

ವಿಜಯವಾಣಿ ಸುದ್ದಿಜಾಲ ಗದಗ
ಅರ್ಧಕ್ಕೆ ಕಾಮಗಾರಿ ಸ್ತಗಿತಗೊಂಡಿರುವ ಪುಟ್ಟರಾಜ ಸ್ಮಾರಕ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ತ್ವರಿತವಾಗಿ ವರದಿ ಸಲ್ಲಿಸಬೇಕು ಎಂದು ಗುರುವಾರ ಜೆಡಿಎಸ್ ಪಕ್ಷದ ನಿಯೋಗ ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿ ಮನವಿ ಮಾಡಿತು. ಇದೇ ಸಂದರ್ಭದಲ್ಲಿ ಸಾಂಕೇತಿಕ ಭಿಕ್ಷಾಟನೆಯಲ್ಲಿ ಜಮೆಯಾದ 2510 ರೂಪಾಯಿಗಳನ್ನು ಡಿ.ಡಿ ಮುಖಾಂತರ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಬಜೆಟ್ನಲ್ಲಿ ಪುಟ್ಟರಾಜ ಸ್ಮಾರಕ ಭವನ ರ್ಪೂಣಗೊಳಿಸಲು ಅಗತ್ಯ ಇರುವ ಬಾಕಿ ಹಣವನ್ನುಹಣವನ್ನು ನೀಡಬೇಕೆಂದು ಒತ್ತಾಯಿಸಲಾಯಿತು.
ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ ಒಬ್ಬ ಮಹಾನ್ ಚೇತನ, ದೀನ ದಲಿತ, ಅಂದ, ಅನಾಥರ ಬಾಳಿಗೆ ಬೆಳಕಾಗಿದ ಪಂಡಿತ ಪುಟ್ಟರಾಜ ಗವಾಯಿಗಳವರ ಸ್ಮಾರಕ ಭವನ ಹಾಳು ಕೊಂಪೆ ಆಗುತ್ತಿದೆ. ಗವಾಯಿಗಳನ್ನು ಆರಾಧಿಸುವ ಲಕ್ಷಾಂತರ ಭಕ್ತರಿಗೂ ಕೂಡ ಇದು ಅಪಮಾನ ಮಾಡಿದಂತಾಗಿದೆ. ಈ ಸ್ಮಾರಕ ಭವನವು ಗದಗಿನ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸ್ಮಾರಕ ಭವನ ರ್ಪುಣ ಆಗುವರೆಗೂ ಜೆಡಿಎಸ್ ಪಕ್ಷ ಹೋರಾಟ ನಿಲ್ಲಿಸದು ಎಂದು ಹೇಳಿದರು.
ಕೆ. ಎಫ್ ದೊಡ್ಡಮನಿ, ಪುಲಿಕೇಶಿ ಗಾಳಿ, ಪ್ರಫೈಲ್ ಪುಣೆಕರ್, ಎಂ. ಎಸ್. ಪರ್ವತಗೌಡ್ರ, ರಮೇಶ ಹುಣಸಿಮರದ, ಸಂತೋಷ ಪಾಟೀಲ, ಜಿ. ಕೆ. ಕೊಳ್ಳಿಮಠ, ಶರಣಪ್ಪ ಹೂಗಾರ, ವೀರಪ್ಪ ಜಿರಲಿ, ಸಿದ್ದಲಿಂಗಯ್ಯ ಹೊಂಬಾಳಿ ಮಠ, ಮಂಜುಳಾ ಮೇಟಿ ಇದ್ದರು.