1072 ಜನರಿಂದ ಅಂಗಾಂಗ ದಾನ ಪ್ರತಿಜ್ಞೆ

28GDG04
Published on
1072 ಜನರಿಂದ ಅಂಗಾಂಗ ದಾನ ಪ್ರತಿಜ್ಞೆ !  ಎಚ್.ಕೆ. ಪಾಟೀಲ ಸೇವಾ ತಂಡದಿಂದ ಜನಜಾಗೃತಿ
ಗದಗ: ಸಚಿವ ಎಚ್.ಕೆ. ಪಾಟೀಲರ 72ನೇ ಜನ್ಮದಿನಾಚರಣೆ ಅಂಗವಾಗಿ 1072 ಜನರಿಂದ ಅಂಗಾಂಗ ದಾನ ಪ್ರತಿಜ್ಞೆ ಪತ್ರಗಳನ್ನು ಸಂಗ್ರಹಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸೇವಾ ತಂಡದ ಅಧ್ಯಕ್ಷ ಪ್ರಭು ಬುರಬುರೆ ಹೇಳಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಎಚ್.ಕೆ. ಪಾಟೀಲ ಸೇವಾ ತಂಡವು, ಎಚ್.ಕೆ. ಪಾಟೀಲರ 72ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದೊಂದಿಗೆ ಈ ಅಭಿಯಾನ ಆರಂಭಿಸಿದೆ ಎಂದರು.
ಈ ಅಭಿಯಾನವು ಸೇವಾ ತಂಡದ ಅತ್ಯಂತ ಶ್ರೇಷ್ಠ ಕೆಲಸಗಳಲ್ಲಿ ಒಂದಾಗಿದೆ. ಅಂಗಾಂಗ ದಾನಕ್ಕೆ ಯಾವುದೇ ರೀತಿಯ ಒತ್ತಾಯ ಮಾಡುವುದಿಲ್ಲ. ಯಾರಾದರು ಪ್ರತಿಜ್ಞೆ ಮಾಡಿದರೂ, ಕುಟುಂಬದವರ ಒಪ್ಪಿಗೆ ಇಲ್ಲದೆ ಅಂಗಾಂಗಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು, ನೋಂದಣಿ ಇಲ್ಲದೆ ಸೇವೆ ಮಾಡುತ್ತಿದ್ದ ಎಚ್.ಕೆ. ಪಾಟೀಲ ಸೇವಾ ತಂಡ ಈಗ ಅಧಿಕೃತವಾಗಿ ನೋಂದಣಿಯಾಗಿದ್ದು, ಸಾಮಾಜಿಕ ಸೇವೆಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದೆ.
ಡಾ. ಎಸ್.ಆರ್. ನಾಗನೂರ ಮಾತನಾಡಿ, ಭಾರತದಂತಹ 140 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಕೇವಲ 3 ಲಕ್ಷ ಜನರು ಮಾತ್ರ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ಸಹ ಅಂಗಾಂಗ ದಾನದ ಪ್ರಮಾಣದಲ್ಲಿ ನಿರೀಕ್ಷಿತ ಏರಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಎಚ್.ಕೆ. ಪಾಟೀಲರ ಜನ್ಮದಿನಾಚರಣೆಯ ಸಂದರ್ಭವನ್ನು ಬಳಸಿಕೊಂಡು ಸಾವಿರಕ್ಕೂ ಹೆಚ್ಚು ಜನರಿಂದ ಪ್ರತಿಜ್ಞಾ ಪತ್ರಗಳನ್ನು ಸಂಗ್ರಹಿಸಿ, ಸಮಾಜದಲ್ಲಿ ಅಂಗಾಂಗ ದಾನದ ಕುರಿತು ಹೆಚ್ಚಿನ ಅರಿವು ಮೂಡಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಪ್ಯಾರ ಅಲಿ ನೂರಾನಿ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಬಸವರಾಜ ಕಡೇಮನಿ, ವಿನೋದ ಶಿದ್ಲಿಂಗ್, ರಮೇಶ ಹೊನ್ನಿನಾಯ್ಕರ, ಎಂ.ಸಿ. ಶೇಕ,‌ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net