ನೈತಿಕತೆ ಇದ್ದರೆ ಸಿಎಂ ಈ ವೇಳೆಗೆ ರಾಜೀನಾಮೆ ಕೊಡಬೇಕಿತ್ತು: ಸಂಸದ ಶೆಟ್ಟರ್‌

images (1)
Published on

ಗದಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿವಳಿಕೆ ಮತ್ತು ನೈತಿಕತೆ ಇದ್ದರೆ ಇಷ್ಟರೊಳಗಾಗಲೇ ರಾಜೀನಾಮೆ ಕೊಡಬೇಕಿತ್ತು’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

‘ಯಾವುದೇ ಷರತ್ತು ಇಲ್ಲದೇ 14 ನಿವೇಶಗಳನ್ನೂ ಹಿಂದಿರುಗಿಸಿದ್ದಾರೆ. ಈ ಮೊದಲು ₹60 ಕೋಟಿ ಕೊಡಿ ನಿವೇಶನ ಕೊಡುತ್ತೇನೆ ಅಂತಿದ್ದರು. ಈಗ ಹಣ ಮತ್ತು ಬದಲಿ ನಿವೇಶನ ಯಾವುದನ್ನೂ ಕೇಳುತ್ತಿಲ್ಲ. ಈ ಹಗರಣದಿಂದ ಹೇಗಾದರೂ ಪಾರಾದರೆ ಸಾಕು ಅನ್ನೋ ಪರಿಸ್ಥಿತಿಗೆ ಅವರು ಬಂದಿದ್ದಾರೆ’ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಳಿಸಲು ಈಗ ಕಾಂಗ್ರೆಸ್‌ ಪಕ್ಷದಲ್ಲಿ ಪ್ರಯತ್ನಗಳು ನಡೆದಿವೆ. ಇಳಿಸಬೇಕು ಅನ್ನೋ ತಂತ್ರದಿಂದಾಗಿ ಧ್ವನಿಗಳು ಏಳುತ್ತಿವೆ’ ಎಂದು ತಿಳಿಸಿದರು.

‘ಧರ್ಮಪತ್ನಿಯನ್ನು ಬೀದಿಗೆ ತರುವ ಕೆಲಸ ಮಾಡುತ್ತಿದ್ದಾರೆ’ ಅಂತ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಪಾಪ ಆ ಹೆಣ್ಣು ಮಗಳು ಯಾರ ಉಸಾಬರಿಯೂ ಇಲ್ಲದೇ ತಮ್ಮಷ್ಟಕ್ಕೆ ತಾವು ಇದ್ದರು. ಅವರ ಸಹೋದರನ ಹೆಸರಿನಲ್ಲಿ ಸೇಲ್‌ಡೀಡ್‌ ಮಾಡಿಸುವುದು ಸೇರಿದಂತೆ ಇನ್ನಿತರ ವಿಷಯಗಳನ್ನು ಕೆದಕುತ್ತ ಹೋದರೆ ಅದು ಮತ್ತೊಂದು ಹಗರಣವಾಗುತ್ತದೆ’ ಎಂದು ಹೇಳಿದರು.

‘ಸರ್ಕಾರ ಬಿದ್ದರೆ ಬೀಳಲಿ, ಜಾತಿಗಣತಿ ಬಿಡುಗಡೆ ಮಾಡಿ’ ಎನ್ನುವ ಬಿ.ಕೆ.ಹರಿಪ್ರಸಾದ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ತನ್ನನ್ನು ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಬಿ.ಕೆ.ಹರಿಪ್ರಸಾದ್‌ಗೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಭಯಂಕರ ಸಿಟ್ಟಿದೆ. ಈ ನೆಪದ ಮೇಲಾದರೂ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸುವ ತಂತ್ರ ಹರಿಪ್ರಸಾದ್‌ ಮಾಡಿದ್ದಾರೆ’ ಎಂದು ಹೇಳಿದರು.

‘ಮುಡಾ ಹಗರಣ ಮುಚ್ಚಿ ಹಾಕಲು ಹಾಗೂ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಜಾತಿ ಗಣತಿ ವಿಷಯ ಮುನ್ನಲೆಗೆ ತಂದಿದ್ದಾರೆ’ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net