ಇನ್ನರ್‌ವ್ಹೀಲ್ ಕ್ಲಬ್‌ದಿಂದ ಶಾಲಾ ದತ್ತು ಕಾರ್ಯಕ್ರಮ

09GDG04
Published on

 ಸರ್ಕಾರಿ ಶಾಲೆಗಳ ಮಕ್ಕಳು ಬದುಕನ್ನು ಅರಿತವರು: ಶೆಟ್ಟೆಪ್ಪನವರ

ವಿಜಯವಾಣಿ ಸುದ್ದಿಜಾಲ ಗದಗ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ಮಕ್ಕಳು ಬದುಕನ್ನು ಅರಿತವರು. ಇಂತಹ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರದ ಉಚಿತ ಯೋಜನೆಗಳು ಅನುಷ್ಠಾನಗೊಂಡಿದ್ದು, ಇವುಗಳೊಂದಿಗೆ ಸಂಘ ಸಂಸ್ಥೆಗಳು ಕೈಜೋಡಿಸಿ ಮಕ್ಕಳ ಉತ್ತಮ ಭವಿಷ್ಯಕ್ಕೆ ಸಹಕರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕ್ಷೇತ್ರ ಶಿಕ್ಷಣಾಽಕಾರಿ ಆರ್. ವಿ. ಶೆಟ್ಟೆಪ್ಪನವರ ಹೇಳಿದರು.

ಸರ್ಕಾರಿ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆ ನಂ.2 ರಲ್ಲಿ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ 2025-2026 ನೇ ಸಾಲಿಗೆ ಗದಗ ಶಹರದ ಸರ್ಕಾರಿ ಶಾಲೆಗಳ ದತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗದಗ ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಲವಾರು ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ. ಬಡ ಹಾಗೂ ಪ್ರತಿಭಾನ್ವಿತ ಮಕ್ಕಳನ್ನು ದತ್ತು ಪಡೆದು ಅವರ ಶೈಕ್ಷಣಿಕ ಅಭಿವೃದ್ಧಿಗೆ ಕಾರ್ಯನಿರತರಾಗಿರುವುದು ಅಭಿನಂದನೀಯ ಎಂದರು.

ಸಂಪನ್ಮೂಲ ವ್ಯಕ್ತಿ ಮೊಹಮ್ಮದ್‌ಶಫಿ ಯರಗುಡಿ ಮಾತನಾಡಿ ಇಂದಿನ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣದ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ನ್ಯಾಯ, ನೀತಿ, ಮಾನವೀಯತೆ, ಆದರ್ಶ, ಸಹಕಾರ ಮನೋಭಾವನೆಗಳನ್ನು ಹೊಂದಲು ಶಿಕ್ಷಣ ಇಲಾಖೆಯೊಂದಿಗೆ ಸಂಘ ಸಂಸ್ಥೆಗಳು ಜೊತೆಗೂಡಿ ಮಕ್ಕಳಲ್ಲಿ ಮೌಲ್ಯ ಶಿಕ್ಷಣವನ್ನು ನೀಡಬೇಕಿದೆ ಎಂದರು.

ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿ ಅಧ್ಯಕ್ಷೆ ಅಶ್ವಿನಿ ಜಗತಾಪ ಮಾತನಾಡಿ ಭೇಟಿ ಬಚಾವೋ ಭೇಟಿ ಪಡಾವೋ ಎಂಬ ಧ್ಯೇಯದೊಂದಿಗೆ ಹೆಣ್ಣು ಮಗುವಿನ ಶೈಕ್ಷಣಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಈ ಶಾಲೆಯನ್ನು ದತ್ತು ಪಡೆಯಲಾಗಿದೆ. ಮಕ್ಕಳಿಗೆ ವಿವಿಧ ಚಟುವಟಿಕೆ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಗುವುದು. ಶಾಲೆಯ ಅಗತ್ಯತೆಗಳನ್ನು ಪೂರೈಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ, ಸರ್ಕಾರಿ ಶಾಲೆಗಳ ಫಲಿತಾಂಶ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ, ಗುಣಾತ್ಮಕ ಶಿಕ್ಷಣ, ಫಲಪ್ರದವಾದ ಕಲಿಕೆ ಏರಿಕೆಯಾಗಿದೆ. ಇಲಾಖೆಯೊಂದಿಗೆ ಸಂಘ ಸಂಸ್ಥೆಗಳು ಕೈಜೋಡಿಸಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮುಂದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಎಫ್. ಜೆ. ದಲಭಂಜನ ಮಾತನಾಡಿ ಮಕ್ಕಳ ಗುಣಮಟ್ಟದ ಕಲಿಕೆ, ಶೈಕ್ಷಣಿಕ ಅಭಿವೃದ್ಧಿ ನಮ್ಮ ಧ್ಯೇಯವಾಗಿದೆ. ದಾನಿಗಳು, ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಹಾಯ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು.

ಖಜಾಂಚಿ ಪುಷ್ಪಾ ಭಂಡಾರಿ, ವೀಣಾ ಕಾವೇರಿ, ಎಚ್. ಬಿ. ಬಂಡಿವಡ್ಡರ, ಮೀನಾಕ್ಷಿ ಕೊರವಣ್ಣವರ, ಶಿಲ್ಪಾ ಅಕ್ಕಿ, ವಿ.ಕೆ.ಪಾಟೀಲ, ವಿದ್ಯಾ ಕಬ್ಬರಗಿ, ಇಂದಿರಾ ಬಾಯಿ, ಸಿ. ಎಸ್.ನಾಗನೂರ, ಗೌರಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net