

ಗದಗ: ರಾಜ್ಯ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಬಡವರ ಪರವಾಗಿರುವ ಈ ಇಂದಿರಾ ಕ್ಯಾಂಟಿನ್ ಕಾಮಗಾರಿ ಆದಷ್ಟು ಬೇಗ, ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಸೂಚನೆ ನೀಡಿದರು.
ಸಚಿವ ಎಚ್ ಕೆ. ಪಾಟೀಲ ಅವರು ರವಿವಾರ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆಯುತ್ತಿರುವ ಇಂದಿರಾ ಕ್ಯಾಂಟಿನ್ ಕಾಮಗಾರಿಯನ್ನು ವೀಕ್ಷಿಸಿ ನಂತರ ಮಾತನಾಡಿದರು.
ಇಂದಿರಾ ಕ್ಯಾಂಟಿನಲ್ಲಿನ ಇಂದಿರಾಗಾಂಧಿ ಚಿತ್ರ ಸರಿಯಾಗಿ ಜನರಿಗೆ ಕಾಣುವಂತೆ ಸ್ಪಷ್ಟವಾಗಿ ಮೂಡಿಬರಬೇಕು. ಈ ಕ್ಯಾಂಟಿನ್ ಎಲ್ಲರಿಗೂ ಆಕರ್ಷಿಸುವಂತೆ ಇರಬೇಕು ಸರಿಯಾಗಿ ನಿರ್ವಹಣೆ ಮಾಡಬೇಕು ಈ ಯೋಜನೆ ಎಲ್ಲರೂ ತಲುವಂತೆ ಮಾಡಬೇಕು ಎಂದು ಸ್ಥಳದಲ್ಲಿದ್ದ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಸೂಚಿಸಿದರು.
ಮುಖ್ಯಾಧಿಕಾರಿಗಳು ಕಾಮಗಾರಿಯ ಕುರಿತು ಸಚಿವರಿಗೆ ಮಾಹಿತಿ ನೀಡಿ, ಇಂದಿರಾ ಕ್ಯಾಂಟೀನ್‌ಗೆ ಸಂಬಂಧಿಸಿದಂತೆ ಕಾಮಗಾರಿ ಶೇ. 90 ರಷ್ಟು ಮುಗಿದೆ. ನೆಲಕ್ಕೆ ಕಾಂಕ್ರೀಟ್ ಹಾಕುವುದು, ಸುತ್ತಲೂ ಗೋಡೆಗಳನ್ನು ನಿರ್ಮಿಸುವುದು ಎಲ್ಲಾ ಮುಗಿಸಿದ್ದೇವೆ. ಉಳಿಕೆ ಕೆಲಸವನ್ನು ಶೀಘ್ರ ಮಾಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಪುರಸಭೆಯ ಸದಸ್ಯ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಲಕ್ಷ್ಮೇಶ್ವರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಒದಗಿಸಬೇಕು ಎಂದು ಕೈ ಮುಗಿದು ಮನವಿ ಮಾಡಿದರು. ಅಮೃತ ಯೋಜನೆ ಕುಡಿಯುವ ನೀರಿಗೆ ಇಡಲಾಗಿರುವ ಹಣವನ್ನು ವಿನಿಯೋಗಿಸಿ ಆದಷ್ಟು ಶೀಘ್ರ ಕಾಮಗಾರಿ ಪ್ರಾರಂಭಿಸಿ ಸಂಬಂಧ ಪಟ್ಟವರಿಗೆ ನಿರ್ದೇಶಿಸಬೇಕು ಎಂದರು. ಇದಕ್ಕೆ ಪುರಸಭೆ ಅಧ್ಯಕ್ಷ ಯಲ್ಲವ್ವ ದುರಗಣ್ಣನವರ, ಉಪಾಧ್ಯಕ್ಷ ಫಿರ್ದೋಷ ಅಡೂರ ಹಾಗೂ ಹಿರಿಯ ಸದಸ್ಯರು ಧ್ವನಿ ಗೂಡಿಸಿದರು.
ಈ ವೇಳೆ ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಪುರಸಭೆ ಸದಸ್ಯರಾದ ಬಸವರಾಜ ಓದುನವರ, ಪ್ರವೀಣ ಬಾಳಿಕಾಯಿ, ಮುಸ್ತಾಕ್ ಅಹ್ಮದ ಶಿರಹಟ್ಟಿ, ಸಿಕಂದರ್ ಕಣಕೆ, ಪುರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಮುಖಂಡರಾದ ಗುರುನಾಥ ದಾನಪ್ಪನವರ, ಚೆನ್ನಪ್ಪ ಜಗಲಿ, ರಫೀಕ ಕಲಬುರ್ಗಿ, ದೀಪಕ್ ಲಮಾಣಿ, ಪಕ್ಕೀರೇಶ ನಂದೆಣ್ಣನವರ, ದಾದಪೀರ ಮುಚ್ಚಾಲೆ, ಅಣ್ಣಪ್ಪ ರಾಮಗೆರಿ, ತಿಪ್ಪಣ್ಣ ಸಂಶಿ, ಸಿದ್ದು ದುರಗಣ್ಣವರ ಸೇರಿದಂತೆ ಮುಂತಾದವರು ಇದ್ದರು.