ಸ್ವಾತಂತ್ರ್ಯ ಹೋರಾಟದಲ್ಲಿ ಗದಗ ಮಹನೀಯರ ಪಾತ್ರ ಅಪಾರ

15GDG05
Published on
ವಿಜಯವಾಣಿ ಸುದ್ದಿಜಾಲ ಗದಗ
ಸ್ವಾತಂತ್ರ್ಯ ಹೋರಾಟದಲ್ಲಿ ಗದಗ ಮಹನೀಯರ ಪಾತ್ರ ಅಪಾರ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರೋತ್ಸ ದಿನಾಚರಣೆಯಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ  ಮಾತನಾಡಿದ ಅವರು, ಶತಮಾನಗಳ ದಾಸ್ಯತ್ವವನ್ನು ಕಳಚಿ ಸ್ವತಂತ್ರವಾದ ಭಾರತ, ತನ್ನ 78 ವರ್ಷಗಳನ್ನು ಪೂರ್ಣಗೊಳಿಸಿ, ಇಂದು 79ರಲ್ಲಿ ಪಾದಾರ್ಪಣೆ ಮಾಡುತ್ತಿದೆ. ಮಹಾತ್ಮ ಗಾಂಧೀಜಿಯವರು ತೋರಿದ ವಿನೂತನವಾದ ಸತ್ಯ ಅಹಿಂಸೆ ಎಂಬ ಅಸ್ತ್ರ ಹಿಡಿದು ಸತ್ಯಾಗ್ರಹ ಮಾರ್ಗದಿಂದ ಬ್ರಿಟೀಷ್ ಆಡಳಿತದ ವಿರುದ್ಧ ನಮ್ಮ ಹಿರಿಯರು ಹೋರಾಡಿದರು. ಅಸಂಖ್ಯಾತ ಭಾರತೀಯರು ಮಾಡಿದ ತ್ಯಾಗ ಬಲಿದಾನದಿಂದಾಗಿ ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದರು. ನಮ್ಮ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನ, ಶ್ರಮ, ಸಮರ್ಪಣಭಾವ, ದೇಶಪ್ರೇಮದ ಫಲವಾಗಿ ಇಂದು ಸ್ವಾತಂತ್ರ್ಯ ಸುಖ ಅನುಭವಿಸುತ್ತಿದ್ದೇವೆ ಎಂದರು.
ಗದಗ ಪರಿಸರದಲ್ಲಿ ನಡೆದ ಸ್ವಾತಂತ್ರ ಹೋರಾಟ ಚಳುವಳಿಯ ಇತಿಹಾಸ ರೋಚಕವಾಗಿದೆ. ಗದಗ ಜಿಲ್ಲೆಯಲ್ಲಿ ಸ್ವಾತಂತ್ರ ಹೋರಾಟ 1857 ರಿಂದಲೇ ಆರಂಭಗೊಳ್ಳುತ್ತದೆ. ನರಗುಂದದ ಬಾಬಾಸಾಹೇಬ, ಮುಂಡರಗಿಯ ಭೀಮರಾವ್, ಡಂಬಳದ ಕೆಂಚನಗೌಡ, ಅನಂತರಾವ್ ಜಾಲಿಹಾಳ, ಡಾ. ವಾಸುದೇವರಾವ್ ಉಮಚಗಿ, ಬೆಟಗೇರಿಯ ತ್ರಿಮಲ್ಲೇ, ಮಳೇಕರ, ಜಯರಾಮಾಚಾರ್ಯ ಮಳಗಿ, ಡಂಬಳದ ಶ್ರೀನಿವಾಸರಾವ್ ಕಳ್ಳಿ, ತಿಪ್ಪಣ್ಣ ಶಾಸ್ತ್ರಿ, ಅಂದಾನಪ್ಪ ದೊಡ್ಡಮೇಟಿ, ಕೌತಾಳ ವೀರಪ್ಪ, ಕೆ.ಎಚ್.ಪಾಟೀಲರು ಸೇರಿ ಅಸಂಖ್ಯ ಸ್ವಾತಂತ್ರ ಸೇನಾನಿಗಳ ಹೋರಾಟ ಅವಿಸ್ಮರಣೀಯ. ಡಾ.ಬಿ.ಜಿ.ಹುಲಗಿ, ಶಂಕ್ರಪ್ಪ ಗುಡ್ಡದ, ಇಸ್ಮಾಯಿಲ ಸಾಹೇಬ, ಕಲ್ಲೂರ ರಾಮಚಾರಿ, ವೆಂಕಟೇಶ ಮಾಗಡಿ, ಕೋಗನೂರ ನಿಂಗಪ್ಪ ಮೊದಲಾದವರು ಬ್ರಿಟೀಷರನ್ನು ಎದುರಿಸಿ ಕಠಿಣಶಿಕ್ಷೆ ಅನುಭವಿಸಿದರು ಎಂದರು.
1916 ರಲ್ಲಿ ಬಾಲಗಂಗಾಧರ ತಿಲಕರು ಗದಗಿಗೆ ಭೇಟಿ ನೀಡಿದಾಗ ಆಗ ಆರಂಭಿಕ ಸ್ವಾತಂತ್ರ ಹೋರಾಟಗಾರರಾದ  ಅನಂತರಾವ ಜಾಲಿಹಾಳ, ಡಾ.ವೆಂಕಟರಾವ ಹುಯಿಲಗೋಳ, ಡಾ.ವಾಸುದೇವ ಉಮಚಗಿ ಮುಂತಾದವರು ಈ ಭಾಗದಲ್ಲಿ ರಾಷ್ಟ್ರೀಯ ಚಳುವಳಿಯ ನೇತೃತ್ವ ವಹಿಸಿದರು. 1920 ರಲ್ಲಿ ಮಹಾತ್ಮಾ ಗಾಂಧೀಜಿಯವರು ಗದುಗಿಗೆ ಭೇಟಿ ನೀಡಿದಾಗ ಜನರಲ್ಲಿ ರಾಷ್ಟ್ರೀಯ ಮನೋಭಾವನೆ ಮತ್ತು ಹೋರಾಟದ ಕಿಚ್ಚು ಇನ್ನಷ್ಟು ತೀವ್ರಗೊಂಡಿತು. ಈ ಎಲ್ಲ ಮಹಾನ ನಾಯಕರಿಗೆ ಸಹಸ್ರ ನಮನಗಳನ್ನು ಸಲ್ಲಿಸೋಣ ಎಂದು ತಿಳಿಸಿದರು.
ಸ್ವಾತಂತ್ರದ ನಂತರ, ಭಾರತಕ್ಕೆ ಹಲವಾರು ಸೌಕರ್ಯಗಳ ಕೊರತೆಗಳು ಕಾಡಿದ್ದವು. ಅದರಲ್ಲಿ ವಿಶೇಷವಾಗಿ ಕೃಷಿ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಮೂಲ ಸೌಕರ್ಯ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಸಾಧಿಸುವ ಸವಾಲನ್ನು ಎದುರಿಸಿ, ಭಾರತವನ್ನು ಕಟ್ಟುತ್ತಾ ಕಟ್ಟುತ್ತಾ ಸಾಗಿ ಜಗತ್ತಿನಲ್ಲಿ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ. ಬಲಿಷ್ಠ ಮತ್ತು ಶ್ರೀಮಂತ ರಾಷ್ಟೀಯ ಪೈಪೋಟಿಯನ್ನು ಎದುರಿಸಿ ಪ್ರಪಂಚವೇ ಭಾರತವನ್ನು ಗುರುತಿಸುವಂತೆ ಸಾಧನೆಯನ್ನು ಮಾಡಲಾಗಿದೆ. ಅದರಲ್ಲಿ ಮೊದಲ ಪರಮಾಣು ರಿಯಾಕ್ಷನ್ ರಚನೆ ಮತ್ತು ಚಂದ್ರಯಾನ ದಂತಹ ಯಶಸ್ಸು ನಾವು ಅಭಿಮಾನ ಪಡುವಂತಾಗಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭನೆಯನ್ನು ಸಾಧಿಸಿ, ಹಸಿರು ಕ್ರಾಂತಿಯನ್ನು ಮಾಡಿ ಆಹಾರ ಭದ್ರತೆಯ ಸವಾಲುಗಳನ್ನು ಮೆಟ್ಟಿ ನಿಂತಿದೆ. ಭಾರತ ಇಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ ಎಂದರು.
ಸಿವಿಲ್ ಪ್ರಕರಣಗಳಲ್ಲಿ ರಾಜಿಸಂಧಾನ ಕಡ್ಡಾಯಗೊಳಿಸಿ , ಶೀಘ್ರ ನ್ಯಾಯದಾನಕ್ಕೆ ದಿಟ್ಟ ಹೆಜ್ಜೆಯನ್ನಿಟ್ಟು , ಕರ್ನಾಟಕದಲ್ಲಿ ನ್ಯಾಯಕ್ಕಾಗಿ ಕಕ್ಷಿದಾರರು ದಶಕಗಟ್ಟಲೆ ಕಾಯುವುದಕ್ಕೆ ಮುಕ್ತಿ ನೀಡಲಾಗಿದೆ. ಈ ತಿದ್ದುಪಡಿಯು ತಕ್ಷಣದಿಂದ ಕರ್ನಾಟಕದಲ್ಲಿ ಜಾರಿಗೆ ಬಂದಿದೆ. ಕೋರ್ಟಿಗೆ ದಾಖಲಾದ ಪ್ರಕರಣವು ಕೇವಲ 24 ತಿಂಗಳುಗಳಲ್ಲಿ ತಾರ್ಕಿಕ ಅಂತ್ಯವನ್ನು ಕಂಡು ಶೀಘ್ರವಾಗಿ ನ್ಯಾಯ ತಿರ್ಮಾನವಾಗುವ ವ್ಯವಸ್ಥೆ ಜಾರಿಯಿಂದ ಒಂದು ಕ್ರಾಂತಿಕಾರಕ ಬದಲಾವಣೆಯನ್ನು ಕಾಣಲಿದೆ ಎಂದು ಎಚ್.ಕೆ. ಪಾಟೀಲ ತಿಳಿಸಿದರು.
ಬಡವರನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯಕ್ರಮ 2023ರಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ನಂತರ, ದಕ್ಷ, ಜನಪರ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ. ಬಡವರ, ಅವಕಾಶ ವಂಚಿತರ, ಶೋಷಣೆಗೆ ಒಳಗಾದವರ ಪರ ಗಟ್ಟಿಯಾಗಿ ನಿಂತು ಸಾಮಾಜಿಕ, ಆರ್ಥಿಕ, ನ್ಯಾಯ ನೀಡುವ, ನಾಡಿನ ಜನತೆಯ ದೈನಂದಿನ ಬವಣೆಗಳನ್ನು ನೀಗಿಸಲು 5 ಗ್ಯಾರಂಟಿಗಳನ್ನು ಜನತೆಗೆ ಕೊಡಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ್ ಪಡೆಗಳಿಂದ ಸಚಿವ ಎಚ್.ಕೆ. ಪಾಟೀಲ ಗೌರವ ವಂದನೆ ಸ್ವೀಕರಿಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ, ಜಿಪಂ ಸಿಇಒ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ, ಅರಣ್ಯ ವಸತಿ ವಿಹಾರ ಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಕಿಮಠ, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net