ಬಯಲಾಟ ಕಲೆಗಳ ಮರುವಿನ್ಯಾಸ ಅತ್ಯಗತ್ಯ : ಡಾ. ಕೆ. ಆರ್​. ದುರ್ಗಾದಾಸ್​

25GDG03
Published on

ವಿಜಯವಾಣಿ ಸುದ್ದಿಜಾಲ ಗದಗ

ಬಯಲಾಟದ ಕಲೆಗಳು ಯಗಾನದಂತೆಯೇ ವಿಶ್ವವಿಖ್ಯಾತಗೊಳ್ಳಲು ಪಠ್ಯ, ನೃತ್ಯ, ಹಾಡುಗಾರಿಕೆಯಲ್ಲಿ ಹಲವು ಬದಲಾವಣೆಗಳನ್ನು ತಂದು ಶಿಸ್ತುಬದ್ದವಾಗಿ ಪ್ರದರ್ಶನಗೊಂಡರೆ ತನ್ನ ಗತವೈಭವವನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಬದಲಾವಣೆಗಳು ಕಾಲದ ಅಗತ್ಯವೆಂದು ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯ ಡಾ. ಕೆ. ಆರ್​. ದುರ್ಗಾದಾಸ್​ ಹೇಳಿದರು.

ನಗರದ ಕೆ.ಎಲ್​.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗವು ಕರ್ನಾಟಕ ಬಯಲಾಟ ಅಕಾಡೆಮಿಯ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ "ಬಯಲಾಟ: ಪರಂಪರೆ ಮತ್ತು ಪ್ರಯೋಗ' ಸಂವಾದ ಕಾರ್ಯಕ್ರಮದಲ್ಲಿ ಅಥಿಥಿಗಳಾಗಿ ಅವರು ಮಾತನಾಡಿದರು.

ಜನಪದ ಕಲೆಗಳು ಮನುಷ್ಯನಷ್ಟೇ ಪ್ರಾಚಿನತೆ ಹೊಂದಿದ ವಿಶಿಷ್ಟವಾದ ಕಲೆ. ಸಮಾಜದಲ್ಲಿರುವ ಅಂಕುಡೊಂಕು ತಿದ್ದುವ ಶಕ್ತಿ ಜನಪದ ಕಲೆಯಲ್ಲಿ ಅಡಗಿದೆ. ಜಾನಪದ ಕಲೆಗಳು ಮನರಂಜನೆ ಜೊತೆಗೆ ಬುದ್ಧಿಶಕ್ತಿ ಹಾಗೂ ಮಾರ್ಗದರ್ಶನ ನೀಡುವ ಮಾಧ್ಯಮವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡಾಟವನ್ನು ಬಯಲಾಟ, ಅಟ್ಟದಾಟ, ಹಿರೇ ಆಟ ಎಂದು ಕರೆಯುತ್ತಾರೆ. ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ದೊಡ್ಡಾಟದ ಪಾರಂಪರಿಕ ಕಲಾವಿದರು ಇದ್ದಾರೆ. ವಿಭಿನ್ನ ಹೆಸರು ಮತ್ತು ಶೈಲಿಗಳೂ ಇವೆ. ಹಳ್ಳಿ ಜನರು ಆಡುವ ಆಟ ಎಂದು ಈ ಕಲೆ ನಿರ್ಲಕ್ಷಕ್ಕೆ ಒಳಗಾಗಿದೆ. ಭರತನ ನಾಟ್ಯಶಾಸ್ತ್ರಕ್ಕೂ ಬಯಲಾಟದ ಕುಣಿತಗಳೇ ಮೂಲ. ಈಗ ದೊಡ್ಡಾಟದ ವಾತಾವರಣ ಇಲ್ಲ. ದೊಟ್ಟಾಟಗಳು ಎರಡು ಹಾಗೂ ಮೂರು ಗಂಟೆಗಳ ಪ್ರಸಂಗಗಳಿಗೆ ಸೀಮಿತವಾಗಿವೆ. ಕರ್ನಾಟಕ ಬಯಲಾಟ ಅಕಾಡೆಮಿಯ ಕಲಾವಿದರ ಮಾಹಿತಿ ಸಂಗ್ರಹ ಮತ್ತು ಹಸ್ತಪ್ರತಿ ಸಂಗ್ರಹ ಯೋಜನೆ, ವಿದ್ಯಾಥಿರ್ಗಳಿಗೆ ತರಬೇತಿ, ಕಲಾತಂಡಗಳಿಗೆ ಪ್ರೋತ್ಸಾಹಧನ ಮುಂತಾದ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳ ಸದುಪಯೋಗ ಪಡಸಿಕೊಳ್ಳಬೇಕು ಎಂದರು.

ಡಾ. ಸಿದ್ದಣ್ಣ ಜಕಬಾಳ ಮಾತನಾಡಿ ಸೊಂಟ, ಕಂಠ ಗಟ್ಟಿಯಿದ್ದರೆ ಮಾತ್ರ ಬಯಲಾಟ. ದೊಡ್ಡಾಟವನ್ನು ಬಯಲಾಟ ಎಂದೂ ಕರೆಯುತ್ತಾರೆ. ಹಾಡು, ನೃತ್ಯ, ಭಂಗಿ ಮತ್ತು ಮುದ್ರೆಗಳ ಬಳಕೆ ಇರುವ ವಿಶಿಷ್ಟ ದೃಶ್ಯಕಲೆಯೇ ದೊಡ್ಡಾಟ. ರಾತ್ರಿಯಿಡೀ ಬಯಲಿನಲ್ಲಿ ಆಟ ಆಡುವುದು ವಾಡಿಕೆ. ಭಾಗವತರು, ಹಾಮೋರ್ನಿಯಂ, ಶಹನಾಯಿ ಕಲಾವಿದರು, ಆಟ ಮುನ್ನಡೆಸಲು ಅಗತ್ಯ ಪಾತ್ರಧಾರಿಗಳು ಭುಜಕೀತಿರ್, ತಲೆಗೆ ದೊಡ್ಡ ಕಿರೀಟ, ಎದ್ದು ಕಾಣುವ ಬಣ್ಣಗಳನ್ನು ಬಳಸಲಾಗುತ್ತದೆ. ಪಾತ್ರಧಾರಿಗಳ ದನಿ ಗಟ್ಟಿಯಾಗಿರಬೇಕು. ಕಲಿಯುವ ಆಸಕ್ತಿ ಇದ್ದರವರು ಯಾರೇ ಬಂದರೂ ಬಯಲಾಟ ಅಕಾಡೆಮಿಯು ಅವರ ಜೊತೆಗಿರುತ್ತದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಶಂಕ್ರಣ್ಣ ಸಂಕಣ್ಣವರ ಮಾತನಾಡಿ, ಇಂದಿನ ದೃಶ್ಯ ಮಾಧ್ಯಮ ಭರಾಟೆಯಲ್ಲಿ ಗ್ರಾಮೀಣ ಪ್ರದೇಶದ ದೊಡ್ಡಾಟ, ಬಯಲಾಟದಂತಹ ಕಲೆಗಳು ಮರೆಯಾಗುತ್ತಿವೆ. ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಗ್ರಾಮೀಣ ಪ್ರದೇಶದ ಕಲೆಗಳನ್ನು ಇಂದಿನ ಯುವ ಪೀಳಿಗೆಗೆ ಕಲಿಸುವತ್ತ ಕಲಾವಿದರು ಗಮನ ಹರಿಸಬೇಕು. ಹಿಂದಿನ ದಿನಗಳಲ್ಲಿ ದೊಡ್ಡಾಟ ಮತ್ತು ನಾಟಕಗಳನ್ನು ಪ್ರದಶಿರ್ಸುವುದು ಸಂಪ್ರದಾಯ ಆಗಿತ್ತು. ಆ ಮೂಲಕ ತಮ್ಮ ಕಲೆ, ಸಂಸತಿ ಮತ್ತು ಪರಂಪರೆಯನ್ನು ಮೆರೆಯುತ್ತಿದ್ದರು. ಜತೆಗೆ ಐತಿಹಾಸಿಕ ದಿನಗಳನ್ನು ಮೆಲುಕು ಹಾಕುತ್ತಿದ್ದರು. ಆದರೆ ಇಂದಿನ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸತಿಗೆ ಮಾರು ಹೋಗಿದೆ. ಎಲ್ಲ ಪರಂಪರೆಗಳಿಗೂ ಧಕ್ಕೆ ಬರುತ್ತಿದೆ. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಇಂತಹ ಕಲೆಗಳನ್ನು ಸರ್ಕಾರ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.

ಬಯಲಾಟ ಅಕಾಡೆಮಿಯ ಸಂಶೋಧನಾ ಸಹಾಯಕ ಡಾ. ಅಂದಯ್ಯ ಅರವಟಗಿಮಠ ಮಾತನಾಡಿ, ಕರಾವಳಿ ಪ್ರದೇಶದಲ್ಲಿ ಮೂರುಸಾವಿರಕ್ಕೂ ಹೆಚ್ಚು ಯಗಾನದ ವೃತ್ತಿಪರ ತಂಡಗಳಿವೆ. ಕರಾವಳಿಯ ಯಗಾನಕ್ಕೆ ಅಂತಹದ್ದೊಂದು ವಿಶ್ವಮಾನ್ಯತೆ ಕಾರಣರಾದವರು ಶಿವರಾಮ ಕಾರಂತರು ಮತ್ತು ಕರಾವಳಿಯ ಸಮಸ್ತ ವಿದ್ಯಾವಂತರು. ನಮ್ಮ ದೊಡ್ಡಾಟ ಕಲೆ ಬೆಳೆಯುವ ಅಗತ್ಯವಿದೆ ಎಂದರು.

ಪ್ರಾಚಾರ್ಯ ಡಾ. ಎ. ಕೆ. ಮಠ, ಇಂದಿನ ಮಕ್ಕಳಿಗೆ ಸಂಗೀತ, ನಾಟಕ, ದೊಡ್ಡಾಟ, ರಂಗ ಗೀತೆ, ವಾದ್ಯಗಳ ಅರಿವೇ ಇಲ್ಲ. ಇಂತಹ ಕಲೆಗಳನ್ನು ಉಳಿಸುವ ಅಗತ್ಯವಿದೆ ಎಂದರು. ಡೊಳ್ಳು ಭಾರಿಸುವ ಮೂಲಕ ಸಾಹಿತಿ ಪ್ರೊ, ಚಂದ್ರಶೇಖರ ವಸ್ತ್ರದ ಕಾರ್ಯಕ್ರಮ ಉದ್ಘಾಟಿಸಿದರು.

ಶಿವರೆಡ್ಡಿ ಅಮರಶೆಟ್ಟಿ, ಡಾ. ಅಂದಯ್ಯ ಅರವಟಗಿಮಠ, ಡಾ. ರಾಮಚಂದ್ರ ಪಡೇಸೂರು, ಡಾ. ಜಿ.ಬಿ.ಪಾಟೀಲ, ವಿವೇಕಾನಂದಗೌಡ ಪಾಟೀಲ, ಅಶೋಕ ಬಣ್ಣದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net