

ಗದಗ : ಶಾಲಾ ಶಿಕ್ಷಣವು ಮಕ್ಕಳ ಭಾವಿ ಭವಿಷ್ಯದ ಗಟ್ಟಿ ಅಡಿಪಾಯ. ಮಕ್ಕಳ ಬೌಧಿಕ, ಭಾವನಾತ್ಮಕ, ಸಾಮಾಜಿಕ ಕೌಶಲ್ಯಗಳ ಜೊತೆಗೆ ಜೀವನಕ್ಕೆ ದಾರಿ ನೀಡಬಲ್ಲ ಶಿಕ್ಷಣವನ್ನು ಮಕ್ಕಳು ಪಡೆಯುತ್ತಾರೆ. ಅದಕ್ಕಾಗಿ ಪಾಲಕರು ಮಕ್ಕಳನ್ನು ಪ್ರತಿದಿನ ತಪ್ಪದೇ ಶಾಲೆಗೆ ಕಳುಹಿಸಬೇಕೆಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅವರು ಗದುಗಿನ ರಂಗನವಾಡಿಯ ಶಾಲಾ ಮಕ್ಕಳ ಮನೆಗೆ ಶಿಕ್ಷಕರೊಂದಿಗೆ ಭೇಟಿ ನೀಡಿ ಪಾಲಕರಿಗೆ ತಿಳುವಳಿಕೆ ಮೂಡಿಸಿದರು. ಈ ಪ್ರದೇಶದ ಸುತ್ತಮುತ್ತಲೂ ಶಾಲೆಗಳಿದ್ದು, ಯಾವುದೇ ಮಗು ಶಾಲೆ ಬಿಟ್ಟು ಶಿಕ್ಷಣದಿಂದ ವಂಚಿತವಾಗದAತೆ, ಪಾಲಕರು- ಪೋಷಕರು- ಸಮುದಾಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕೈಜೋಡಿಸಿ ಮಕ್ಕಳ ಮನವೊಲಿಸಿ ಶಾಲೆಗೆ ಕಳುಹಿಸುವ ಕೆಲಸವಾಗಬೇಕೆಂದರು.
ಶಾಲೆಗಳು ಮಕ್ಕಳಲ್ಲಿ ಉತ್ತಮವಾದ ಶೈಕ್ಷಣಿಕ ಸಾಧನೆ, ಜೀವನ ಕೌಶಲ್ಯಗಳ ವಿಕಾಸನೆ, ಮುಖ್ಯವಾಗಿ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಸಾಮಾಜಿಕ ಜವಾಬ್ದಾರಿ, ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಓದುವ ಹವ್ಯಾಸ-ಜ್ಞಾನದ ವಿಕಾಸವಾಗಿದ್ದು, ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಪಾಲಕರಲ್ಲಿ ಮನವಿ ಮಾಡಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಎಸ್.ಎಸ್ ಬಿರಾದಾರ, ವಿಜಯಾ ಜಕರಡ್ಡಿ, ಭಾರತಿ ಕುಲಕರ್ಣಿ, ಶಿಕ್ಷಕಿಯರಾದ ಪವಿತ್ರಾ ಹಿರೇಮಠ, ಸುನಂದಾ ಕುಂಟೋಜಿ ಮುಂತಾದವರು ಮನೆ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.