

ವಿಜಯವಾಣಿ ಸುದ್ದಿಜಾಲ ಗದಗ
ಸಂಗೀತವು ಮಾನವ ಸಮಾಜದ ಸಂಸತಿಯಾಗಿದೆ. ಸಂಗೀತಕ್ಕೆ ಪಂಚಮವೇದ ಎನ್ನುತ್ತಾರೆ. ಸಂಗೀತ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ತೋಂಟದ ಸಿದ್ದರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಏರ್ಪಡಿಸಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಗದುಗಿನ ಪಂಚಾರಿ ಗವಾಯಿಗಳು ಹಾಗೂ ಕವಿ ಪುಟ್ಟರಾಜರು ಸಂಗೀತವನ್ನು ಕರಗತ ಮಾಡಿಕೊಂಡಿದ್ದರು. ಪುಟ್ಟರಾಜರು ತ್ರಿಭಾಷಾ ಕವಿಗಳಾಗಿದ್ದರು. ಅಂಧ ಅನಾಥ ಮಕ್ಕಳಿಗೆ ಸಂಗೀತ ವಿದ್ಯೆ ನೀಡುವ ಮೂಲಕ ಅವರ ಬಾಳಿಗೆ ದಾರಿದೀಪವಾದರು. ಪ್ರತಿಯೊಂದು ಕಾರ್ಯಕ್ರಮದಲ್ಲಿ ಸಂಗೀತ ಬೇಕೇ ಬೇಕು. ಸಂಗೀತವಿಲ್ಲದೆ ಪ್ರಾರಂಭವಾಗುವುದೆ ಇಲ್ಲ. ಶರಣರ ವಚನಗಳನ್ನು ಮೊದಮೊದಲು ಹಾಡಲು ಬರುವುದಿಲ್ಲ ಎನ್ನುತ್ತಿದ್ದರು. ಈಗ ಶರಣರ ವಚನಗಳನ್ನು ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಳ್ಳುತ್ತವೆ. ಬಸವಣ್ಣನವರು ನಾದ ಪ್ರಿಯ ಶಿವನೆಂಬರು ನಾದಪ್ರಿಯನಲ್ಲ. ಭಕ್ತಿ ಪ್ರಿಯ ನಮ್ಮ ಕೂಡಲಸಂಗಮದೇವ ಎಂದರು. ಮೀರಾಬಾಯಿ ಸಂಗೀತವನ್ನು ಭಕ್ತಿಯಿಂದ ಹಾಡಿದಾಗ ಶಿವನನ್ನು ಕಂಡಳು. ಭೌತ ಪ್ರಪಂಚವನ್ನ ನೋಡುವುದು ವಿಜ್ಞಾನ. ಅಂತರಂಗವನ್ನು ಅರಿಯುವುದು ಆಧ್ಯಾತ್ಮ. ಸಂಗೀತಕ್ಕೆ ಮನಸೋಲದ ಮನಸ್ಸುಗಳಿಲ್ಲ. ಸಂಗೀತವನ್ನು ಕಡ್ಡಾಯವಾಗಿ ಶಾಲಾ ಕಾಲೇಜು ಮಕ್ಕಳಿಗೆ ಬೋಧಿಸಬೇಕು ಎಂದು ಹೇಳಿದರು.
ನಿವೃತ್ತ ಮುಖ್ಯೋಪಾಧ್ಯಾಯ ರಮೇಶ ನವಲೆಯರು ಮಾತನಾಡಿ, ಸಿ. ಎನ್. ಶಾಸ್ತ್ರಿ ಮಾತನಾಡಿ, 1932 ರಲ್ಲಿ ರೇಡಿಯೋದಲ್ಲಿ ಮೊದಲು ವಚನಗಳನ್ನು ಹಾಡಲಾಯಿತು. ನಂತರ ಮಲ್ಲಿಕಾರ್ಜುನ ಮನ್ಸೂರ್ರವರು "ಅಕ್ಕಾ ಕೇಳವ್ವ ನಾನೊಂದು ಕನಸು ಕಂಡೆ' ಹಾಡು ತುಂಬಾ ಪ್ರಸಿದ್ಧಿಯನ್ನು ಪಡೆಯಿತು. ಸಂಗೀತಕ್ಕೆ ಒಲಿಯದ ಮನವಿಲ್ಲ. ಬ್ರಹ್ಮಾಂಡ ಸೃಷ್ಟಿಯಲ್ಲಿ ಓಂಕಾರ ನಾದ ಹೊಮ್ಮಿತು. ಸೃಷ್ಟಿಯಲ್ಲಿನ ಕಲ್ಲು, ಮಣ್ಣು, ಗಿಡ, ಎಲೆ, ಬಳ್ಳಿ, ಗಾಳಿ, ನೀರು, ಹಾರುವ ಹಕ್ಕಿ, ಎಲ್ಲದರಲ್ಲಿಯೂ ಸಂಗೀತವಿದೆ ಎಂದರು.
ಅಂದಾನಪ್ಪ ವಿಭೂತಿ, ಬಸವರಾಜ ಸಿಂಧಗಿಮಠ, ವೈಷ್ಣವಿ ಗೂಳಿ, ಭೀಮಸಿಂಗ ರಾಠೋಡ, ಶ್ರೀಕಾಂತ ಚಿಮ್ಮಲ, ಭೀಮಪ್ಪ ಹಳ್ಳೇಗೋಳ, ಬಾಲಚಂದ್ರ ಭರಮಗೌಡ್ರ, ಉಮೇಶ ಪುರದ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ ಇತರರು ಇದ್ದರು.