ಕಾಂಗ್ರೆಸ್ ಸರ್ಕಾರ, ಇದೊಂದು ಉದ್ರಿ ಸರ್ಕಾರ: ವಿ.ಆರ್.ಗೋವಿಂದಗೌಡ್ರ

09GDG06
Published on

ಗದಗ :  ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ಇದೊಂದು ಉದ್ರಿ ಸರ್ಕಾರವಾಗಿದ್ದು, ಎಲ್ಲರಿಗೂ ಉದ್ರಿ ಹೇಳುತ್ತಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್.ಗೋವಿಂದಗೌಡ್ರ ಲೇವಡಿ ಮಾತನಾಡಿದರು. 

ಮಂಗಳವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 13 ತಿಂಗಳು ಕಳೆದಿದೆ. ಆದರೆ, ಇದುವರೆಗೂ ಕೂಡ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಗೃಹಲಕ್ಷ್ಮಿ ಯೋಜನೆ, ಸರ್ಕಾರಿ ವೇತನ, ಸರ್ಕಾರಿ ಗುತ್ತಿಗೆದಾರರ ಹಣ ಬಿಡುಗಡೆ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ನೀಡದೇ ಎಲ್ಲವನ್ನೂ ಮಾಡುತ್ತೇವೆ ಎಂದು ಉದ್ರಿ ಹೇಳುತ್ತಲೇ ಹೋಗುತ್ತಿದ್ದಾರೆ. 

ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ 40% ಸರ್ಕಾರ ಎಂದು ಆರೋಪ ಮಾಡಿದ್ದರು. ಕಾಂಗ್ರೆಸ್ ಸರ್ಕಾರ 80 % ಸರ್ಕಾರವಾಗಿದೆ. ಮುಡಾ ಹಗರಣ ಸೇರಿದಂತೆ ದಿನದಿಂದ ದಿನಕ್ಕೆ ಅನೇಕ ಹಗರಣಗಳು ಬೆಳಕಿಗೆ ಬರುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಆರೋಗ್ಯ ವ್ಯವಸ್ಥೆ ರಾಜ್ಯದಲ್ಲಿ ಸಂಪೂರ್ಣವಾಗಿ ಹಾಳಾಗಿದೆ ಎಂದು ಸರ್ಕಾರದ ವಿರುದ್ಧ ದಾಖಲೆಗಳ ಸಮೇತ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿನ ಎಲ್ಲ ರಸ್ತೆಗಳು ಹದಗೆಟ್ಟಿವೆ. ಜೊತೆಗೆ, ಗ್ಯಾರಂಟಿ ನೆಪ ಮಾಡಿಕೊಂಡು ರಾಜ್ಯದ ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಬೆಲೆ ಏರಿಕೆ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಹಾಲಿನ ದರವನ್ನು ಏರಿಕೆ ಮಾಡಿ ಕೇವಲ ಎರಡು ದಿನದಲ್ಲಿ ಸಾವಿರಾರು ಕೋಟಿ ಹಣವನ್ನು ಸಿದ್ದರಾಮಯ್ಯನವರ ಸರ್ಕಾರ ಲೂಟಿ ಮಾಡಿದೆ. ಜೊತೆಗೆ, ರೈತರಿಗೆ ಇದುವರೆಗೂ ನಯಾ ಪೈಸೆ ಪ್ರೋತ್ಸಾಹ ಧನ ನೀಡಿಲ್ಲ. ಒಂದು ವರ್ಷದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಶೂನ್ಯವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ ಅಪ್ಪಣ್ಣವರ, ಎಮ್ ಎಸ್ ಪರ್ವತಗೌಡ್ರ, ರಮೇಶ್ ಹುಣಸಿಮರದ, ಮರಿಯಪ್ಪ ಬಳ್ಳಾರಿ, ಪ್ರಫೂಲ್ ಪುಣೇಕರ ಉಪಸ್ಥಿತರಿದ್ದರು.

2024 ರ ಸಾರ್ವತ್ರಿಕ ಲೋಕಸಭೆ ಚುನಾವಣೆ ಸಮಯದಲ್ಲಿ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಗೆದ್ದು ಕೇಂದ್ರ ಸಚಿವರಾದರೇ ಭಕ್ತರಿಗೆ 1008 ಹೋಳಿಗೆ ಊಟ ಹಾಕಿಸಲಾಗುವುದು ಎಂದು ಗುರು ಪುಟ್ಟರಾಜ ಕವಿ ಗವಾಯಿಗಳಿಗೆ ಹರಕೆ ಮಾಡಿಕೊಂಡಿದ್ದೆವು ಈಗ ಕುಮಾರಸ್ವಾಮಿ ಜಯಿಸಿ ಕೇಂದ್ರ ಮಂತ್ರಿ ಆಗಿದ್ದಾರೆ. ಅದಕ್ಕಾಗಿ ಜುಲೈ 18 ರಂದು ಪುಟ್ಟರಾಜ ಗವಾಯಿ ಮಠದಲ್ಲಿ ಹರಕೆ ತೀರಿಸುವ ಕಾರ್ಯ ಮಾಡಲಾಗುತ್ತದೆ ಹಾಗೂ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿಸಲಾಗುವುದು ಎಂದು ವ್ಹಿ ಆರ್ ಗೋವಿಂದಗೌಡ್ರ ಮಾಹಿತಿ ನೀಡಿದರು.

ಅಭಿಪ್ರಾಯ ಸಂಗ್ರಹ: ಗದಗ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸಬೇಕೆಂದು ಕೇಂದ್ರ ಸಚಿವ ಎಚ್‍. ಡಿ ಕುಮಾರಸ್ವಾಮಿ ಅವರಿಗೆ ನಾನು ಮನವಿ ಸಲ್ಲಿಸಿದ್ದೆ. ಇದಕ್ಕೆ ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಅದಕ್ಕಾಗಿ ಗದಗ ಜಿಲ್ಲೆಯಲ್ಲಿ ಯಾವ ರೀತಿಯ ಕೈಗಾರಿಕೆ ಸ್ಥಾಪನೆ ಮಾಡಬೇಕು, ಯಾವುದು ಮಾಡಿದರೆ ಸೂಕ್ತ ಎನ್ನುವ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ಅಭಿಪ್ರಾಯ ಸಂಗ್ರಹಿಸಲಾಗುವುದು. ಸಾರ್ವಜನಿಕರಿಂದ ಸಂಗ್ರಹವಾಗುವ ಅಭಿಪ್ರಾಯದ ಆಧಾರದಲ್ಲಿ ವಿಶೇಷವಾದ ಮನವಿಯನ್ನು ಸಿದ್ಧಪಡಿಸಿಕೊಂಡು ಕೇಂದ್ರ ಸಚಿವರಿಗೆ ಸಲ್ಲಿಸಲಾಗುವುದು ಅದಕ್ಕಾಗಿ ಜಿಲ್ಲೆಯ ಸಾರ್ವಜನಿಕರು ಈ ಅಭಿಯಾನದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ವ್ಯಾಟ್ಸಪ್ ಹಾಗೂ ಇಮೇಲ್ ಮುಖಾಂತರ ಅಭಿಪ್ರಾಯವನ್ನು ಕಳಿಸಬೇಕು. ಅದಕ್ಕಾಗಿ ಸಾರ್ವಜನಿಕರು ಈ ಕೆಳಕಂಡ ವಿಳಾಸಕ್ಕೆ ತಮ್ಮ ಮಾಹಿತಿಯನ್ನು ಜುಲೈ 20ರ ಒಳಗೆ ಸಲ್ಲಿಸಬೇಕು ಎಂದು ಗೋವಿಂದಗೌಡ್ರ ವಿನಂತಿಸಿದರು.  

ಜುಲೈ 12ಕ್ಕೆ ಉದ್ರಿ ಸರ್ಕಾರದ ವಿರುದ್ದ ಪ್ರತಿಭಟನೆ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ನೀತಿ ಹಾಗೂ ವಿವಿಧ ಇಲಾಖೆಗಳಲ್ಲಿ ದುಡಿಯುವ ವರ್ಗಕ್ಕೆ ವೇತನ ನೀಡದೆ ಇರುವುದನ್ನು ಖಂಡಿಸಿ ಗದಗ ಜಿಲ್ಲಾ ಜೆಡಿಎಸ್ ಘಟಕದಿಂದ ಜುಲೈ 12 ರಂದು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು.

..ವಿ.ಆರ್.ಗೋವಿಂದಗೌಡ್ರ. ಜೆಡಿಎಸ್ ರಾಜ್ಯ ವಕ್ತಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net