
ವಿಜಯವಾಣಿ ಸುದ್ದಿಜಾಲ ಗದಗ
ಆಂಗ್ಲಭಾಷಾ ಪ್ರಭಾವದಲ್ಲಿ ಕನ್ನಡ ಭಾಷೆ ಸಮಸ್ಯೆ ಎದುರಿಸುತ್ತಿದೆ. ಇಂತಹ ಸವಾಲುಗಳ ನಡುವೆ ಕನ್ನಡ ಭಾಷೆ ಅಭಿವೃದ್ಧಿಗೆ, ಪರಿಹಾರ ಕಂಡುಕೊಳ್ಳುವ ಅಗತ್ಯೆತೆ ಇದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಸೋಮವಾರ 10 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗದಲ್ಲಿ ರಾಜ್ಯದ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಕೃಪಾಂಕ ನೀಡುವ ನಿಯಮದಂತೆ ಕನ್ನಡಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಕೃಪಾಂಕ ನೀಡುವ ಕುರಿತು ಶಾಸಕ ಜಿ.ಎಸ್. ಪಾಟೀಲ ನೇತೃತ್ವದಲ್ಲಿ ನಿರ್ಣಯ ಕೈಗೊಂಡ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರೆ, ಸರ್ಕಾರದ ಮಟ್ಟದಲ್ಲಿ ಸಾಧಕ ಬಾಧಕ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಎಚ್.ಕೆ. ಹೇಳಿದರು.
ಮುಂದುವರಿದು ಮಾತನಾಡಿ, ಕನ್ನಡ ಭಾಷಾ ಅಭಿವೃದ್ಧಿ, ಪ್ರಾಚ್ಯಾವಶೇಷ ಸಂಶೋಧನೆ, ಜಿಲ್ಲೆಯ ಸಾಹಿತ್ಯ, ಪ್ರಾಚ್ಯವಸ್ತು, ಶಾಸನ, ಜಿಲ್ಲೆಯ ಸಮಗ್ರ ಮಾಹಿತಿಗಳನ್ನು ಒಳಗೊಂಡ ಜಿಲ್ಲೆಯ ಅಂತರ್ಜಾಲ ಸೃಷ್ಟಿಸಲು ಜಿಲ್ಲಾ ಮಟ್ಟದ ಸಮಿತಿ ರಚನೆ ಮಾಡಲು ಈಗಾಗಲೇ ನಿರ್ಣಯಿಸಲಾಗಿದೆ. ಜಿಲ್ಲೆಯು ರಾಜ್ಯದ ಸಾಂಸ್ಕೃತಿಕ ರಾಜಧಾನಿ ಆಗಲು ಇದೊಂದು ಮಹತ್ವದ ಬೆಳವಣಿಗೆ. ಸ್ವಾತಂತ್ರ್ಯ ಹೋರಾಟ, ಗೋವಾ ವಿಮೋಚನಾ ಚಳುವಳಿ, ಕರ್ನಾಟಕ ಏಕೀಕರಣ, ನೀರಾವರಿ ಹೋರಾಟದಲ್ಲಿ ಜಿಲ್ಲೆಯು ಮುಖ್ಯಭೂಮಿಕೆ ವಹಿಸಿದೆ ಎಂದು ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲೆಯು ಹಲವು ವೈಶಿಷ್ಟ್ಯತೆಗಳಿಂದ ದೇಶದಲ್ಲಿ ಗುರುತಿಸಿಕೊಂಡಿದೆ. ಜಿಲ್ಲೆಯಲ್ಲಿ ಶಿಲಾಯುಗದ 20 ಕ್ಕೂ ಹೆಚ್ಚು ಸ್ಥಳಗಳು ಸಂಶೋಧನೆಗಳಿಂದ ಬೆಳಕಿಗೆ ಬಂದಿದ್ದು, ಜಿಲ್ಲೆಯ ಇತಿಹಾಸವನ್ನು ಲಕ್ಷಕ್ಕೂ ಅಧಿಕ ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ. 1961ರಲ್ಲಿ ಗದಗ ಜಿಲ್ಲೆಯಲ್ಲಿ ನಡೆದ ರಾಜ್ಯ ಸಾಹಿತ್ಯ ಸಮ್ಮೇಳನದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡು ಮೊದಲ ಬಾರಿ ಹಕ್ಕೊತ್ತಾಯ ಮಾಡಲಾಯಿತು ಎಂದು ಸ್ಮರಿಸಿದರು.
ರೋಣ, ಗಜೇಂದ್ರಗಡ ಪಟ್ಟಣಗಳು ಜಿಲ್ಲೆಯ ಹಿರಿಮೆ ಹೆಚ್ಚಿಸಿವೆ. ದುರ್ಗಸಿಂದ, ಭೀಮಸೇನ ಜೋಶಿ ಅವರಿಂದ ಈ ನಾಡು ಮತ್ತಷ್ಟು ಗರಿಮೆ ಹೊಂದುವಂತೆ ಮಾಡಿದೆ ಎಂದು ತಿಳಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಶಾಸಕ ಜಿ.ಎಸ್. ಪಾಟೀಲ, ರೋಣ ಮತ್ತು ಗಜೇಂದ್ರಗಡ ತಾಲೂಕುಗಳಿಗೆ ಮಲಪ್ರಭಾ ನದಿ ನೀರು ಸಂಪರ್ಕಿಸಬಹುದು. ಈ ನಿರ್ಣಯಕ್ಕೆ ನಾನು ಕಟಿಭದ್ಧನಾಗಿದ್ದೇನೆ. ಗದಗ - ವಾಡಿ ರೈಲು ಮಾರ್ಗ ಕಾರಣಾಂತರಗಳಿಂದ ಬದಲಾಗಿದೆ. ಮೂಲ ಯೋಜನೆ ಬಗ್ಗೆ ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡು ಸಚಿವರಿಗೆ, ಸರ್ಕಾರಕ್ಕೆ ಸಲ್ಲಿಸುವ ಅಗತ್ಯವಿದೆ ಎಂದರು.
ರೋಣ, ಗಜೇಂದ್ರಗಡ ಪಟ್ಟಣದಲ್ಲಿ ವಾಸ್ತುಶಿಲ್ಪಗಳ ಕುರುಗಳಿವೆ. ವಾಸ್ತುಶಿಲ್ಪಗಳನ್ನು ಗುರುತಿಸುವ ಕೆಲಸ ಮಾಡಲಾಗಿದೆ. ಅವುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ಮುನ್ನುಡಿ ಬರೆಯಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ 'ಅಂತರಗಂಗೆ' ಸ್ಮರಣಸಂಚಿಕೆಯನ್ನು ಶಾಸಕ ಜಿ.ಎಸ್. ಪಾಟೀಲ ಬಿಡುಗಡೆಗೊಳಿಸಿದರು. ಸಮ್ಮೇಳನದ ಸರ್ವಾಧ್ಯಕ್ಷರನ್ನು, ಸಾಧಕರನ್ನು ಸನ್ಮಾನಿಸಲಾಯಿತು.
ತೋಂಟದಾರ್ಯ ಸಿದ್ಧರಾಮ ಶ್ರೀಗಳು, ಮೈಸೂರುಮಠದ ವಿಜಯಮಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಮಿಥುನ್ ಪಾಟೀಲ, ಟಿ. ಈಶ್ವರ, ರಾಮಕೃಷ್ಣ ದೊಡ್ಡಮನಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಸಿಇಓ ಭರತ್ ಎಸ್, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಸಾಹಿತಿ ರವೀಂದ್ರನಾಥ ದೊಡ್ಡಮೇಟಿ ಇತರರು ಇದ್ದರು.
*ಸಾಂಸ್ಕೃತಿಕ ರಾಜಧಾನಿ ಘೋಷಣೆ ಆಗ್ರಹ:*
ಗದಗ ಜಿಲ್ಲೆ ನಿಜವಾಗಿಯೂ ಕರ್ನಾಟಕ ರಾಜ್ಯ ಸಂಸ್ಕೃತಿಯ ರಾಜಧಾನಿ ಎಂದು ಘೋಷಣೆ ಆಗಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಆಗ್ರಹಿದರು. ಕುಮಾರವ್ಯಾಸ, ಚಾಮರಸ, ದುರ್ಗಸಿಂಗ, ನಯಸೇನ, ಭೀಮಸೇನ ಜ್ಯೋಶಿ, ಶಾಂತ ಕವಿ ಸೇರಿದಂತೆ ಹಲವು ಕವಿಗಳು ಸೇರಿ ಕಟ್ಟಿದ ನಾಡು ಗದಗ. ನಮ್ಮ ಸಂಸ್ಕೃತಿ, ಭಾಷೆಗಳನ್ನು ಮುಂದಿನ ಪಿಳೀಗೆಗೆ ವರ್ಗಾಯಿಸಲು ಇಂದಿನ ಸಾಹಿತ್ಯ ಸಮ್ಮೇಳನಗಳು ಅವಶ್ಯಕತೆ ಇದೆ ಎಂದರು.
