

ವಿಜಯವಾಣಿ ಸುದ್ದಿಜಾಲ ಗದಗ
ಕಾಂಗ್ರೆಸ್ ಷಡ್ಯಂತ್ರದಿಂದ ಜಿಲ್ಲೆಯಲ್ಲಿ ವಕ್ಫ ಪ್ರಕರಣ ಬೆಳಕಿಗೆ ಬರುತ್ತಿವೆ. ರೈತರಲ್ಲಿ ಭಯದಲ್ಲಿದ್ದಾರೆ. ವಕ್ಫ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹೋರಾಡಲು ರೈತರಿಗೆ ಕಾನೂನು ನೆರವನ್ನು ಜೆಡಿಎಸ್ ಪಕ್ಷ ಉಚಿತವಾಗಿ ನೀಡಲಿದೆ ಎಂದು ರಾಜ್ಯ ಜೆಡಿಎಸ್ ವಕ್ತಾರ ವೆಂಕನಗೌಡ್ರ ಗೋವಿಂದಗೌಡ ಹೇಳಿದರು.
ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ತುಷ್ಟೀಕರಣ ರಾಜಕಾರಣ ನಡೆಯುತ್ತಿದೆ. ಜಿಲ್ಲೆಯ ರೈತರಲ್ಲಿ ಭಯ ಹುಟ್ಟುತ್ತಿದೆ. ಕಾಂಗ್ರೆಸ್ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಜಮ್ಮಿರ್ ಅಹಮ್ಮದ ಅವರನ್ನು ಸಂಪುಟದಿಂದ ಕೈಬಿಡಬೇಕು. ಅವರೇ ಸಮಾಜದ ಸ್ವಾಸ್ಥ$್ಯ ಕೆಡೆಸುತ್ತಿದ್ದಾರೆ. ಏಕಾಏಕಿ ರೈತರ ಜಮೀನು ನುಂಗುವ ಹಿಂದೆ ಜಮ್ಮೀರ್ ಅಹ್ಮದ ಅವರ ಆಸಕ್ತಿ ಏನಿದೆ. ಮೊದಲು ವಕ್ಫ ಆಸ್ತಿ ನುಂಗಿದ ಕಾಂಗ್ರೆಸ್ ನಾಯಕರು ಆಸ್ತಿಗಳನ್ನು ಮರಳಿ ವಕ್ಫ ಮಂಡಳಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ವಸ್ತುಸಂಗ್ರಹಾಲಯ ಅನಗತ್ಯ ವೆಚ್ಚ:
ನಗರದ ವಸ್ತುಸಂಗ್ರಹಾಲಯ ನವೀಕರಣಕ್ಕೆ 6 ಕೋಟಿಗೂ ಅಧಿಕ ವೆಚ್ಚಕ್ಕೆ ಸಚಿವ ಎಚ್.ಕೆ. ಪಾಟೀಲ ಆಡಿಗಲ್ಲು ಹಾಕಿದ್ದಾರೆ. ವಸ್ತು ಸಂಗ್ರಹಾಲಯದ ವ್ಯಾಪ್ತಿಯೇ 6000 ಚದರ ಮೀಟರ್ ಇದೆ. ಲೆಕ್ಕದ ಪ್ರಕಾರ ಒಂದು ಚದರ ಅಡಿಗೆ 12000 ರೂ. ಖರ್ಚು ಹಾಕಲಾಗಿದೆ. ಸಂಗ್ರಹಾಲಯಕ್ಕೆ ಕಾಂಗ್ರೆಸ್ ಬೆಳ್ಳಿ ಲೇಪನ ಮಾಡುತ್ತದೆಯೇ? ಪುಟ್ಟರಾಜ ಗವಾಯಿಗಳ ಭವನಕ್ಕೆ ಅನುದಾನ ಇಲ್ಲದೇ ಕಾಮಗಾರಿ ಅರ್ಧಕ್ಕೆ ನಿಂತಿದೆ. ಭವನಕ್ಕೆ ಅನುದಾನ ಒದಗಿಸುವ ಬದಲಾಗಿ ಹಣ ಲಪಟಾಯಿಸುವ ಉದ್ದೇಶದಿಂದ ಇಂತಹ ಯೋಜನೆ ತರಲಾಗುತ್ತಿದೆ. ಸಂಗ್ರಹಾಲಯಕ್ಕೆ ಜನರೇ ಬರುವುದಿಲ್ಲ. ಹಾಗಿದ್ದರೂ ಕೋಟ್ಯಂತರ ರೂ. ವೆಚ್ಚ ಭರಿಸುವ ಉದ್ದೇಶ ಏನು? ಎಂದು ಪ್ರಶ್ನಿಸಿದರು.
ಗಿರೀಶ ಸಂಶಿ, ಪಿ.ಎಫ್ ದೊಡ್ಡಮನಿ, ಬಸವರಾಜ ಅಪ್ಪಣ್ಣ, ಸಂತೋಷ ಪಾಟೀಲ ಇತರರು ಇದ್ದರು.