

ಗದಗ: ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಏಳನೇ ಪುಣ್ಯಸ್ಮರಣೆ, ಮರಣವೇ ಮಹಾನವಮಿ ಆಚರಣೆ, ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಅಕ್ಟೋಬರ್ 3ರಂದು ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಶಿವಾನುಭವ ಮಂಟಪದಲ್ಲಿ ನಡೆಯಲಿದೆ ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್.ಪಟ್ಟಣಶೆಟ್ಟರ ತಿಳಿಸಿದರು.
‘ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಡಾ. ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ ಕೃತಜ್ಞತಾ ನುಡಿಗಳನ್ನಾಡುವರು’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸಚಿವ ಎಚ್.ಕೆ.ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಸಿ.ಸಿ.ಪಾಟೀಲ, ಜಿ.ಎಸ್.ಪಾಟೀಲ, ಎಸ್.ವಿ.ಸಂಕನೂರ, ಡಾ. ಚಂದ್ರು ಲಮಾಣಿ, ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ರಾಮಕೃಷ್ಣ ದೊಡ್ಡಮನಿ ಅತಿಥಿಯಾಗಿ ಭಾಗವಹಿಸುವರು’ ಎಂದು ತಿಳಿಸಿದರು.
ಮುಂಡರಗಿ ಬೈಲೂರು ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಶಾಂತಲಿಂಗ ಸ್ವಾಮೀಜಿ, ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಪ್ರಭು ಸ್ವಾಮೀಜಿ, ಕೋರಣೇಶ್ವರ ಸ್ವಾಮೀಜಿ ಸಮ್ಮುಖ ವಹಿಸುವರು ಎಂದು ತಿಳಿಸಿದರು.
ಇದೇ ವೇಳೆ ತೋಂಟದ ಸಿದ್ಧರಾಮ ಸ್ವಾಮೀಜಿ ಅವರು ಕನ್ನಡಕ್ಕೆ ಅನುವಾದಿಸಿರುವ ‘ತೌಲನಿಕ ಧರ್ಮದರ್ಶನ’ ಗ್ರಂಥ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
ಪ್ರಮುಖರಾದ ಕೆ.ಎಸ್.ಚೆಟ್ಟಿ, ಡಾ. ಧನೇಶ್ ದೇಸಾಯಿ, ಶೇಖಣ್ಣ ಕವಳಿಕಾಯಿ, ಬಾಲಚಂದ್ರ ಭರಮಗೌಡ್ರ, ಚನ್ನಯ್ಯಜ್ಜ ಹಿರೇಮಠ ಇದ್ದರು.
ಡಾ.ಎಂ.ಎಂ.ಕಲಬುರ್ಗಿಗೆ ಮರಣೋತ್ತರ ರಾಷ್ಟ್ರೀಯ ಪ್ರಶಸ್ತಿ: ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ನೆನಪಿನಲ್ಲಿ ನೀಡುವ ‘ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ಯನ್ನು ಈ ಬಾರಿ ಮರಣೋತ್ತರವಾಗಿ ಡಾ. ಎಂ.ಎಂ.ಕಲಬುರ್ಗಿ ಅವರಿಗೆ ನೀಡಲಾಗುವುದು ಎಂದು ಎಸ್.ಎಸ್.ಪಟ್ಟಣಶೆಟ್ಟರ ತಿಳಿಸಿದರು.
‘ಅಕ್ಟೋಬರ್ 3ರಂದು ನಡೆಯುವ ಸಿದ್ಧಲಿಂಗ ಶ್ರೀಗಳ ಏಳನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಡಾ. ಎಂ.ಎಂ.ಕಲಬುರ್ಗಿ ಅವರ ಪತ್ನಿ ಉಮಾದೇವಿ ಎಂ.ಕಲಬುರ್ಗಿ ಪ್ರಶಸ್ತಿ ಸ್ವೀಕರಿಸುವರು. ಪ್ರಶಸ್ತಿಯು ₹5 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ’ ಎಂದು ತಿಳಿಸಿದರು.