

ಗದಗ: ಸೊರಟೂರಲ್ಲಿ ಆರೋಗ್ಯ, ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಹಾಗೂ ವೆಂಕಟಾಪುರ ರಸ್ತೆ ನಿರ್ಮಾಣಕ್ಕೆ ಇನಾಂ ವೆಂಕಟಾಪುರದಲ್ಲಿ ಮಂಗಳವಾರ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಚಾಲನೆ ನೀಡಿದರು.
ಗದಗ ತಾಲೂಕಿನ ಯಲಿಶಿರುಂದ- ವೆಂಕಟಾಪೂರ- ಸೊರಟೂರ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ. 0.00 ರಿಂದ 0.750, ಕಿ.ಮೀ. 3.50 ರಿಂದ 5.68 ರವರೆಗೆ ಅಭಿವೃದ್ಧಿ ಹಾಗೂ ಕಿ.ಮೀ. 0.850 ರಿಂದ 3.30 ರವರೆಗೆ ಮರುಡಾಂಬರೀಕರಣ ಕಾಮಗಾರಿಗೆ ಸಚಿವ ಎಚ್ ಕೆ ಪಾಟೀಲ ಅವರು ಭೂಮಿಪೂಜೆ ನೆರವೇರಿಸಿದರು. ಕಾಮಗಾರಿಗೆ 3 ಕೋಟಿ ಅನುದಾನ ಒದಗಿಸಲಾಗಿದೆ. ಅದರಂತೆ ಗದಗ ತಾಲೂಕಿನ ಸೊರಟೂರ-ಮುಳಗುಂದ ವ್ಹಾಯಾ ನೀಲಗುಂದ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ. 1.50 ರಿಂದ 5.50 ರವರೆಗೆ ಅಭಿವೃದ್ಧಿ ಕಾಮಗಾರಿಗೆ ಅಂದಾಜು 1.50 ಕೋಟಿ ಅನುದಾನ ನೀಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೊರಟೂರಿನಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ 61 ಲಕ್ಷಗಳು ಒದಗಿಸಿದೆ. ಈ ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲಿ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ತಾಲ್ಲೂಕಿನ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.