ಜಾತಿಗಣತಿಯಲ್ಲಿ ಕುರುಹಿನಶೆಟ್ಟಿ ಸಮಾಜಕ್ಕೆ ಅನ್ಯಾಯ: ನೀಲಕಂಠ ಶ್ರೀಗಳು

17GDG01
Published on
ವಿಜಯವಾಣಿ ಸುದ್ದಿಜಾಲ ಗದಗ
ರಾಜ್ಯ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಕಾಂತರಾಜು, ಜಯಪ್ರಕಾಶ ಹೆಗ್ಡೆ ಸಮೀಕ್ಷಾ ವರದಿಯಲ್ಲಿ ರಾಜ್ಯದ ಕುರುಹಿನಶೆಟ್ಟಿ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ನಾಲ್ವಡಿ ನೀಲಕಂಠ ಪಟ್ಟಾದಾರ್ಯ ಶ್ರೀಗಳು ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆಯ ವರದಿಯಲ್ಲಿ ಕುರುಹಿನ ಶೆಟ್ಟಿ ಸಮಾಜವನ್ನು ಕೇವಲ 1 ಲಕ್ಷಕ್ಕೂ ಅಧಿಕ ಸಂಖ್ಯೆಯನ್ನು ತೋರಿಸಲಾಗಿದೆ. ಇದರಿಂದಾಗಿ ಹಿಂದುಳಿದ ಕುರುಹಿನಶೆಟ್ಟಿ ಸಮಾಜಕ್ಕೆ ಸಿಗಬೇಕಿದ್ದ ರಾಜಕೀಯ, ಸಾಮಾಜಿಕ, ಆರ್ಥಿಕ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ಈ ವರದಿಹಿಂದೆ ರಾಜಕೀಯ ದುರುದ್ದೇಶ ಇದೆಯೇ ಎಂಬ ಅನುಮಾನ ಮೂಡುತ್ತಿದೆ. ಈ ವರದಿ ಜಾರಿಗೆ ಕುರುಹಿನಶೆಟ್ಟಿ ಸಮಾಜದ ವಿರೋಧವಿದೆ. ಸರ್ಕಾರ ಈ ವರದಿ ಹಿಂಪಡೆಯದೇ ಇದ್ದರೆ ಸಮಾಜದಿಂದ ಹೋರಾಟ ಆರಂಭಿಸಲಾಗುವುದು ಎಂದರು.
ಹಾವನೂರು ವರದಿ ಪ್ರಕಾರ 1975 ರಲ್ಲಿ 2A ನಲ್ಲಿ ನಮ್ಮ ಸಮಾಜವನ್ನು ಸೇರಿಸಲಾಗಿತ್ತು. ನಂತರ 2A ದಿಂದ ಹೊರತೆಗೆಯಲಾಗಿತ್ತು. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಮತ್ತೆ 2A ಪ್ರವರ್ಗಕ್ಕೆ ಸೇರಿಸಲಾಯಿತು. ಆದರೆ, ಸಿಎಂ ಸಿದ್ದರಾಮಯ್ಯ ಸರ್ಕಾರ ಜಾತಿ ಗಣತಿ ವೇಳೆ ಯಾವುದೇ ಮಠಾಧೀಶರನ್ನು ಸಂಪರ್ಕಿಸಿಲ್ಲ. ಸಮುದಾಯದ ಬೇಸರ ಹೊಂದಿದೆ ಎಂದು ಶ್ರೀಗಳು ಹೇಳಿದರು.
ಮಲ್ಲಿಕಾರ್ಜುನ ಐಲಿ ಮಾತನಾಡಿ, ರಾಜ್ಯದಲ್ಲಿ ಸಣ್ಣ ಸಣ್ಣ ಸಮಾಜವನ್ನು ಕಡೆಗಣಿಸಿ ಸಮೀಕ್ಷೆ ಮಾಡಿದ್ದರಿಂದ ಸಣ್ಣ ಸಮುದಾಯಕ್ಕೆ ಅನ್ಯಾಯ ವಾಗುತ್ತಿದೆ. ಈ ಹಿಂದೆ ಜಯಪ್ರಕಾಶ ಹೆಗಡೆ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ನಮ್ಮ ಸಮಾಜದ ಮುಖಂಡರಿಂದ ಅವರನ್ನು ಭೇಟಿ ಮಾಡಿ ಸಮರ್ಪಕ ಸಮೀಕ್ಷೆ ಮಾಡಲು ಸೂಚಿಸಲಾಗಿತ್ತು. ಆದರೆ, ಸಮರ್ಪಕ ಸಮೀಕ್ಷೆ ನಡೆಯಲಿಲ್ಲ. ದೇಶದಲ್ಲಿ 7 ರಾಜ್ಯಗಳಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ರಾಜ್ಯದಲ್ಲಿ 12 ಲಕ್ಷ ಜನಸಂಖ್ಯೆ ಇದೆ. ಸರ್ಕಾರವು ಮತ್ತೊಮ್ಮೆ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ನಿಂಗಪ್ಪ ಚೇಗೂರು, ರಘುನಾಥ್ ತುಕ್ಕಾ, ಮಲ್ಲಿಕಾರ್ಜುನ ಐಲಿ, ಮೈಲಾರಪ್ಪ ಅರಣಿ, ಪ್ರಭು ರೊಡ್ಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net