ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯಲ್ಲಿ ಸೆ.9 ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಂಡಿದ್ದು ಸಾರ್ವಜನಿಕರು, ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜೀ ಸಂಧಾನ ಮಾಡಿಕೊಳ್ಳುವ ಮೂಲಕ ತಮ್ಮ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ರಾಜೀ ಸಂಧಾನದಲ್ಲಿ ಭಾಗವಹಿಸಿ ತಮಗಾಗುವ ಆರ್ಥಿಕ ಹೊರೆ ಹಾಗೂ ಸಮಯ ಪೋಲಾಗುವುದನ್ನು ತಪ್ಪಿಸಲು, ಮತ್ತು ರಾಜಿ ಸಂಧಾನದಲ್ಲಿ ಪ್ರಕರಣ ಇತ್ಯರ್ಥವಾದರೆ ನ್ಯಾಯಾಲಯಕ್ಕೆ ತುಂಬಿದ ಶುಲ್ಕವನ್ನು ಸಂಪೂರ್ಣ ಮರುಪಾವತಿ ಮಾಡಲಾಗುವುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಅಧ್ಯಕ್ಷ ಗಂಗಾಧರ ಸಿ.ಎಂ ಅವರು ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆಯಲ್ಲಿ ರಾಜೀ ಸಂಧಾನಕ್ಕಾಗಿ ಪ್ರತಿಯೊಂದು ನ್ಯಾಯಾಲಯಕ್ಕೆ ಒಂದು ಬೆಂಚಿನಂತೆ ಒಟ್ಟು 15 ಬೆಂಚಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 20505 ವಿವಿಧ ಚಾಲ್ತಿ ಪ್ರಕರಣಗಳಿದ್ದು ಅದರಲ್ಲಿ ಈಗಾಗಲೇ ರಾಜೀ ಆಗಬಹುದಾದ 2678 ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ ಸಿವಿಲ್ ದಾವೆಗಳು ಅಂದರೆ ಜಮೀನುಗಳಿಗೆ ಸಂಬಂಧಪಟ್ಟ ವ್ಯಾಜ್ಯಗಳು ಮನೆ ಹಾಗೂ ನಿವೇಶನಗಳಿಗೆ ಸಂಬಂಧಪಟ್ಟ ವ್ಯಾಜ್ಯಗಳು, ಸ್ವಾಧೀನ ಪ್ರಕರಣಗಳು, ಬ್ಯಾಂಕ ವಸೂಲಾತಿ ಪ್ರಕರಣಗಳು, ದರಖಾಸ್ತು ಅರ್ಜಿಗಳು, ಕಾರ್ಮಿಕ ಪ್ರಕರಣಗಳು, ಮರಳು ಕಳ್ಳ ಸಾಗಾಣಿಕೆ ಪ್ರಕರಣಗಳು, ಚೆಕ್‌ಬೌನ್ಸ್ ಪ್ರಕರಣಗಳು, ಮೋಟರ್ ವಾಹನ ಅಪಘಾತ ಪ್ರಕರಣಗಳು, ವೈವಾಹಿಕ ಪ್ರಕರಣಗಳು ಹಾಗೂ ರಾಜೀ ಆಗಲು ಅರ್ಹವಿರುವ ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳನ್ನು ರಾಜೀಗಾಗಿ ಗುರುತಿಸಲಾಗಿರುತ್ತದೆ ಎಂದರು.
ಪ್ರತಿದಿನ ರಾಜೀಗಾಗಿ ಆಯ್ಕೆ ಮಾಡಿದ ಪ್ರಕರಣಗಳನ್ನು ಸಂಬಂದಪಟ್ಟ ವಕೀಲರು ಹಾಗೂ ಪಕ್ಷಗಾರರೊಂದಿಗೆ ಮುಂಚಿತವಾಗಿಯೇ ರಾಜೀ ಸಂಧಾನದಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿ ಅವರ ಮನ ಒಲಿಸಿ ರಾಜೀ ಸಂಧಾನ ಮಾಡಿಕೊಳ್ಳಲು ತಿಳಿಯಪಡಿಸಬೇಕು. ಪಕ್ಷಗಾರರು ನ್ಯಾಯಾಲಯಗಳಲ್ಲಿರುವ ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
*ಸಂಚಾರಿ ಇ-ಚಾನೆಲ್‌ನಲ್ಲಿ ದಂಡ ಮೊತ್ತದಲ್ಲಿ ಶೇ 50 ರಷ್ಟು ರಿಯಾಯತಿ :
ರಾಜ್ಯ ಸರ್ಕಾರವು ಪೊಲೀಸ ಇಲಾಖೆಯ ಸಂಚಾರಿ ಇ- ಚಾನೆಲ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣದ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯತಿ ನೀಡಿ ಆದೇಶಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸೆಪ್ಟೆಂಬರ್ 11 ರವರೆಗೆ ಈ ರಿಯಾಯತಿ ಸೌಲಭ್ಯವು ಇರಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ ತಿಳಿಸಿದರು.
ವಿಶೇಷ ಮಧ್ಯಸ್ಥಿಕೆ ಅಭಿಯಾನ:
ಅ.10 ರ ವರೆಗೆ ವಿಶೇಷ ಮಧ್ಯಸ್ಥಿಕೆ ಅಭಿಯಾನ ಕೈಗೊಳ್ಳಲಾಗಿದೆ. ಈ ಅಭಿಯಾನದಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು, ವೈವಾಹಿಕ ಮತ್ತು ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು, ಮೋಟಾರು ಅಪಘಾತ ನ್ಯಾಯಾಧೀಕರಣದ ಪ್ರಕರಣಗಳು, ಚೆಕ್ , ಅಮಾನ್ಯದ ಪ್ರಕರಣಗಳು, ವಾಣಿಜ್ಯ, ಸೇವಾ, ರಾಜೀಯಾಗಬಲ್ಲ ಅಪರಾಧಿಕ, ಗ್ರಾಹಕ ವ್ಯಾಜ್ಯ, ಡಿ.ಆರ್.ಟಿ., ಪಾಲುದಾರಿಕೆ, ಭೂ ಸ್ವಾಧೀನ ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ಈ ಅಭಿಯಾನದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಶಿವನಗೌಡರ ಹೇಳಿದರು.