ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಮುಂಜಾಗ್ರತೆ ಕ್ರಮ ವಹಿಸಿ: ಸಿ.ಎನ್​. ಶ್ರೀಧರ

05GDG08
Published on

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನಿಂದ ಹರಡಬಹುದಾದ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಜಾಗೃತಿ ವಹಿಸಬೇಕು. ಗ್ರಾಮಗಳಲ್ಲಿಯ ಕುಡಿಯುವ ನೀರಿನ ಮೂಲಗಳ ಪರೀಕ್ಷೆ ಹಾಗೂ ಸರಬರಾಜುವಿನ ಬಗ್ಗೆ ನಿರಂತರವಾಗಿ ಕ್ರಮವಹಿಸಬೇಕು. ಸಾಂಕ್ರಾಮಿಕ ರೋಗಗಳಾದ ಕರಳುಬೇನೆ, ಕಾಲರಾ, ವಿಷಮ ಶೀತಜ್ವರ, ಕಾಮಾಲೆ, ಕೆಎಫ್​ಡಿ, ಹಕ್ಕಿಜ್ವರ, ನಾಯಿಕಡಿತ ಹಾಗೂ ಹಾವು ಕಡಿತ ಕುರಿತು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನಿಂದ ಹರಡಬಹುದಾದ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಜಾಗೃತ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಕೆಎಫ್​ಡಿ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಸಹಕಾರ ನೀಡಬೇಕು. ನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳು ಜಿಲ್ಲೆಯಲ್ಲಿ ಸುಮಾರು 1000ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ. ನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಲಸಿಕೆಯನ್ನು ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಕಾಯ್ದಿರಿಸಬೇಕು ಎಂದರು.

ನಾಯಿ ಕಡಿತ ಪ್ರಕರಣಗಳನ್ನು ಹತೋಟಿಯಲ್ಲಿಡಲು ಎಬಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಲು ಹಾಗೂ ಒಂದು ತಂಡವನ್ನು ರಚಿಸಿ ಮಾಂಸದ ಅಂಗಡಿಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ತಿಳಿಸುವಂತೆ ಪಶುಸಂಗೋಪನಾ ಇಲಾಖೆಗೆ ಜಿಲ್ಲಾಧಿಕಾರಿ ಸಿ ಎನ್​. ಶ್ರೀಧರ ತಿಳಿಸಿದರು.

ಜಿಪಂ ಸಿಇಓ ಭರತ್​ ಎಸ್​ ಮಾತನಾಡಿ ಸೊಳ್ಳೆಗಳಿಂದ ಹರಡುಬಹುದಾದ ರೋಗಗಳಾದ ಮಲೇರಿಯಾ, ಡೆಂಘೀ, ಚಿಕುನ್​ಗುನ್ಯಾ ಹಾಗೂ ಮೆದುಳಜ್ವರದ ಪ್ರಕರಣಗಳನ್ನು ತಡೆಗಟ್ಟಲು ಚರಂಡಿ, ಗಟಾರಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿಂತ ನೀರಿನಲ್ಲಿ ಸೊಳ್ಳೆ ಪ್ರಮಾಣ ಹೆಚ್ಚಾಗದಂತೆ ಲಾರ್ವಾ ಸಮೀಕ್ಷೆಯನ್ನು ತೀವ್ರಗೊಳಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಸಮೀಕ್ಷಣಾಧಿಕಾರಿ ವೆಂಕಟೇಶ ರಾಠೋಡ ಅವರು ಮಾತನಾಡಿ, ಜಿಲ್ಲೆಯಲ್ಲಿ 2024 ರಲ್ಲಿ 410 -ಡೆಂಘೀ ಪ್ರಕರಣಗಳು ಹಾಗೂ 14-ಚಿಕುನ್​ಗುನ್ಯಾ ಪ್ರಕರಣಗಳು ವರದಿಯಾಗಿವೆ. ಗದಗ ಜಿಲ್ಲೆ ಕೆಎಫ್​ಡಿ ಬಾಧಿತ ಎಂಡಮಿಕ್​ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 11 ರಕ್ತದ ಮಾದರಿಗಳನ್ನು ಕೆಎಫ್​ಡಿ ವೈರಸ್​ ಪತ್ತೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಎಲ್ಲ ರಕ್ತದ ಮಾದರಿಗಳು ನೆಗೆಟಿವ್​ ಎಂದು ವರದಿಯಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2024 ರಲ್ಲಿ ಒಟ್ಟು 206 ಹಾವು ಕಡಿತದ ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳಿಗೆ ಸಂಬಂಧಿಸಿದಂತೆ ಲಸಿಕೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಆರೋಗ್ಯ ಸಂಸ್ಥೆಗಳಲ್ಲಿ ಕಾಯ್ದಿರಿಸಿಲು ನಿರ್ದೇಶಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಠಾದಿಕಾರಿ ಎಂ. ಬಿ. ಸಂಕದ, ಜಿಲ್ಲಾ ಆರ್​. ಸಿ. ಎಚ್​. ಅಧಿಕಾರಿ ಡಾ. ಮೀನಾಕ್ಷಿ, ವಿವಿಧ ಇಲಾಖೆಯ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net