ವಿಜಯವಾಣಿ ಸುದ್ದಿಜಾಲ ಗದಗ
ಸ್ವಾಭಿಮಾನ ಮತ್ತು ಅಭ್ಯುದಯ ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ಇಲ್ಲದಿದ್ದರೆ ಗುಲಾಮಗಿರಿಗೆ ತಳಲ್ಪಡುತ್ತವೆ. ಗುಲಾಮಗಿರಿ ಹೋಗಲಾಡಿಸಲು ಶಿಕ್ಷಣ ಪಡೆಯಲೇಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ಸ್ವಾಮೀ ವಿವೇಕಾನಂದ ಸಭಾಭವನದಲ್ಲಿ ಮಂಗಳವಾರ ಕರ್ನಾಟಕ ಕುರುಬ ಸಹಕಾರ ಪತ್ತಿನ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೂದ್ರರು ಅಕ್ಷರ ಸಂಸ್ಕೃತಿಯಿಂದ ವಂಚಿತರು. ಕುರುಬ ಸಂಘವು ಸ್ವಾತಂತ್ರ್ಯ ಪೂರ್ವದಲ್ಲೆ ಶಾಲೆ ಆರಂಭಿಸುವ ಮೂಲಕ ಅಕ್ಷರ ಸಂಸ್ಕೃತಿಯನ್ನು ಹಿಂದುಳಿದ ವರ್ಗಕ್ಕೆ ದಾರೆ ಎರೆದಿದ್ದಾರೆ. ವಿದ್ಯಾವಂತ ಆಗುವುದು ಇಂದಿನ ಅಗತ್ಯವಿದೆ. ಶಿಕ್ಷಣದಿಂದ ಸ್ವಾಭಿಮಾನ ಮತ್ತು ಅಭ್ಯುದಯ ಸಾಧ್ಯ. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂಲ ಮಂತ್ರ ಹಿಂದುಳಿದ ವರ್ಗದ ಅಸ್ತ್ರಗಳು. ಅಂಬೇಡ್ಕರ್ ಅದನ್ನೇ ಅಂಬೇಡ್ಕರ್ ಹೇಳಿದ್ದರು. ಅಂಬೇಡ್ಕರ್ ಅವರು ಹೇಳುವುದಕ್ಕೂ ಮುಂಚೆ ಗದಗ ನಗರದ ಕುರುಬ ಸಂಘವು 1920 ರಲ್ಲೇ ಅನುಷ್ಠಾನಕ್ಕೆ ತಂದು ಈ ಭಾಗದಲ್ಲಿ ಹಿಂದುಳಿದ ವರ್ಗದ ಏಳ್ಗೆಗೆ ಕಾರಣವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯ ಸರ್ಕಾರ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಎಲ್ಲಿವರೆಗೂ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ಬರುವುದಿಲ್ಲವೋ ಅಲ್ಲಿ ವರೆಗೂ ಸ್ವಾತಂತ್ರ್ಯ ಸಿಕ್ಕಿದ್ದು ನಿರರ್ಥಕ ಎಂದರು.
ಶಿಕ್ಷಣ, ಆರ್ಥಿಕ ಅಭಿವೃದ್ಧಿಗೊಳ್ಳುವುದು ಅವಶ್ಯ ಇರುವುದನ್ನು ಮನಗೊಂಡು ಸ್ವಾತಂತ್ರ್ಯ ಪೂರ್ವದಲ್ಲೇ ಸಂಘ, ಬ್ಯಾಂಕ ಸ್ಥಾಪಿಸಿ ಕುರುಬ ಮುಖಂಡರು ಮಾದರಿ ಆಗಿದ್ದಾರೆ. ಹಿಂದುಳಿದ ವರ್ಗದ ಮಕ್ಕಳ ಅಭಿವೃದ್ಧಿ ಆಗಿನ ಕಾಲದಲ್ಲೇ ಯೋಚಿಸಿ ಸಮುದಾಯಕ್ಕೆ ಕೊಡುಗೆ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜಪ್ಪ ಮೇಷ್ಟ್ರು ಸ್ಮರಣೆ:
ನಾನು ಊರಿನಲ್ಲಿ ಕುರಿ ಕಾಯುತ್ತಿದ್ದೆ. ನಮ್ಮ ಊರಿಗೆ ರಾಜಪ್ಪ ಎಂಬ ಮೇಷ್ಟ್ರು ಬಂದಿದ್ದರು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಲು ಮುಂದಾದರು. ಕುರಿ ಕಾಯುತ್ತಿದ್ದ ನನ್ನನ್ನು ನೇರವಾಗಿ ನಾಲ್ಕನೇ ತರಗತಿಗೆ ಸೇರಿಸಿದರು. ರಾಜಪ್ಪ ಮೇಷ್ಟ್ರು ಇಲ್ಲವಾಗಿದ್ದರೆ ಇಂದು ನಾನು ಕಾನೂನು ಪದವಿ ಕಲಿಯುತ್ತಿರಲಿಲ್ಲ. ಇಂದು ಸಿಎಂ ಕೂಡ ಆಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಜಿಪಿಯಿಂದ ಗ್ಯಾರಂಟಿ ನಕಲು:
ಸಾಮಾಜಿಕ ನ್ಯಾಯ ಒದಗಿಸಲು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿತು. ಬಿಜೆಪಿ ಅದನ್ನೇ ನಕಲು ಮಾಡಿದೆ. ದೇಶದ ಅನೇಕ ರಾಜ್ಯದ ಚುನಾವಣೆಗಳಲ್ಲಿ ಗ್ಯಾರಂಟಿ ಯೋಜನೆಗಳ ಪ್ರಣಾಳಿಕೆಯನ್ನು ಬಿಜೆಪಿ ನೀಡಿದೆ ಎಂದು ಸಿಎಂ ವ್ಯಂಗ್ಯ ವಾಡಿದರು.
ವಿಜಯವಾಣಿ ಪ್ರಸ್ತಾಪ:
ವಿಜಯವಾಣಿ ಪತ್ರಿಕೆಯಲ್ಲಿ ಕುರುಬ ಸಂಘದ ಶತಮಾನೋತ್ಸವ ಕುರಿತು ವರದಿ ಪ್ರಕಟಿಸಿದ್ದನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ ಕುರುಬ ಸಂಘದ ಬೆಳವಣಿಗೆ, ಶೈಕ್ಷಣಿಕ ಸಾಧನೆಗೆ ಸಂಘದ ಸದಸ್ಯರು ನೀಡಿದ ಕೊಡುಗೆಯನ್ನು ವಿವರಿಸಿದರು.
ಎಚ್.ಕೆ. ಪಾಟೀಲ ಮಾತನಾಡಿ, ಮುಂಬೈ ಕರ್ನಾಟಕ ಭಾಗದ ಕುರುಬರು ಬಡವರು. ಈ ಭಾಗದಲ್ಲಿ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸ್ಥಾಪನೆಯ ಮನವಿಗೆ ನನ್ನ ಬೆಂಬಲ ಇದೆ ಎಂದರು.
ಮುಂಬೈ ಕರ್ನಾಟಕದಲ್ಲಿ ಕುರುಬ ಸಮಾಜದ ಅಭಿವೃದ್ಧಿ ಬಗ್ಗೆ ಅರಿಯಲು ಕುರುಬ ಸಮುದಾಯದ ಪತ್ತಿನ ಸಹಕಾರ ಸಂಘದ ಬಗ್ಗೆ ತಿಳಿಬೇಕು. ಇಲ್ಲಿನ ಸದಸ್ಯರು ಸಮುದಾಯದ ಅಭಿವೃದ್ಧಿ ನೀಡಿದ ಕೊಡುಗೆಯನ್ನು ಸಂಘದ ಮೂಲಕ ತಿಳಿಯಬಹುದು. ಶಿರಹಟ್ಟಿ ತಾಲೂಕಿನ ಕೋಗೂನೂರು ಗ್ರಾಮದ ಕುರುಬ ಸಮುದಾಯದ ವೀರರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಮೈಲಾರ ಮಹದೇವಪ್ಪ, ವೆಂಕಟೇಶ ಮಾಗಡಿ, ಹನುಮಂತ ಕುರುಡಗಿ ಸೇರಿದಂತೆ ಅನೇಕ ಕುರುಬ ಸಮುದಾಯದವರು ಹೆಸರು ಅಚ್ಚಳಲಿದಂತೆ ಉಳಲಿಯಲಿದೆ. ರಾಷ್ಟ್ರದಲ್ಲಿ ಸಹಕಾರ ಚಳುವಳಿ, ಸಾಮಾಜಿಕ ನ್ಯಾಯದ ಬಗ್ಗೆ ಹೇಳಲಾಗುತ್ತದೆ. ಈ ಸಹಕಾರ ಚಳುವಳಿಯನ್ನು ಏಷ್ಯಾದಲ್ಲೆ ಮೊದಲ ಬಾರಿಗೆ ಜಾರಿ ತಂದವರು ಕಣಗಿನಹಾಳ ಗ್ರಾಮದ ಕುರುಬ ಸಮುದಾಯದ ಸಿದ್ದನಗೌಡ ಪಾಟೀಲರು ಎಂದರು.
ನಮ್ಮಭಾಗದಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಹಕಾರ ಚಳುವಳಿಯಲ್ಲಿ ಕುರುಬ ಸಮಾಜದ ಪಾತ್ರ ಮುಖ್ಯ. ಕೆ.ಎಚ್. ಪಾಟೀಲರಿಗೆ ಕುರುಬ ಸಮಾಜ ಬೆಂಬಲವಾಗಿ ಇತ್ತು. ಹಾಗಾಗಿ ಕೆ.ಎಚ್. ಪಾಟೀಲರು ಸಹಕಾರ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದಲ್ಲಿ ಕುರುಬ ಸಂಘದ ಲಾಂಛನ ಅನಾವರಣ ಗೊಳಿಸಲಾಯಿತು. ಶತಮಾನದಲ್ಲಿ ಕೈಪಿಡಿ ಬಿಡುಗಡೆ ಮಾಡಲಾಯಿತು
ಸಿ.ಸಿ. ಪಾಟೀಲ, ರಹೀಂ ಖಾನ್, ಅಜ್ಜಂಪೀರ್ ಖಾದ್ರಿ, ಜಿ.ಎಸ್. ಗಡ್ಡದೇವರಮಠ, ಎನ್. ಎಚ್. ಕೋಒನರೆಡ್ಡಿ, ರಾಮಕೃಷ್ಣ ದೊಡ್ಡಮನಿ, ಸಲೀಂ ಅಹಮ್ಮದ್, ಜಿ.ಎಸ್. ಪಾಟೀಲ ಬಿ.ಆರ್. ಯಾವಗಲ್, ಡಿ.ಆರ್. ಪಾಟೀಲ, ರವಿ ದಂಡಿನ, ರುದ್ರಣ್ಣ ಗುಳಗುಳಿ, ಬಿ.ಬಿ. ಅಸೂಟಿ, ಐ.ಜಿ. ಸನದಿ ಇತರರು ಇದ್ದರು.