

ವಿಜಯವಾಣಿ ಸುದ್ದಿಜಾಲ ಗದಗ
ಗದಗ ನಗರದಲ್ಲಿ ಸದ್ದಿಲ್ಲದೇ ಹಳ್ಳಕೊಳ್ಳದ ಭೂ ಕಬಳಿಸಿ ಅಕ್ರಮ ಸಕ್ರಮ ನಿವೇಶನ ಸೃಷ್ಟಿಸಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರಭಾವಿಗಳ ಹಿಂಬಾಲಕರು, ಬಡ್ಡಿ ವ್ಯಾಪಾರಸ್ಥರು, ಬಡಾವಣೆ ಅಭಿವೃದ್ಧಿಗೊಳಿಸುವ ಪ್ರಕ್ರಿಯೆಯಲ್ಲಿ ಮಾಹಿತಿ ಹೊಂದಿದವರು ಇಂತಹ ಭೂಮಿಯನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಸಾರ್ವಜನಿಕ ಆಸ್ತಿ ಕೈಬಿಟ್ಟು ಹೋಗುತ್ತಿದ್ದರೂ ಸಹ ನಗರಸಭೆ ಅಧಿಕಾರಿಗಳು, ಅಧ್ಯಕ್ಷರು ಮೌನವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅದರಲ್ಲೂ ಹಳ್ಳ ಕೊಳ್ಳಗಳನ್ನು ಸದ್ದಿಲ್ಲದೇ ಮುಚ್ಚುತ್ತಿರುವ ದಂಧೆಕೋರರು ರಾತ್ರಿ ಮುಗಿದು ಬೆಳಗಾಗುವಷ್ಟರಲ್ಲಿ ನಿವೇಶನಗಳನ್ನು ಸೃಷ್ಟಿಸಿ ನಮ್ಮದೇ ಬಡವಾಣೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಕಬಳಿಕೆ ಮಾಡುತ್ತಿದ್ದಾರೆ. ಇಂತದ್ದೇ ಪ್ರಕರಣವೊಂದು ನಗರಸಭೆ ಅಧ್ಯಕ್ಷರ ವಾರ್ಡ್ನಲ್ಲೇ ನಡೆದಿರುವುದು ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ನಗರಸಭೆ ಅಧ್ಯಕ್ಷರು ಪ್ರತಿನಿಧಿಸುವ ವಾರ್ಡ್ ನಂ 35ರಲ್ಲಿ ಮಾನ್ವಿ ಹಳ್ಳ ಹರಿದಿದೆ. ನಗರದ ಕಳಸಾಪುರ ಹೊರ ವರ್ತುಲ ರಸ್ತೆಯ ಪಕ್ಕದಲ್ಲಿರುವ ಆಕಾಶ ನಗರ ಸ್ಲಂ ಗೆ ಹೊಂದಿಕೊಂಡಿರುವ ಸರ್ವೆ ನಂ 150 ರಲ್ಲಿ ಮಾನ್ವಿ ಹಳ್ಳ ಒತ್ತುವರಿ ನಡೆದಿದೆ. ನೂರಾರು ಮಿಟರ್ ಅಗಲ ಹರಿಯುತ್ತಿದ್ದ ಮಾನ್ವಿ ಹಳ್ಳವನ್ನು ಮುಚ್ಚಲಾಗಿದ್ದು, ಅಂದಾಜು 7 ಎಕರೆಗೂ ಅಧಿಕ ಜಮೀನನ್ನು ಭೂಕಬಳಿಕೆದಾರರು ನುಂಗಿದ್ದಾರೆ. ಹೀಗಾಗಿ ಮಾನ್ವಿ ಹಳ್ಳ ಹರಿಯುವ ದಿಕ್ಕನ್ನೆ ಬದಲಿಸಿ ಅಕ್ಕಪಕ್ಕದ ಲೇಔಟ್ಗಳಿಗೆ ನೀರು ನುಗ್ಗುತ್ತಿದೆ. ಇನ್ನೂ ಕಬಳಿಕೆ ಭೂಮಿಯಲ್ಲಿ ನಿವೇಶನಗಳನ್ನು ಸೃಷ್ಟಿಸಲಾಗಿದ್ದು, ಹಳ್ಳದಲ್ಲೆ ಅಕ್ರಮವಾಗಿ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಒತ್ತುವರಿ ಭೂಮಿ ಆಗಿದ್ದರಿಂದ ಭೂ ಖರೀದಿದಾರರಿಗೆ ಕೇವಲ ಬಾಂಡ್ಗಳ ಆಧಾರದ ಮೇಲೆ ಭೂ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ನಗರಸಭೆಯಲ್ಲೂ ದಾಖಲೆಗಳಿಲ್ಲ.
ಪ್ರಕರಣದ ಹಿನ್ನೆಲೆ ಏನು?
ಆಕಾಶ ನಗರದ ಸರ್ವೇ ನಂಬರ 150ರಲ್ಲಿ 5 ಎಕರೆಗೂ ಹೆಚ್ಚು ಕೃಷಿ ಭೂಮಿ ಇತ್ತು. ಲೆ$್ಮಶ್ವರ ಮೂಲದವರು ಈ ಕೃಷಿ ಭೂಮಿಯ ಮಾಲೀಕರಾಗಿದ್ದರು. ಈ ಕೃಷಿ ಭೂಮಿಗೆ ಹೊಂದಿಕೊಂಡಂತೆ ಮಾನ್ವಿ ಹಳ್ಳ ಹರಿದಿದೆ. ದಾಖಲೆಗಳಲ್ಲಿ ಹಳ್ಳದ ಜಮೀನಿಗೆ ಖರಾಬ್ ಬೂಮಿ ಎಂದಿದೆ. ಖರಾಬ್ ಭೂಮಿಯು ನೈಸಗಿರ್ಕವಾಗಿ ಸೃಷ್ಟಿಯಾದ ಹಿನ್ನೆಲೆ ಸರ್ಕಾರವು ಸಹ ಬಡಾವಣೆಗೆ, ಕೃಷಿಯೇತರ ಚಟುವಟಿಕೆಗಳಗೆ ಈ ಭೂಮಿಯಲ್ಲಿ ಬದಲಾಯಿಸಲು ಸಾಧ್ಯವಿಲ್ಲ. 2003 & 04 ರಲ್ಲಿ ಹಳ್ಳದ ಪಕ್ಕದ ಕೃಷಿ ಭೂಮಿಯಲ್ಲಿ ಅಕ್ರಮ ಸಕ್ರಮ ಬಡಾವಣೆ ಮಾಡಿ ಭೂ ಮಾಲೀಕರು ಮಾರಾಟ ಮಾಡಿದ್ದರು. ಇತ್ತೀಚೆಗೆ ಈ ಬಾಡಾವಣೆ ಸ್ಲಂ ಬೊರ್ಡ್ ಗೆ ಒಳಪಡಿಸಲಾಗಿದೆ. 2016ರ ನಂತರ ಆಕಾಶ ನಗರದ ಪಕ್ಕದಲ್ಲೇ ರಿಂಗ್ ರೋಡ್ ನಿರ್ಮಾಣ ಆದ ಕಾರಣ ಈ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದನ್ನೇ ಲಾಭವಾಗಿ ಮಾಡಿಕೊಂಡಿರುವ ಭೂ ಕಬಳಿಕೆದಾರರು ಖರಾಬ್ ಬೂಮಿಯಲ್ಲಿ ಹರಿದಿರುವ ಮಾನ್ವಿಹಳ್ಳವನ್ನು ಒತ್ತುವರಿ ಮಾಡಿ, ಪಕ್ಕದ ಬಡಾವಣೆ ಜತೆಗೆ ಹೊಸ ನಿವೇಶನಗಳನ್ನು ಸೃಷ್ಟಿಸಿ, ಖರೀದಿದಾರರಿಗೆ ಬಾಂಡ್ ಬರೆದುಕೊಟ್ಟು ಮಾರಾಟ ಮಾಡುತ್ತಿದ್ದಾರೆ.
ದಾಖಲೆಗಳೇ ಇಲ್ಲ
ಹಳ್ಳದ ಒತ್ತುವರಿ ನಡೆದು ಹತ್ತಾರು ನಿವೇಶನಗಳನ್ನು ಕೋಟ್ಯಂತರ ರೂ. ಮೌಲ್ಯಕ್ಕೆ ಅಕ್ರಮವಾಗಿ ಮಾರಾಟ ನಡೆಯುತ್ತಿದ್ದರೂ ಸಹ ನಗರಸಭೆಯಲ್ಲಿ ಈ ಬಗ್ಗೆ ಸೂಕ್ತ ದಾಖಲೆಗಳೇ ಇಲ್ಲ. ನಗರಸಭೆಯಿಂದಾಚೆಗೆ ಈ ಅಕ್ರಮ ವ್ಯವಹಾರದ ಬೇರು ಬಗೆದಷ್ಟು ಆಳ ತಲುಪುತ್ತಿದೆ. ದಾಖಲೆಗಳಿಲ್ಲದೇ ಸಹ ಭೂ ಕಬಳಿಕೆ ಸ್ಥಳದಲ್ಲಿ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಈ ಬಗ್ಗೆ ನಗರಸಭೆ ಅಧ್ಯಕ್ಷರು ಮೌನ ವಹಿಸಿರುವುದು ಏಕೆ? ಎಂಬ ಚರ್ಚೆ ನಗರದಲ್ಲಿ ಶುರುವಾಗಿದೆ. ನಗರಸಭೆ ಅಧಿಕಾರಿಗಳೂ ಸಹ ಏನು ಗೊತ್ತಿಲ್ಲದ್ದಂತೆ ವತಿರ್ಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.