

ಗದಗ: ನಾದ ಸ್ವರದ ತಂಬೂರಿಯ ತಂತಿಯು ಬಿಗಿಯಾಗಿರಬಾರದು, ಹರಿದು ಹೋಗುತ್ತದೆ ಇಲ್ಲವೇ ಸಡೀಲು ಆದರೆ ನಾದ ಬರುವುದಿಲ್ಲ. ಹಾಗೇಯೇ ದಂಪತಿಗಳ ಮಧ್ಯೆ ಗಟ್ಟಿತನ ಇರಬೇಕು. ಆಗ ಹಿತವಾದ ಸಂಗೀತದ ಅಲೆಗಳು ಕುಟುಂಬದ ಸಂತಸಕ್ಕೆ ಕಾರಣವಾಗುತ್ತವೆ ಎಂದು ಚಿಂತಕಿ ಕವಿತಾ ದಂಡಿನ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೇಯೋಭಿವೃದ್ಧಿ ಯೋಜನೆಯಿಂದ ಗದುಗಿನ ಹುಡ್ಕೋ ಕಾಲೋನಿಯ ಚಿದಾನಂದ ಮಠದಲ್ಲಿ ಜೀವನದ ಜ್ಞಾನವಿಕಾಸ ಕೇಂದ್ರದ ಸದಸ್ಯನಿಯರಿಗಾಗಿ ಏರ್ಪಡಿಸಿದ್ದ ಕುಟುಂಬದಲ್ಲಿ ಸಾಮರಸ್ಯ ಎಂಬ ವಿಷಯವಾಗಿ ಮಾತನಾಡಿದರು.
ತುಂಬಿದ ಕುಟುಂಬವು ಜೇನುಗೂಡಿನಂತೆ. ಮಧುರತೆಯೇ ಇದರ ಆಸ್ತಿ. ಹೀಗಾಗಿ ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸ್ತಿçà ಸಮಾನತೆ, ಪ್ರೀತಿ, ಮಮತೆಗಳಿಂದ ಕುಟುಂಬವನ್ನು ನಿರ್ವಹಿಸಿ ಮನೆಯ ಘನತೆ, ಗೌರವ ಎತ್ತಿ ಹಿಡಿದು ಪ್ರತಿಯೊಬ್ಬರ ಜವಾಬ್ದಾರಿಯನ್ನು ಹೊತ್ತು ಕುಟುಂಬದ ಉತ್ತಮ ಹಾಗೂ ಮೌಲ್ಯಯುತ ಸಂಸ್ಕಾರಕ್ಕೆ, ಸಾಮರಸ್ಯಕ್ಕೆ ಕಾರಣಳಾಗುತ್ತಾಳೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಿಂತಕಿ ಸುಮಂಗಲಾ ಹದ್ಲಿ ಮಾತನಾಡಿ ಕುಟುಂಬದಲ್ಲಿ ಸಾಮರಸ್ಯ ಮುಖ್ಯ ಇಲ್ಲವಾದಲ್ಲಿ ಅದು ಕುಟುಂಬ ಅನಿಸುವುದಿಲ್ಲ. ಪರಸ್ಪರ ಅರಿತು ನಡೆದರೆ ಬದುಕು ಸುಂದರ ಎಂದರು.
ಪ್ರಾಸ್ತಾವಿಕವಾಗಿ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಗಂಗಮ್ಮ ಮರಾಠಿ ಮಾತನಾಡಿ ಕುಟುಂಬದ ಪ್ರತಿ ಸದಸ್ಯರ ಅರಿತುಕೊಳ್ಳುವಿಕೆ ಮುಖ್ಯ. ಹಿರಿಯರ ಆದರ್ಶ ಮಾರ್ಗದರ್ಶನದಿಂದ ಕುಟುಂಬದ ಸಾಮರಸ್ಯ ಹೆಚ್ಚುವುದೆಂದರು.
ಆರತಿ ಬೆಣ್ಣಿಶೆಟ್ಟಿ ಹಾಗೂ ಮಂಜುಳಾ ಕುಲಕರ್ಣಿ ಸ್ವಾಗತಿಸಿದರು. ಪ್ರೀತಿ ಬೀಳಗಿ ನಿರೂಪಿಸಿದರು. ಮೀನಾಕ್ಷೀ ದುಂಡಸಿ ಮೀನಾಕ್ಷಿ ಅಣ್ಣಿಗೇರಿ, ರತ್ನಾ ಬಿಸನಳ್ಳಿ ಮುಂತಾದವರಿದ್ದರು.