ತೋಂಟದಾರ್ಯ ಮಠದ ಆವರಣದಲ್ಲಿ ಶ್ರೀರಾಮ ಸೇನೆಯ ಪ್ರತಿಭಟನೆ – 20ಕ್ಕೂ ಹೆಚ್ಚು ಕಾರ್ಯಕರ್ತರು ಬಂಧನ

IMG-20250526-WA0003
Published on
ವಿಜಯವಾಣಿ ಸುದ್ದಿಜಾಲ ಗದಗ
ನಿಷೇಧಾಜ್ಞೆ ನಡುವೆಯೂ ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಇಂದು ಶ್ರೀರಾಮ ಸೇನೆ ಕಾರ್ಯಕರ್ತರು ನುಗ್ಗಿದ ಪರಿಣಾಮ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಪೊಲೀಸ್ ಸರ್ಪಗಾವಲನ್ನು ಮೀರಿ ಮಠದ ಆವರಣಕ್ಕೆ ಪ್ರವೇಶಿಸಿದ ಕಾರ್ಯಕರ್ತರು "ಜೈ ಶ್ರೀರಾಮ" ಘೋಷಣೆ ಕೂಗುತ್ತ ಪ್ರತಿಭಟನೆಯಲ್ಲಿ ತೊಡಗಿದರು.
ಜಾತ್ರೆಯಲ್ಲಿ ಅನ್ಯ ಧರ್ಮ ಮತ್ತು ಇತರ ರಾಜ್ಯಗಳ ವ್ಯಾಪಾರಸ್ಥರಿಗೆ ಅವಕಾಶ ನೀಡಲಾಗಿದ್ದುದಕ್ಕೆ ವಿರೋಧ ವ್ಯಕ್ತಪಡಿಸಿ ಶ್ರೀರಾಮ ಸೇನೆ ಸೋಮವಾರ ಗದಗ ಬಂದ್‌ಗೆ ಕರೆ ನೀಡಿತ್ತು. ಪ್ರತಿಭಟನೆ ವೇಳೆ ತೋಂಟದಾರ್ಯ ಮಠದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ ಪ್ರತಿಭಟನಾಕಾರರು ಮಠದವರೆಗೂ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಎಚ್ಚೆತ್ತ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸುವಲ್ಲಿ ಯಶ್ವಸಿ ಆದರು.
ರಾಜು ಖಾನಪ್ಪನವರ್ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಡಿಆರ್ ವ್ಯಾನ್‌ನಲ್ಲಿ ಠಾಣೆಗೆ ಕರೆದೊಯ್ಯಲಾಯಿತು. ಘಟನೆಯಿಂದ ಗದಗ ನಗರದ ಕೆಲವೆಡೆ ಆತಂಕದ ವಾತಾವರಣ ಸೃಷ್ಟಿ ಆಗಿತ್ತು.
ಕರಪತ್ರ ಹಂಚಿಕೆ: ಬಂಧನ:
ಶ್ರೀರಾಮಸೇನೆಯಿಂದ ನೀಡಿದ್ದ ಬಂದ್ ಕರೆಯನ್ನು ಜಿಲ್ಲಾಡಳಿತ ನಿಷೇಧಿಸಿತ್ತು. 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದರೂ, ಸಾಮಾಜಿಕ ಜಾಲತಾಣಗಳಲ್ಲಿ ಬಂದ್ ಬೆಂಬಲಿಸಿ ಪೋಸ್ಟ್‌ಗಳು ಹರಿದಾಡುತ್ತಿದ್ದವು. ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಶ್ರೀರಾಮಸೇನೆ ಹಾಗೂ ವಿವಿಧ ಸಂಘಟನೆಗಳ ಪ್ರಮುಖ ಮುಖಂಡರನ್ನು ಬೆಳಗಿನ ಜಾವ ವಶಕ್ಕೆ ಪಡೆದಿದ್ದರು.
ಮಠದ ಸುತ್ತ ಬಂದೋಬಸ್ತ:
ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ  ತೋಂಟದಾರ್ಯ ಮಠದ ಸುತ್ತಲೂ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿತ್ತು.ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರಿಕೆಯ ಕ್ರಮ ವಹಿಸಿತ್ತು. ಬೆಳಗ್ಗೆ 7ರ ಹೊತ್ತಿಗೆ ತೋಂಟದಾರ್ಯ ಮಠ ಹಾಗೂ ಗದಗ-ಬೆಟಗೇರಿ ಅವಳಿ ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಪೋಲೀಸ್ ಸರ್ಪಗಾವಲು ವಹಿಸಿತ್ತು.  ಪೊಲೀಸ್ ಬಂದೋಬಸ್ತ್‌ನಲ್ಲಿ ಒಂದು ಎಎಸ್‌ಪಿ, ನಾಲ್ವರು ಡಿವೈಎಸ್‌ಪಿ, ಹತ್ತು ಸಿಪಿಐ, ಹತ್ತು ಪಿಎಸ್ಐ, 200ಕ್ಕೂ ಹೆಚ್ಚು ಸಿಬ್ಬಂದಿ ಸೇರಿದಂತೆ ಎರಡು ಕೆಎಸ್‌ಆರ್‌ಪಿ ತುಕಡಿಗಳು ಹಾಗೂ ಆರು ಡಿಆರ್ ಪಾರ್ಟಿಗಳನ್ನು ನಿಯೋಜಿಸಲಾಗಿತ್ತು.
ಕೋಟ್:
ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೆ ತಂದಿದ್ದು, ಯಾವುದೇ ರೀತಿಯ ಶಾಂತಿಭಂಗ ನಡೆಯಬಾರದೆಂಬ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಲಾಗಿತ್ತು. ಶಾಂತಿಭಂಗ ಮಾಡಿದರ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
- ಬಿ.ಎಸ್. ನೇಮಗೌಡ ಎಸ್ಪಿ ಗದಗ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net