ಲಕ್ಕುಂಡಿ ನರೇಗಾ ಕಾಮಗಾರಿ ಪರಿಶೀಲನೆ, ಉದ್ಯೋಗಖಾತ್ರಿಯಲ್ಲಿ ಕೂಲಿಕಾರರ ಆರೋಗ್ಯ ತಪಾಸಣೆಗೂ ಒತ್ತು - ಸಿಇಓ ಭರತ್

WhatsApp Image 2025-04-03 at 13.41.06 (1)
Published on

ಗದಗ: ಗದಗ ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ 2025-26ನೇ ಸಾಲಿನ ಸಮುದಾಯ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್. ಎಸ್ ಭೇಟಿ ನೀಡಿ ಕಾಮಗಾರಿ ಗುಣಮಟ್ಟ, ಅಳತೆ, ಯೋಜನೆ ಉದ್ದೇಶ ಕುರಿತು ಕೂಲಿಕಾರರೊಂದಿಗೆ ಸಮಾಲೋಚನೆ ನೆಡೆಸಿ ನಂತರ ಕಾಮಗಾರಿ ಕಡತ, ನ್ಯಾಶನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ (NMMS) ಹಾಜರಾತಿ ಪರಿಶೀಲನೆ ನೆಡೆಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಗಾಟಿಸಿ ಕಾಯಕ ಬಂಧುಗಳಿಗೆ ಹಾಗೂ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಿಸುವ ಮೂಲಕ ಚಾಲನೆ ನೀಡಿದರು.

ಮನರೇಗಾ ಯೋಜನೆಯ ‘ವಲಸೆ ಯಾಕ್ರಿ, ನಿಮ್ಮೂರಲ್ಲೆ ಉದ್ಯೋಗ ಖಾತ್ರಿ’ ದುಡಿಮೆ ಖಾತ್ರಿ ವಿಶೇಷ ಅಭಿಯಾನದಡಿ ಪ್ರಗತಿಯಲ್ಲಿದ್ದ ಸಮುದಾಯ ಕಂದಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಜಾಬ್ ಕಾರ್ಡ್ ಗೆ 100 ದಿನ ಅಕುಶಲ ಕೂಲಿ ಕೆಲಸ ನೀಡಲಾಗುವುದು. ಕಾಮಗಾರಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಒಂದು ಕೆಲಸ ಮುಗಿದ ಮೇಲೆ ಇನ್ನೊಂದು ಕೆಲಸಕ್ಕಾಗಿ ಯೋಚನೆ ಮಾಡುವಂತಿಲ್ಲ. ಕೂಲಿಕಾರರು ನಿರಂತರವಾಗಿ ಕೆಲಸ ಮಾಡಲು ಈಗಾಗಲೇ ನರೇಗಾ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೊದನೆ ನೀಡಿದ್ದು ಒಂದು ಕುಟುಂಬಕ್ಕೆ 100 ದಿನ ಕೂಲಿ ಕೆಲಸ ನೀಡಲು ಕಾಮಗಾರಿಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಇದರ ಬಗ್ಗೆ ತಾಲೂಕು ಮತ್ತು ಗ್ರಾಮ ಪಂಚಾಯತಿಗಳ ಹಂತದ ಅಧಿಕಾರಿಗಳಿಗೆ ಈಗಾಗಲೆ ನಿರ್ದೇಶನ ನೀಡಲಾಗಿದೆ ಎಂದರು.

ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ ಮಾತನಾಡಿ ನರೇಗಾ ಯೋಜನೆಯ ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ/ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ ಎಂಬ ಶೀರ್ಷಿಕೆಯಡಿ ಏಪ್ರಿಲ್ 01 ರಿಂದ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರತಿಯೊಬ್ಬ ನೋಂದಾಯಿತ ಕೂಲಿಕಾರರಿಗೆ ನಿರಂತರವಾಗಿ 100 ದಿನಗಳ ಕೆಲಸ ಪಡೆಯುವ ಅವಕಾಶ ಹೊಂದಿದ್ದು ನಮೂನೆ - 6 ರಲ್ಲಿ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿ ಕೆಲಸ ಪಡೆಯಬಹುದು ಹಾಗೂ ಪ್ರಸ್ತುತ ಆರ್ಥಿಕ ವರ್ಷ ಕೂಲಿ ಮೊತ್ತದಲ್ಲಿ ಭಾರಿ ಏರಿಕೆ ಕಂಡಿದ್ದು 349 ರೂ ಗಳಿದ್ದ ಕೂಲಿ ಮೊತ್ತ 370 ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net