ಬಿಎಂಶ್ರೀ ಅವರು ಹಣಕ್ಕಾಗಿ ಕನ್ನಡ ಸೇವೆ ಮಾಡಿದವರಲ್ಲ: ಡಿ.ವಿ. ಬಡಿಗೇರ

06GDG03
Published on

ವಿಜಯವಾಣಿ ಸುದ್ದಿಜಾಲ ಗದಗ

ಕನ್ನಡ ನಾಡು ನುಡಿಗಾಗಿ ಹೋರಾಡುವುದು ಲಾಭದಾಯಕ ಉದ್ಯೋಗ ಎಂದು ಬಹಳ ಜನ ತಿಳಿದಿದ್ದಾರೆ. ಅಲ್ಲದೇ ಈ ಸೇವೆಯ ಹಿಂದೆ ಸ್ವಾರ್ಥ, ಪ್ರಚಾರ ತಂತ್ರವೂ ಅಡಗಿದೆ. ಲಾಭದಾಯಕ ದೃಷ್ಟಿಯಿಂದ ಕನ್ನಡ ಸೇವೆ ಮಾಡುವವರು ನಿಜವಾದ ಕನ್ನಡ ಪ್ರೇಮಿಗಳಲ್ಲ ಎಂದು ಸಾಹಿತಿ ಡಿ.ವಿ. ಬಡಿಗೇರ ಹೇಳಿದರು.

ನಗರದ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಸೋಮವಾರ ಏರ್ಪಡಿಸಿದ ಬಿ.ಎಂ.ಶ್ರೀ ಅವರ 141ನೇ ಜಯಂತಿ ಮತ್ತು 79ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಿ.ಎಂ.ಶ್ರೀ ಬದುಕು ಬರಹ ಕುರಿತು ಮಾತನಾಡಿದ ಅವರು, ನಿಸ್ವಾರ್ಥ ಕನ್ನಡ ಸೇವೆಗಾಗಿ ಬಿ.ಎಂ.ಶ್ರೀ ಅವರಂತಹ ಮಹನೀಯರು ತಮ್ಮ ಜೀವನವನ್ನೆ ಮುಡಿಪಾಗಿಟ್ಟರು. ಆದರೆ ಇಂಥ ಮಹನೀಯರ ಬಗ್ಗೆ ಇಂದಿನ ಪೀಳಿಗೆಯವರಲ್ಲಿ ಪರಿಚಯ ಇಲ್ಲದಿರುವುದು ನಿಜಕ್ಕೂ ಖೇದಕರ ವಿಷಯ. ಶತಮಾನದ ಹಿಂದೆ ಇಂಗ್ಲಿಷ ಗೀತೆಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ ನವೋದಯ ಕಾವ್ಯ ಪರಂಪರೆಗೆ ಬಿ.ಎಂ.ಶ್ರೀ ಭದ್ರ ಬುನಾದಿ ಹಾಕಿದರು. ಅವರು ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪ್ರಾರಂಭಿಸಿ ಕುವೆಂಪು ಅವರಂತಹ ಶಿಷ್ಯರನ್ನು ಕನ್ನಡ ಸೇವೆಗೆ ಅಣಿಗೊಳಿಸಿದರು. ಸ್ವಂತ ಹಣ ನೀಡಿ ಸಾಹಿತ್ಯ ಪರಿಷತ್ತಿನಲ್ಲಿ ಅಚ್ಚುಕೂಟ ಪ್ರಾರಂಭಿಸಿದರು. ಕನ್ನಡ ನಾಡನ್ನೆ ಸುತ್ತಿ ಕನ್ನಡ ಕಟ್ಟುವ ಕಾರ್ಯದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಕರ್ಮಯೋಗಿ ಬಿ.ಎಂ.ಶ್ರೀ ಎಂದರು.

ಕಬ್ಬಿಗರ ಕೂಟದ ಅಧ್ಯ ಮನೋಹರ ಮೇರವಾಡೆ ಮಾತನಾಡಿ, ಇಂದಿ ಯುವಜನತೆಗೆ ಬಿಎಂಶ್ರೀ ಯಾರು ಎಂಬುದೇ ಗೊತ್ತಿಲ್ಲ. ಕಬ್ಬಿಗರ ಕೂಟ ಇಂಥ ಸಾಧಕರನ್ನು ಜನರಿಗೆ ತಿಳಿಸುವ ಕಾರ್ಯ ಕೈಗೊಂಡಿದೆ ಎಂದರು. ಬಸವರಾಜ ಗಣಪ್ಪನವರ, ರತ್ನಕ್ಕ ಪಾಟೀಲ, ಬಿ. ಎಸ್​. ಹಿಂಡಿ, ಆರ್​. ಡಿ. ನಾಡಿಗೇರ, ಸ್ನೇಹ ಜೋಗಿ, ಸಂಜೀವ ಜೋಗಿ, ಚೆನ್ನವಿರ ನಾಲ್ವಾಡ, ಎಂ. ವಿ. ಕೆಂಭಾವಿಮಠ, ಆರ್​. ಡಿ. ನಾಡಿಗೇರ, ಶಿವಾನಂದ ಜೋಗಿ, ಕಲ್ಲಯ್ಯ ಹಿರೇಮಠ, ಎಂ. ಎಸ್​. ಪರ್ವತಗೌಡ್ರ, ಐ. ಟಿ. ಗದಗಿನ, ವಿ. ಎಸ್​. ಹೊಂಬಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net