ಗದುಗಿನ ಇತಿಹಾಸ ಮತ್ತು ಸ್ಮಾರಕಗಳು ಸರ್ವಕಾಲಕ್ಕೂ ಸ್ಮರಣೀಯ

24GDG08
Published on

ಗದಗ: ಕರ್ನಾಟಕದ ಸಾಂಸ್ಕøತಿಕ ಇತಿಹಾಸದ ಅಧ್ಯಯನದಲ್ಲಿ ಗದುಗಿನ ಇತಿಹಾಸ ಮತ್ತು ಸ್ಮಾರಕಗಳು ಸರ್ವಕಾಲಕ್ಕೂ ಸ್ಮರಣೀಯವಾಗಿವೆ, ಜಿಲ್ಲೆಯ ಇತಿಹಾಸ ಮತ್ತು ಸಂಸ್ಕøತಿಯ ಸಂವರ್ಧನೆಯಲ್ಲಿ ಭೌಗೋಳಿಕ ಸಂಪನ್ಮೂಲಗಳ ಪಾತ್ರ ಅನನ್ಯವಾಗಿದ್ದು, ಎಂದು ಇತಿಹಾಸ ಸಂಶೋಧಕ ಮತ್ತು ಪ್ರವಾಸಿ ಮಾರ್ಗದರ್ಶಿ ಅ.ದ. ಕಟ್ಟಿಮನಿ ಅವರು ಹೇಳಿದರು.

 ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ 2ನೆಯ ಸೆಮಿಸ್ಟರ್ ವಿದ್ಯಾರ್ಥಿಗಳು ಶನಿವಾರ ಡಾ. ಅಪ್ಪಣ್ಣ ಹಂಜೆ ಅವರ ಮಾರ್ಗದರ್ಶನದಲ್ಲಿ ‘ಗದಗ ನಗರದ ಇತಿಹಾಸ ಮತ್ತು ಸ್ಮಾರಕಗಳು’ ಕುರಿತು ಕ್ಷೇತ್ರಕಾರ್ಯ ಅಧ್ಯಯನ ಕೈಗೊಂಡರು.
ಗದಗ ನಗರದ ಇತಿಹಾಸ ಮತ್ತು ಸ್ಮಾರಕಗಳನ್ನು ಪರಿಚಯಿಸುತ್ತ ಸ್ಥಳೀಯ ತ್ರಿಕೂಟೇಶ್ವರ, ಸರಸ್ವತಿ, ವೀರನಾರಾಯಣ, ಕರಿದೇವರ ಗುಡಿ, ರಾಮಲಿಂಗೇಶ್ವರ ದೇವಾಲಯಗಳು ಹಾಗೂ ಜುಮ್ಮಾ ಮಸೀದಿಯ ನಿರ್ಮಾತೃರು, ಕಾಲಮಾನ, ವಾಸ್ತುಕಲೆ ವೈಶಿಷ್ಟ್ಯಗಳು, ಇವುಗಳ ಪೂಜೆ-ಪುನಸ್ಕಾರ, ಜೀರ್ಣೋದ್ಧಾರ ಇತ್ಯಾದಿ ಚಟುವಟಿಕೆಗಳಿಗೆ ಪ್ರಭುಗಳು ಮತ್ತು ಪ್ರಜೆಗಳು ಕೊಡಮಾಡಿದ ದಾನ-ದತ್ತಿಗಳನ್ನು ದಾಖಲಿಸಿರುವ ಶಾಸನಗಳನ್ನು ಸವಿಸ್ತಾರವಾಗಿ ವಿವರಿಸಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಅಪ್ಪಣ್ಣ ಹಂಜೆ ಅವರು ವಿದ್ಯಾರ್ಥಿಗಳಿಗೆ ಗದುಗಿನ ಸ್ಮಾರಕಗಳು ಮತ್ತು ಶಿಲ್ಪಗಳ ಪರಿಕಲ್ಪನೆಗಳು, ವಾಸ್ತು ಲಕ್ಷಣಗಳು, ಪ್ರತಿಮಾ ಲಕ್ಷಣಗಳನ್ನು ವಿವರಿಸಿ ಕರ್ನಾಟಕದ ವಾಸ್ತುಶಿಲ್ಪ ಕಲೆಗಳ ಅಧ್ಯಯನದಲ್ಲಿ ಇವುಗಳ ಪಾತ್ರ ಅನನ್ಯವಾಗಿದ್ದು, ತ್ರಿಕೂಟೇಶ್ವರ, ವೀರನಾರಾಯಣ, ಜುಮ್ಮಾ ಮಸೀದಿಗಳ ಆಡಳಿತ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ನಿರ್ವಹಣೆಯನ್ನು ಒಂದೇ ಕಮೀಟಿ ನಿರ್ವಹಿಸುತ್ತಿದ್ದ ಸಂಗತಿ ಜಿಲ್ಲೆಯ ಸಾಮರಸ್ಯ, ಸಹಬಾಳ್ವೆ, ಸಮನ್ವಯತೆ, ಸೌಹಾರ್ದತೆ, ಸಮಾನತೆ, ಸಹಿಷ್ಣುತೆ ಜೀವನ ಮೌಲ್ಯಗಳಿಗೆ ಅತ್ಯುತ್ತಮ ನಿದರ್ಶನವಾಗಿದೆ ಎಂದು ಹೇಳಿದರು.

ಇತಿಹಾಸ ಉಪನ್ಯಾಸಕ ಪ್ರೊ. ಬಸವಂತೆಪ್ಪ ದೊಡ್ಡಮನಿ ಅವರು ವಿದ್ಯಾರ್ಥಿಗಳಿಗೆ ಗದುಗಿನ ಸ್ಮಾರಕಗಲ್ಲುಗಳು, ಬಾವಿಗಳು, ಮಠಗಳು, ಕೆರೆಗಳ ಹಿರಿಮೆಯನ್ನು ಪರಿಚಯಿಸಿದರು.   

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net