ಡಿಕೆಶಿ ಓಲೈಕೆಗಾಗಿ ಪತ್ರ ರಾಜಕಾರಣ: ವೆಂಕನಗೌಡ ಗೋವಿಂದಗೌಡ್ರ

25GDG06
Published on
ಗದಗ:
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾದರೆ ಅವರ ಸಚಿವ ಸಂಪುಟದಲ್ಲಿಯೂ ಮಂತ್ರಿ ಸ್ಥಾನ ಭದ್ರಪಡಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಎಚ್.ಕೆ. ಪಾಟೀಲರು ಪತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಆರೋಪಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ವಿಚಾರವಾಗಿ ಸಚಿವ ಎಚ್ .ಕೆ. ಪಾಟೀಲರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದ ವಿಚಾರವಾಗಿ ಕುಮಾರಸ್ವಾಮಿ  ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಪತ್ರ ಬರೆದ ಉದ್ದೇಶವನ್ನೂ ಸ್ಪಷ್ಟಪಡಿಸಿಲ್ಲ ಎಂದು ಆಪಾದಿಸಿದರು.
ಸಚಿವ ಎಚ್ .ಕೆ. ಪಾಟೀಲರಿಗೆ ಅಕ್ರಮ ಗಣಿಗಾರಿಕೆ ಬಗ್ಗೆ ನಿಜವಾಗಿಯೂ ಕಳಕಳಿ ಇದ್ದಿದ್ದರೆ, ಅಧಿಕಾರಕ್ಕೆ ಬಂದ ತಕ್ಷಣವೇ ಕ್ರಮ ಕೈಗೊಳ್ಳಬಹುದಿತ್ತು. ಎರಡು ವರ್ಷ ಏಕೆ ಮೌನವಾಗಿದ್ದರು. ಆದರೆ ಮುಖ್ಯಮಂತ್ರಿ ಬದಲಾವಣೆ ಸಂದರ್ಭದಲ್ಲೇ ಈ ಪತ್ರ ಬರೆದಿರುವುದರ ಹಿಂದೆ ರಾಜಕೀಯ ಉದ್ದೇಶ ಅಡಗಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಧಾರ್ಮಿಕ ಮನೋಭಾವ ಹೊಂದಿರುವ ಕುಮಾರಸ್ವಾಮಿ ಅವರು, ಸಂದರ್ಭಕ್ಕೆ ಅನುಸಾರವಾಗಿ ರಾವಣ, ಕುಂಭಕರ್ಣ, ರಾಮಾಯಣ ಉಲ್ಲೇಖಿಸಿದ್ದಾರೆ. ಅವು ನಾಟಕದ ಪಾತ್ರಗಳಲ್ಲ. ದೇವರ, ಧರ್ಮದ ಬಗ್ಗೆ ಅಪಾರ ಶ್ರದ್ಧೆ ಹೊಂದಿದ ಕುಮಾರಸ್ವಾಮಿ, ಈವರೆಗೆ ಯಾವುದೇ ದೇವಸ್ಥಾನದ ಗೋಡೆ ಒಡೆದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.
ಕಾನೂನು ಸಚಿವರ ತವರು ಜಿಲ್ಲೆಯ ಅನೇಕ ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ದಾಳಿ ನಂತರವೂ ಅದೇ ಜಾಗದಲ್ಲಿ ಮುಂದುವರಿದಿದ್ದಾರೆ. ಗದಗ ಮತಕ್ಷೇತ್ರದ ಜನರ ಹಣ ಸುಲಿಗೆ ಮಾಡಿದ ಅಧಿಕಾರಿಗಳನ್ನು ಮೊದಲು ವರ್ಗಾವಣೆ ಮಾಡಿ. ಆ ಮೇಲೆ ಗಣಿ ಅಕ್ರಮದಿಂದ ರಾಜ್ಯಕ್ಕೆ ಬರಬೇಕಾದ ಹಣ ವಾಪಸ್ ತರುವ ಪ್ರಯತ್ನ ಮಾಡಿ ಎಂದು ಗೋವಿಂದಗೌಡ್ರ ಸಲಹೆ ನೀಡಿದರು.
ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿ ಇಂದಿಗೆ 50 ವರ್ಷಗಳಾಗಿವೆ. ತುರ್ತು ಪರಿಸ್ಥಿತಿಯ ಮೂಲಕ ಸರ್ವಾಧಿಕಾರಿ ಆಡಳಿತ ನಡೆಸಿದರು. ಆದರೂ ಕಾಂಗ್ರೆಸ್ ಆ ಬಗ್ಗೆ ವಿಷಾಧ ವ್ಯಕ್ತಪಡಿಸಿಲ್ಲ. ದೇಶದ ಜನರ ಕ್ಷಮೆ ಕೇಳಿಲ್ಲ. ಇಷ್ಟಾಗಿಯೂ ಕಾಂಗ್ರೆಸ್ಸಿಗರು ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಎಸ್. ಪರ್ತಗೌಡ್ರ, ಬಸವರಾಜ ಅಪ್ಪಣ್ಣವರ, ರಮೇಶ ಹುಣಸಿಮರದ, ಸಂತೋಷ ಪಾಟೀಲ, ಅಭಿಷೇಕ ಕಂಬಳಿ, ಪ್ರಫುಲ್ ಪುಣೇಕರ್ , ಹರೀಶ ಹಡಗಲಿಮಠ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net