ಮಕ್ಕಳು ಭತ್ತ ತುಂಬುವ ಚೀಲಗಳಾಗಬಾರದು, ಭತ್ತ ಬೆಳೆಯುವ ಗದ್ದೆಗಳಾಗಬೇಕು" ಗುರುರಾಜ ಪಾಟೀಲ್

23GDG01
Published on
ಗದಗ:  "ಮಕ್ಕಳಿಗೆ ಅಕ್ಷರ ಜ್ಞಾನ ಎಷ್ಟು ಮುಖ್ಯವೋ ಮಾನವೀಯ ಮೌಲ್ಯಗಳು ಕೂಡ ಅಷ್ಟೇ ಮುಖ್ಯ. ವಿದ್ಯಾರ್ಥಿಗಳನ್ನು ಭತ್ತ ತುಂಬುವ ಚೀಲಗಳನ್ನಾಗಿ ಮಾಡದೆ, ಭತ್ತ ಬೆಳೆಯುವ ಗದ್ದೆಗಳನ್ನಾಗಿ ಮಾಡಿದಾಗ ಮಾತ್ರ ಶಿಕ್ಷಣದ ಪರಿಪೂರ್ಣತೆಯಾಗುವುದು." ಎಂದು ಡಾ, ಗುರುರಾಜ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಯುತರು ಕೆ ಎಲ್ ಇ ಸಂಸ್ಥೆಯ ಸಿ ಬಿ ಎಸ್ ಇ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದುಗಿನ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಕಲ್ಲಯ್ಯ ಅಜ್ಜನವರು ವಹಿಸಿಕೊಂಡಿದ್ದು"ಕೆ ಎಲ್ ಇ ಸಂಸ್ಥೆಯು ಶೈಕ್ಷಣಿಕ ರಂಗದಲ್ಲಿ ಇರುವ ಕೊರತೆಗಳನ್ನು ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಸುಸಜ್ಜಿತ ಕಟ್ಟಡ, ನವೀನ್ ಮಾದರಿಯ ಪಠ್ಯ ಪೂರಕ ಸಂಪನ್ಮೂಲಗಳ ಕ್ರೋಡಿಕರಣ ಮತ್ತು ಶಿಕ್ಷಕರ ಪ್ರಾಮಾಣಿಕ ಪ್ರಯತ್ನದಿಂದಾಗಿ ಗದಗ ಜಿಲ್ಲೆಯಲ್ಲಿಯೇ ಅತ್ಯಂತ ಉತ್ತಮ ಶಾಲೆ ಎಂದು ಹೆಸರುವಾಸಿಯಾಗಿದೆ.
ಪಾಲಕರು ತಮ್ಮ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡದೆ ಪುಸ್ತಕ ಕೊಡುವುದು ಉತ್ತಮ. ಅವರೊಂದಿಗೆ ಸ್ನೇಹದಿಂದ ವರ್ತಿಸಿರಿ."ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕಲ್ಪನಾ ಚಚಡಿ ಸನ್ 2024-25 ನೇ ಸಾಲಿನ ವಾರ್ಷಿಕ ವರದಿ ವಾಚನ ಮಾಡಿದರು. ಶಾಲಾ ಸಂಸತ್ತಿನ ಪ್ರಧಾನಿಯಾದ ಕುಮಾರ್ ಸಾಯಿಭುವನ್ ಬಳ್ಳಾರಿ.ಉಪ ಪ್ರಧಾನಿಯಾದ ಕುಮಾರ್ ನಂದೀಶ ಶೇಖರಪ್ಪ ಕಣಗಿನಹಾಳ ಕಿರಿಯರ ವಿಭಾಗದ ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರ ನಮನ್ ಪಟ್ಟದಕಲ್ಲ್ ಮತ್ತು ಕುಮಾರಿ ಪ್ರಗತಿ ರವೀಂದ್ರ ಗಡಾದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು, ಕ್ರೀಡೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳನ್ನು, ಪಠ್ಯ ಪೂರಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಿ ಪ್ರೋತ್ಸಾಹಿಸಲಾಯಿತು. ಶಾಲೆಯು 25 ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಲಾಂಛನವನ್ನು ಲೋಕಾರ್ಪಣೆ ಮಾಡಲಾಯಿತು.
ಸಾಯಂಕಾಲ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಭರತ ನಾಟ್ಯ, ಯಕ್ಷಗಾನ, ಹಿಂದೂಸ್ತಾನಿ ಸಂಗೀತ ವಿದೇಶಿ ಸಂಗೀತ ಕಲಾ ಪ್ರದರ್ಶನಗಳು ಜನರ ಮನಸ್ಸಿಗೆ ಸಂತಸ ಸಂಭ್ರಮ ನೀಡಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net