

ಗದಗ: ಸಾಹಿತ್ಯ, ಸಂಗೀತ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಗದಗ ಜಿಲ್ಲೆಯು ಪುಣ್ಯಕ್ಷೇತ್ರವಾಗಿದೆ ಎಂದು ಪ್ರಸಿದ್ಧ ತಾಳ ಮದ್ದಲೆ ಕಲಾವಿದ ಮೋಹನ ಭಾಸ್ಕರ ಹೆಗಡೆ ಹೇಳಿದರು.
ನಗರದ ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್‌ನಲ್ಲಿ ಶ್ಲಾಘಿಸಿರುವ ಕಲಾಚೇತನ ಸಾಂಸ್ಕೃತಿಕ ಆಕಾಡೆಮಿ ವತಿಯಿಂದ ಜರುಗಿದ ಯಕ್ಷ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಸ್ಕೃತಿಕ, ಸಂಗೀತ, ಸಾಹಿತ್ಯ ಹಾಗೂ ಕಲೆ ಕ್ಷೇತ್ರಗಳು ಆಯಾ ಪ್ರದೇಶಗಳ ವಾತಾವರಣಕ್ಕನುಸಾರವಾಗಿ ವಿಭಿನ್ನವಾಗಿರುತ್ತವೆ. ಅಲ್ಲಿನ ಕಲಾವಿದರನ್ನು, ಕಲೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಅಂದಾಗ ಮಾತ್ರ ಕಲೆ ಹಾಗೂ ಕಲಾವಿದ ಉಳಿಯಲು ಸಾಧ್ಯ ಎಂದು ಹೇಳಿದರು.
ಯಕ್ಷಗಾನದಲ್ಲಿ ಸಂಗೀತ, ಸಾಹಿತ್ಯ, ರಾಗ, ತಾಳವಿದೆ. ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆಯಾಗಿದೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದುದಾಗಿದ್ದು, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ ಎಂದು ಹೇಳಿದರು.
ಚಲನಚಿತ್ರ ನಟ, ರಂಗಭೂಮಿ ಕಲಾವಿದ ರಾಮಕೃಷ್ಣ ನೀರ್ನಳ್ಳಿ ಮಾತನಾಡಿ, ಕಲೆ, ಸಂಗೀತ, ಸಾಹಿತ್ಯಕ್ಕೆ ಹೆಸರಾಗಿರುವ ಗದಗದಲ್ಲೇ ನಾನು ಕಲೆಯನ್ನು ಆರಂಭಿಸಿದ್ದು ಎನ್ನುವುದು ಹೆಮ್ಮೆಯ ವಿಷಯವಾಗಿದೆ. ನಾಟಕ ರಂಗಭೂಮಿಯಲ್ಲಿ ತಿಂಗಳುಗಳ ಕಾಲ ಬಣ್ಣ ಹಚ್ಚಿ ಮೊದಲ ಸಂಪಾದನೆ ಮಾಡಿದ್ದು ಇಲ್ಲೇ ಎಂಬುದು ವಿಶೇಷ ಎಂದು ಹೇಳಿದರು.
ಕಲಾಚೇತನ ಸಾಂಸ್ಕೃತಿಕ ಆಕಾಡೆಮಿ ಅಧ್ಯಕ್ಷ ಡಾ| ಕಾವೆಂಶ್ರೀ ಪ್ರಾಸ್ತಾವಿಕ ಮಾತನಾಡಿದರು.
ಚಲನಚಿತ್ರ ನಟ, ರಂಗಭೂಮಿ ಕಲಾವಿದ ರಾಮಕೃಷ್ಣ ನೀರ್ನಳ್ಳಿ, ವೈದ್ಯರು ಹಾಗೂ ಕ್ರೀಡಾಪಟು ಡಾ| ಜಿ.ಬಿ. ಬಿಡಿನಹಾಳ ಹಾಗೂ ಕುಂದಾಪೂರದ ಯಕ್ಷಗಾನ ಕಲಾವಿದ ರಾಘವೇಂದ್ರ ಮಯ್ಯ ಅವರಿಗೆ ಕಲಾಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೋಟೆಲ್ ಒಡೆಯರ್ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಮುಖ್ಯ ಅತಿಥಿಗಳಾಗಿ ತೋಂಟದಾರ್ಯ ಸಂಸ್ಥಾನಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಎಂ.ಟಿ. ಭಟ್, ಮೃತ್ಯುಂಜಯ ಸಂಕೇಶ್ವರ ಸೇರಿ ಅನೇಕರು ಇದ್ದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು.
ಹಾಲಾಡಿಯ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯಿಂದ ಯಕ್ಷ ಸಂಭ್ರಮ ಯಕ್ಷಗಾನ ಜರುಗಿತು.