ಲಕ್ಕುಂಡಿ ಐತಿಹಾಸಿಕ ವೈಭವ ಮರುಕಳಿಸುವಂತಾಗಲಿ: ಸಚಿವ ಎಚ್.ಕೆ. ಪಾಟೀಲ

24GDG04
Published on

ಗದಗ: ಲಕ್ಕುಂಡಿಯ ಇತಿಹಾಸ, ಪರಂಪರೆ, ಸಂಸ್ಕೃತಿ  ಶ್ರೀಮಂತಿಕೆ, ಶಿಲ್ಪಕಲೆಗಳು, ಶಾಸನಗಳ  ಜಾಗೃತರಾಗಿ ಲಕ್ಕುಂಡಿಯ ಗತಕಾಲದ ವೈಭವವನ್ನು ಮರುಕಳಿಸಿ ಲಕ್ಕುಂಡಿಯ ಮಹತ್ವವನ್ನು ಜಗತ್ತಿಗೆ ತೋರಿಸಿ ಯುನೆಸ್ಕೋ ಪಟ್ಟಿಗೆ ಸೇರಿಸುವಂತೆ ಮಾಡಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ ತಾಲೂಕಿನ ಲಕ್ಕುಂಡಿಯ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಲಕ್ಕುಂಡಿ, ಲೊಕ್ಕಿಗುಂಡಿ ಎಂಬ ಹೆಸರಿನಿಂದ  ರಾಮಾಯಣ, ಮಹಾಭಾರತದ ಕಾಲದಿಂದಲೂ ಪ್ರಸಿದ್ಧಿ ಹೊಂದಿದೆ. ಇಲ್ಲಿಯವರೆಗೆ ಲಕ್ಕುಂಡಿಯ ಇತಿಹಾಸ, ಶಿಲ್ಪಕಲೆಗಳು, ಶಾಸನಗಳನ್ನು ನಿರ್ಲಕ್ಷ್ಯ ಮಾಡಿದ್ದೇವು. ಇಂದು ಜಾಗೃತರಾಗಿ ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ ಹಾಗೂ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಿ ಲಕ್ಕುಂಡಿಯು ಜಾಗತಿಕ, ಪಾರಂಪರಿಕ ಪಟ್ಟಿಯಲ್ಲಿ ಸೇರುವುದು ಸನ್ನಿಹಿತವಾಗಿದೆ. ಯುನೆಸ್ಕೋ ಆ ಸ್ಥಾನಮಾನ ಕೊಡುವುದಕ್ಕೆ ಬಹಳ ದಿನ ಬೇಕಾಗಿಲ್ಲ ಎಂದರು.

101 ಬಾವಿ, 101 ದೇವಸ್ಥಾನಗಳ ಇತಿಹಾಸ ಹೊಂದಿರುವ ಲಕ್ಕುಂಡಿಯಲ್ಲಿ ಪ್ರಾಚ್ಯಾಶೇಷಗಳ ಸಂಗ್ರಹಣೆ ಮೂಲಕ ಹುದುಗಿ ಹೋಗಿರುವ ದೇವಸ್ಥಾನ ಹಾಗೂ ಬಾವಿಗಳ ಅನ್ವೇಷಣೆ ಹಾಗೂ ಮರುಸೃಷ್ಟಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಲಕ್ಕುಂಡಿಯಲ್ಲಿರುವ ಶಾಸನಗಳು ಹಾಗೂ ಶಿಲ್ಪಕಲೆಗಳನ್ನು ಕೆಲವರು ಮನೆಗಳನ್ನಾಗಿ ಮಾಡಿಕೊಂಡಿದ್ದಾರೆ, ಕೆಲವರು ಕುರಿ, ಆಕಳು ಕಟ್ಟಿದ್ದಾರೆ. ಅವುಗಳ‌ ಮಹತ್ವ ತಿಳಿಸಿ ಅವುಗಳನ್ನು ಒಂದೆಡೆ ಸಂಗ್ರಹಿಸಿ, ಸಂರಕಗಷಿಸೋಣ ಎಂದರು.

ಲಕ್ಕುಂಡಿಯಲ್ಲಿ ಕೈಗೊಂಡಿರುವ ಪ್ರಾಚ್ಯಾವಶೇಷಗಳ ಅನ್ವೇಷಣೆ ರಾಜ್ಯಕ್ಕೆ ದಿಕ್ಸೂಚಿ ಯಾಗಬೇಕು. ಇದರ ಪ್ರೇರಣೆ ಕರ್ನಾಟಕದ ತುಂಬೆಲ್ಲ ಹರಡಬೇಕು. ಜೀರ್ಣೋದ್ಧಾರ ಆಗಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಈ ರೀತಿಯ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮ ನಡೆಯುತ್ತಿರುವುದು ಪ್ರಥಮ ಬಾರಿಗೆ ಆಗಿದೆ. ನರಗುಂದ ವಿಧಾನ ಸಭಾ ಕ್ಷೇತ್ರದ ದಾನದ ಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿದ್ದು ತುಂಬಾ ಸಂತೋಷ ತಂದಿದೆ ಎಂದರು.

ಪ್ರಚ್ಯಾವಶೇಷಗಳನ್ನು ಸಂಗ್ರಹಣೆ ಮಾಡಿ ಕೊಂಡು ಸೂಕ್ತ ಗೌರವಾನಿತ  ಸ್ಥಳದಲ್ಲಿ ಇಟ್ಟು ಮುಂದಿನ ಪೀಳಿಗೆಗೆ ಹಿಂದನ‌ ಕಾಲದ ವೈಭವದ ಕುರುಹುಗಳನ್ನು ನೆನೆಪಿಸುವ ಕಾರ್ಯಕ್ರಮ ಆಗಿದೆ ಮುಂದಿನ ದಿನಗಳಲ್ಲಿ ಇಂದಿನ ಪ್ರಚ್ಯಾವಶೇಷಗಳ ಅನ್ವೇಷಣೆ ಕಾರ್ಯವು ಮಾದರಿಯಾಗಿ ದೇಶದಲ್ಲಿರುವ ಅನೇಕ ಗ್ರಾಮಗಳಲ್ಲಿರುವ ಪ್ರಾಚ್ಯಾವಶೇಷಗಳ ಅನ್ವೇಷಣೆ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತ ಪಡೆಸಿದರು.

ವಿಶೇಷವಾಗಿ ಯುವಕರು ಆಸಕ್ತಿವಹಿಸಿ ಸಂಗ್ರಹಮಾಡಿರುವ ವಿಗ್ರಹ ಶಿಲಾಕೃತಿಗಳ ಅಧ್ಯಯನ ಮಾಡಿ ಅದರ ಹಿಂದಿರುವ ತತ್ವ ಆದರ್ಶವನ್ನು ತಿಳಿದು ಲಕ್ಕುಂಡಿಯ ವೈಭವವನ್ನು ಇನ್ನಷ್ಟೂ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು ಎಂದು ನುಡಿದರು.

ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್.ಪಾಟೀಲ, ಮಾಜಿ ಶಾಸಕ ಡಿ ಆರ್ ಪಾಟೀಲ, ಲಕ್ಕುಂಡಿ ಗ್ರಾಮಪಂಚಾಯತಿ ಅಧ್ಯಕ್ಷರಾದ ಕೆಂಚಪ್ಪ ಎಸ್ ಪೂಜಾರ್, ಲಕ್ಕುಂಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಪುಷ್ಪಾ ಎಸ್. ಪಾಟೀಲ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ವಾಸಣ್ಣ ಕುರಡಗಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಗಳಾದ ಸಲ್ಮಾ ಫಾಹಿಮ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ, ಮೈಸೂರಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜು.ಎ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ ಬಿ ಅಸೂಟಿ, ಗ್ರಾಮೀಣಾಭಿವೃದ್ಧಿ ವಿವಿ ಕುಲಪತಿ ಪ್ರೊ. ಸುರೇಶ ನಾಡಗೌಡರ, ಜಾನಪದ ವಿವಿ ಕುಲಪತಿ ಟಿ.ಎಂ. ಬಾಸ್ಕರ್, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯರುಗಳಾದ ಸಿದ್ಧಲಿಂಗೇಶ್ವರ ಎಚ್ ಪಾಟೀಲ, ರಾವ್, ಅ.ಧ.ಕಟ್ಟಿಮನಿ, ಉಮೇಶಗೌಡ ಪಾಟೀಲ ಹನುಮಾಕ್ಷಿ ಬೋಗಿ, ಹಂಪಿ ವಿಶ್ವವಿದ್ಯಾಲಯ ಕುಲಪತಿಗಳಾದ ಡಿ ವಿ ಪರಮಶಿವ ಮೂರ್ತಿ, ದೇವರಕೊಂಡ ರೆಡ್ಡಿ, ಲಕ್ಕುಂಡಿ ಗ್ರಾಮ ಪಂಚಾಯತಿಯ ಸರ್ವ ಸದ್ಯಸರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net