನಕಾಯಿ ಖರೀದಿಸಿ, ಹಣ ಪಾವತಿಸದೇ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತಿನ ಸೂರತ್ನಲ್ಲಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ರೂ. ಮೌಲ್ಯದ 226 ಒಣಮೆಣಸಿನಕಾಯಿ ಚೀಲಗಳನ್ನು ಬೆಟಗೇರಿ ಪೊಲೀಸ್ ಠಾಣೆ ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಪರಾರಿ ಆಗಿರುವ ಆರೋಪಿಗಳ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಮೆಣಸಿನ ಕಾಯಿ ಖರೀದಿಸಿದ್ದ ಸೂರತ್ ಮೂಲದ ಉದ್ಯಮಿಗಳು ವರ್ತಕರಿಗೆ ಹಣ ಪಾವತಿಸದೇ ಮೆಣಸಿನಕಾಯಿ ಖರೀದಿಸಿ ಚೀಲಗಳನ್ನು ತೆಗೆದುಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಮತ್ತು ಮೆಣಸಿನಕಾಯಿ ಚೀಲಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಕೈಕೊಂಡಿದ್ದರು. ಪ್ರಕರಣ ಬೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರು ವಿಶೇಷ ತಂಡ ರಚನೆ ಮಾಡಿದ್ದರು. ಸಿಪಿಐ ಧೀರಜ್ ಸಿಂಧೆ, ಪಿಎಸ್ಐ ಮಾರುತಿ ಜೋಗದಂಡಕರ ನೇತೃತ್ವದ ಅಧಿಕಾರಿಗಳ ತಂಡ ಗುಜರಾತ ರಾಜ್ಯದ ಸೂರತ್ನ ಉಮಾ ಕೋಲ್ಡ್ ಸ್ಟೋರೆಜ್ ನಲ್ಲಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ 226 ಒಣಮೆಣಸಿನಕಾಯಿ ಚೀಲಗಳನ್ನು ವಶಪಡಿಸಿಕೊಂಡು ತನಿಖಾ ಕಾರ್ಯ ಮುಂದುವರಿಸಿದ್ದಾರೆ.
2024ರ ಮೇ ತಿಂಗಳಿನಲ್ಲಿ ಗದಗ ಎಪಿಎಂಸಿಯ ನಾಜೀರಾ ಸಾದಿಕಸಹ್ಮದ್ ಖಾಜಿ ಎಂಬ ವರ್ತಕರಿಂದ ಗುಜರಾತ್ ರಾಜ್ಯದ ಬಾಬರಿ ಆನಂದ ಜಯಂತಿಲಾಲ್ ಹಾಗೂ ಬಾವಿನ್ ರೂಪರೆಲ್ಲಾ ಎಂಬುವವರು ಒಣಮೆಣಸಿಕಾಯಿ ಖರೀದಿಸಿ ಹಣ ಕೊಡದೆ ನಾಪತ್ತೆಯಾಗಿದ್ದರು. ಈ ಕುರಿತು ಎಪಿಎಂಸಿ ವರ್ತರಕರಾದ ನಾಜೀರಾ ಅವರು ಬೆಟಗೇರಿ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಾಹಿತಿಯನ್ನು ಅರಿತ ಪೊಲೀಸರು ಸ್ಟೋರೇಜ್ ನಲ್ಲಿ ಸಂಗ್ರಹಿಸಿಟ್ಟಿದ್ದ ಒಣಮೆಣಸಿನಕಾಯಿ ವಶಕ್ಕೆ ಪಡೆದು ಮರಳಿ ಗದಗನ ಗೋದಾಮಿನಲ್ಲಿ ಸಂರಕ್ಷಿಸಿಟ್ಟಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರೆದಿದೆ.