ಉದ್ಯೋಗ ಖಾತ್ರಿಯಲ್ಲಿ ವೈಯಕ್ತಿಕ ಕಾಮಗಾರಿಗಳಿಗೂ  ಆದ್ಯತೆ: ತಾಪಂ ಇಒ ಕೃಷ್ಣಪ್ಪ ಧರ್ಮರ

WhatsApp Image 2024-09-21 at 3.18.48 PM (1)
Published on

ಲಕ್ಷ್ಮೇಶ್ವರ: ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಊರಿನಲ್ಲಿ ವರ್ಷದಲ್ಲಿ 100 ದಿನ ಕೆಲಸ ನೀಡಿ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಫಲಾನುಭವಿಗಳ ಜೀವನಾಧರಕ್ಕೆ ನೆರವಾಗುವ ವೈಯಕ್ತಿಕ ಕಾಮಗಾರಿಗಳಿಗೂ ಒತ್ತು ನೀಡಲಾಗುತ್ತಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅವರು ಹೇಳಿದರು.

ತಾಲೂಕು ಪಂಚಾಯತಿ ಕಚೇರಿಯ ಸಭಾ ಭವನದಲ್ಲಿ ಹಮ್ಮಿಕೊಂಡ ಸಂಜೀವಿನಿ ಯೋಜನೆ ಎಂಬಿಕೆಗಳ ಸಭೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿ ವಿತರಣಾ ಮೇಳ, ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ ಮತ್ತು ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನದ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು.

ಉದ್ಯೋಗ ಖಾತ್ರಿಯ ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಅರಣ್ಯ, ರೇಷ್ಮೆ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ನಿರಂತರ ಆದಾಯ ನೀಡುವ ಬೆಳಗಳನ್ನು ಬೆಳೆಯಬಹುದಾಗಿದೆ. ಬಹುವಾರ್ಷಿಕ ಬೆಳೆಗಳಾದ ಶ್ರೀಗಂಧ, ಹಬ್ಬೆವು, ಹುಣಸೆ, ಮಾವು, ವೀಳೆದೆಲೆ, ಕರಿಬೇವು, ಡ್ರ್ಯಾಗನ್‌ ಫ್ರೊಟ್, ನುಗ್ಗೆ, ಪೇರಲ, ಸೀತಾಫಲ, ನೆಲ್ಲಿ, ಸೀಬೆ, ಹೂ ವಿನ ಬೆಳೆಗಳಾದ ಮಲ್ಲಿಗೆ, ಗುಲಾಬಿ, ಹಣ್ಣಿನ ಬೆಳೆಗಳಾದ ಬಾಳೆ, ಪಪ್ಪಾಯಿ, ನಿಂಬೆ ಸೇರಿ ಇತರೆ ಹಲವು ಬೆಳೆಗಳನ್ನು ಬೆಳೆಯಲು ಆರ್ಥಿಕ ನೆರವು ನೀಡಲಾಗುತ್ತದೆ. ಅಲ್ಲದೆ ಕೋಳಿ, ಕುರಿ ಶೆಡ್‌ಗಳ ನಿರ್ಮಾಣಕ್ಕೂ ಸಹಾಯಧನ ನೀಡಲಾಗುತ್ತಿದೆ ಎಂದರು.
ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ತಯಾರಿಸುವಾಗ ಮಹಿಳೆಯರು, ಮಕ್ಕಳು ಮತ್ತು ದುರ್ಬಲ ವರ್ಗದ ಕುಟುಂಬಗಳನ್ನು ಗಮನದಲ್ಲಿರಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಂಜೀವಿನಿ ಮಹಿಳಾ ಸಂಘದ ಸದಸ್ಯರು ಗ್ರಾಪಂ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ನೀಡುವಂತೆ ತಿಳಿಸಿದರು. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ದಿನಕ್ಕೆ 349 ರೂ. ಕೂಲಿ ಇದೆ. ಮಹಿಳೆಯರು, ಪುರುಷರು ಎಂಬ ತಾರತಮ್ಯವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಲಾಗುತ್ತಿದೆ ಗ್ರಾಮೀಣ ಪ್ರದೇಶದ ಜನರು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು. ಉದ್ಯೋಗ ಖಾತ್ರಿ ಯೋಜನೆ ಆದ್ಯ ಗುರಿಯಾಗಿದೆ. ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ತಮ್ಮ ಊರಿನಲ್ಲಿ ವರ್ಷದಲ್ಲಿ 100 ದಿನ ಕೆಲಸ ನೀಡಿ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿಕೊಡುವುದು ಉದ್ಯೋಗ ಖಾತ್ರಿ ಯೋಜನೆ ಆದ್ಯ ಗುರಿಯಾಗಿದೆ ಎಂದರು.

ಸಂಜೀವಿನಿ ಯೋಜನೆಯ ತಾಲೂಕಯ ಕಾರ್ಯಕ್ರಮ ವ್ಯವಸ್ಥಾಪಕ ಮಾರುತಿ ಕೊಡ್ಲಿ ಅವರು ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯು ಬಡವರ ಕಲ್ಯಾಣಕ್ಕಾಗಿ ಇರುವ ಮಹತ್ವದ ಯೋಜನೆಯಾಗಿದೆ. ಗ್ರಾಮೀಣ ಭಾಗದವರು ಆರ್ಥಿಕವಾಗಿ ಮುಂದೆ ಬರಲು ಪೂರಕವಾಗಿದೆ ಎಂದರು.

ತಾಪಂ ಐಇಸಿ ಸಂಯೋಜಕರಾದ ವೀರೇಶ ಬಸನಗೌಡ್ರ ಮಾತನಾಡಿ, ಉದ್ಯೋಗ ಖಾತ್ರಿ ಆಯುಕ್ತಾಲಯದ ನಿರ್ದೇಶನದಂತೆ ರೈತರು ತಮ್ಮ ಜಮೀನಿಗಳಲ್ಲಿ ಬಹುವರ್ಷಗಳವರೆಗೆ ಆದಾಯ ನೀಡುವ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಲು ಪೂರಕವಾದ ಯೋಜನೆಯಾಗಿದೆ. ಉದ್ಯೋಗ ಖಾತ್ರಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವುದರ ಜತೆಗೆ ನೀರು, ಮಣ್ಣು ಸಂರಕ್ಷಣೆ ಉದ್ದೇಶ ಹೊಂದಿದೆ. ರೈತರ ಜಮೀನಿನಲ್ಲಿ ಫಲವತ್ತತೆ ಹೆಚ್ಚಲ ಹಾಗೂ ಅಂತರ್ಜಲ ವೃದ್ಧಿಗೆ ಅನುಕೂಲ ಕಲ್ಪಸಿದೆ ಎಂದು ತಿಳಿಸಿದರು.

ತಾಲೂಕು ಪಂಚಾಯತಿ ಅಧಿಕಾರಿ ಬಿ.ಬಿ. ತಳವಾರ, ಸಿಬ್ಬಂದಿಯಾದ ಮಧುಮತಿ, ಸೋಮಶೇಖರ ತಳವಾರ, ಗಣೇಶ ಸುಲಾಖೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net