

ವಿಜಯವಾಣಿ ಸುದ್ದಿಜಾಲ ಗದಗ
ಜನತಾ ಸದನದಲ್ಲಿ ನಡೆದ ಚರ್ಚೆಗಳನ್ನು, ಜನರ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಕೊಂಡೊಯ್ದುರೆ ಪರಿಹಾರ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಇದೆ. ಸದನದಿಂದ ಹೊಸ ಮನ್ವಂತರ ಶುರುವಾಗಿದೆ ಎಂದು ಸಭಾ ನಾಯಕ ಅನಿಲ್ ಮೆಣಸಿನಕಾಯಿ ಹೇಳಿದರು.
ಜನತಾ ಸದನದ ಕೊನೆಯದಿನ ಭಾನುವಾರ ವಂದನಾ ನಿರ್ಣಯ ಭಾಷಣದ ಮೇಲೆ ಮಾತನಾಡಿದ ಅವರು, ಸದನಕ್ಕೆ ಒಂದು ತೂಕ ಬಂದಿದೆ. ನೂತನ ವಿಷಯಗಳು ಚರ್ಚೆಯಾಗಿವೆ. ಪ್ರತಿ ಪಕ್ಷದ ನಾಯಕರು ಪ್ರಶ್ನೆ ಮಾಡುವುದರಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚುತ್ತದೆ ಎಂದು ಅನಿಲ್ ಹೇಳಿದರು.
ಇಲ್ಲಿ ನಡೆದಿರುವ ಸಮಸ್ಯೆಗಳ ಕುರಿತು ರೆಸ್ಯೂಲ್ಯುಷನ್ ಮಾಡಿ, ಸಭಾಧ್ಯಕ್ಷರ, ಸಭಾ ನಾಯಕರ ಸಹಿಯೊಂದಿಗೆ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಮುಂದಿನ ಅಧಿವೇಶನ ಒಳಗಾಗಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
*ಫಾರ್ಮ ನಂ 3 ಸಮಸ್ಯೆ ಲೋಕಾಯುಕ್ತಕ್ಕೆ: ಉಷಾ ದಾಸರ*
ನಿವೇಶನಗಳಿಗೆ ಅಕ್ರಮವಾಗಿ ಫಾರಂ ನಂ.3 ವಿತರಣೆ ಮಾಡಲಾಗುತ್ತಿದೆ. ನಗರಸಭೆ ಸದಸ್ಯರು ಅರ್ಜಿಗಳನ್ನು ತುರ್ತು ವಿಲೇವಾರಿ ಮಾಡಿ ಫಾರಂ ನಂ 3 ಕೊಡುತ್ತೀರಿ. ಸಾಮಾನ್ಯ ಜನರ ಅರ್ಜಿಗಳನ್ನು 6 ತಿಂಗಳು ಕಾಯಿಸುತ್ತೀರಿ? 5000 ರೂ. ಲಂಚ ನೀಡಿದರೆ ಫಾರಂ ನಂ.3 ಒದಗಿಸುತ್ತೀರಿ ಎಂದು ವಿರೋಧ ಪಕ್ಷದ ಸದಸ್ಯ ರವಿಕಾಂತ ಅಂಗಡಿ ಆಡಳಿತ ಪಕ್ಷವನ್ನು ಪ್ರಶ್ನಿಸಿದರು. ರವಿಕಾಂತ ಅಂಗಡಿ ಗೆ ಹಲವು ಸದಸ್ಯರು ಬೆಂಬಲಿಸಿದರು. ಇದಕ್ಕೆ ಉತ್ತರಿಸಿದ ಆಡಳಿತ ಪಕ್ಷದ ಸದಸ್ಯೆ ಉಷಾ ದಾಸರ ಫಾರಂ ನಂ. 3 ಪ್ರಕರಣವನ್ನು ಲೋಕಾಯುಕ್ಕೆ ನೀಡುವುದಾಗಿ ಉತ್ತರಿಸಿದರು.
ಬಾಕ್ಸ್:
ಬಗರ್ ಹುಕುಂ ಸಾಗುವಳಿದಾರ ರೈತರು ಹಕ್ಕುಪತ್ರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಮುಂದಾಗಿದ್ದ ವೇಳೆ ಗೋಲಿಬಾರ್ ನಡೆಸಲಾಗಿತ್ತು. ಈ ವೇಳೆ ಸೊರಟೂರ, ರಣತೂರ ಮತ್ತು ಜಲ್ಲಿಗೇರಿ ಗ್ರಾಮದ ಮೂವರು ರೈತರು ಗುಂಡೇಟಿಗೆ ಬಲಿಯಾಗಿದ್ದರು. ಅಂದು ಶಾಸಕರಾಗಿದ್ದ ಇಂದಿನ ನಿಕಟಪೂರ್ವ ಸಿಎ. ಬಿ.ಎಸ್.ಯಡಿಯೂರಪ್ಪ ಸಾಂತ್ವನ ಹೇಳಿದ್ದರು. ಆದರೆ, ಸರ್ಕಾರದಿಂದ ಸಿಗಬೇಕಾದ ಪರಿಹಾರ ಇನ್ನೂವರೆಗೂ ಸಿಕ್ಕಿಲ್ಲ. ಮನೆಯ ಯಜಮಾನನನ್ನು ಕಳೆದುಕೊಂಡ ಕುಟುಂಬ ಇಂದಿಗೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಹೀಗಾಗಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಸೊರಟೂರ ಗ್ರಾಮದ ಜನತಾ ಸದನದ ಸದಸ್ಯ ಪ್ರಕಾಶ್ ಮುಳಗುಂದ ಸದನದ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ಬಾಕ್ಸ್-
ಬಗರ್ ಹುಕುಂ ಸಾಗುವಾಳಿದಾರರಿಗೆ ಹಕ್ಕುಪತ್ರ ವಿತರಿಸಿ ರಾಜ್ಯ ಸರ್ಕಾರ ಕಂದಾಯ ಕಾಯ್ದೆ 53, 54 ಮತ್ತು 57ರಡಿ ಬಗರ್ ಹುಕುಂ ಸಾಗುವಳಿದಾರರು ಅರ್ಜಿ ಹಾಕುವಂತೆ ಹೇಳುತ್ತಾ ಬರುತ್ತಿದೆ. ಇದರಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಗದಗ ಜಿಲ್ಲೆಯೊಂದರಿಂದಲೇ ಐದು ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಹಕ್ಕುಪತ್ರ ವಿತರಣೆಗೆ ಸರ್ಕಾರ ಮೀನಾಮೇಷ ಎನಿಸುತ್ತಿದೆ. ಅದರಂತೆ, ಅಂದಿನ ಸರ್ಕಾರ ಆರ್ ಡಿಪಿಆರ್ ಸಂಸ್ಥೆ ಸ್ಥಾಪನೆಗೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವಂತಹ ಭೂಮಿ ನೀಡಿದ ನಾಗಾವಿ, ಮಲ್ಲಸಮುದ್ರ, ಕಳಸಾಪುರ ರೈತರನ್ನ ಒಕ್ಕಲೆಬ್ಬಿಸಲಾಗಿದೆ. ಇದರಿಂದ ಜಮೀನು ಕಳೆದುಕೊಂಡ ರೈತರು ಪರಿಹಾರಕ್ಕಾಗಿ ಅಲೆದಾಡುತ್ತಿದ್ದಾರೆ. ಹೀಗಾಗಿ ಶೀಘ್ರವೇ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸುವಂತೆ ಜನತಾ ಸದನದ ವಿಪ ನಾಯಕ ರವಿಕಾಂತ್ ಅಂಗಡಿ ಸದನದ ಮೂಲಕ ಒತ್ತಾಯಿಸಿದರು.