ಹುಯಿಲಗೋಳ ಗ್ರಾಮ ಪಂಚಾಯ್ತಿ ಬಿಜೆಪಿ ತೆಕ್ಕೆಗೆ

IMG-20240702-WA0015
Published on

ಗದಗ: ರಾಜೀನಾಮೆಯಿಂದ ತೆರವಾಗಿದ್ದ ತಾಲ್ಲೂಕಿನ ಹುಯಿಲಗೋಳ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ಟಿಪ್ಪುಸುಲ್ತಾನ ನದಾಫ ಅವರು ಆಯ್ಕೆಯಾಗಿದ್ದಾರೆ.
20 ಸದಸ್ಯ ಬಲದ ಗ್ರಾಮ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಬೆಂಬಲಿತ 13 ಹಾಗೂ ಬಿಜೆಪಿ ಬೆಂಬಲಿತ 7 ಸದಸ್ಯರಿದ್ದರು. ಹಿಂದುಳಿದ ‘ಅ’ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಗರು ಕಾಂಗ್ರೆಸ್ ಬೆಂಬಲಿತ ಸದಸ್ಯ ಟಿಪ್ಪುಸುಲ್ತಾನ ನದಾಫ ಅವರನ್ನು ಸೆಳೆದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರು. ಕಾಂಗ್ರೆಸ್ ಬೆಂಬಲಿತ ಸದಸ್ಯೆ ಲಲಿತವ್ವ ಸಂಗಪ್ಪ ಮಾರನಬಸರಿ ಅವರು ನಾಮಪತ್ರ ಸಲ್ಲಿಸಿದ್ದರು. ಅಷ್ಟೇ ಅಲ್ಲ, ಬಿಜೆಪಿ ಬೆಂಬಲಿತ ಮತ್ತೋರ್ವ ಸದಸ್ಯ ಶಿವರುದ್ರಪ್ಪ ನರಸಾಪೂರ ಅವರೂ ಸಹ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಕಣದಲ್ಲಿ ಮೂವರಿದ್ದರು. ಇದರಿಂದ ಚುನಾವಣಾ ಕಣ ಕುತೂಹಲ ಮೂಡಿಸಿತ್ತು.
ಯಾರಿಗೆ ಎಷ್ಟು ಮತ?: ಕಳೆದ ಬಾರಿ ಬಿಜೆಪಿಯ ಇಬ್ಬರು ಸದಸ್ಯರನ್ನು ಸೆಳೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿ, ಗೆಲ್ಲಿಸಿದ್ದರು. ಇದೀಗ ಬಿಜೆಪಿ ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಟಿಪ್ಪುಸುಲ್ತಾನ ನದಾಫ ಅವರನ್ನು ಬಿಜೆಪಿ ಪರವಾಗಿ ಅಭ್ಯರ್ಥಿಯನ್ನಾಗಿಸಿ, ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್‌ಗೆ ಟಕ್ಕರ್ ನೀಡಿದರು.
ಬಿಜೆಪಿಯ ರಾಜಕೀಯದಾಟದಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಟಿಪ್ಪುಸುಲ್ತಾನ ನದಾಫ ಅವರು 10 ಮತಗಳನ್ನು ಪಡೆದು ಆಯ್ಕೆಯಾದರು. ಕಾಂಗ್ರೆಸ್ ಬೆಂಬಲಿತ ಲಲಿತವ್ವ ಸಂಗಪ್ಪ ಮಾರನಬಸರಿ ಅವರು 9 ಮತಗಳನ್ನು ಪಡೆದು ಸೋಲನುಭವಿಸಿದರು. ಇನ್ನೋರ್ವ ಅಭ್ಯರ್ಥಿ ಶಿವರುದ್ರಪ್ಪ ನರಸಾಪೂರ ಅವರು ತಮ್ಮ ಮತವನ್ನೂ ತಮ್ಮದೇ ಪಕ್ಷದ ಬೆಂಬಲಿತ ಅಭ್ಯರ್ಥಿ, ಟಿಪ್ಪುಸುಲ್ತಾನ ನದಾಫ ಅವರಿಗೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಓರ್ವ ಸದಸ್ಯ ಮತದಾನದಿಂದ ದೂರ ಉಳಿದಿದ್ದರು.
ಅಭಿನಂದನೆ: ಹುಯಿಲಗೋಳ ಗ್ರಾಮ ಪಂಚಾಯ್ತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಟಿಪ್ಪುಸುಲ್ತಾನ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ನರಗುಂದ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ಸಿ.ಸಿ. ಪಾಟೀಲ, ಯುವ ಮುಖಂಡ ಉಮೇಶಗೌಡ ಸಿ. ಪಾಟೀಲ ಅಭಿನಂದಿಸಿದ್ದಾರೆ.
ಜೊತೆಗೆ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿ ಮುಖಂಡ ವಸಂತ ಮೇಟಿ, ಕಲ್ಮೇಶ ಟಿ. ವಡ್ಡೀನ, ಸ್ಥಳೀಯ ಮುಖಂಡರಾದ ಚಂದ್ರು ಹಂಚಿನಾಳ, ಮಹೇಶ ಹಂಚಿನಾಳ ಸೇರಿ ಹಲವರು ಬಿಜೆಪಿ ಧ್ವಜ ಹಾರಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net