ಗದಗ : ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಅವರು ಶನಿವಾರ ಗದಗ ನಗರದ ವಾರ್ಡ್ ನಂಬರ್ 30 ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಯೋಜನೆಯಡಿ ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಸಚಿವ ಎಚ್. ಕೆ. ಪಾಟೀಲ ಅವರು, ಇಂದು ಈ ಪ್ರದೇಶದಲ್ಲಿನ 36 ಮನೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಪ್ರತಿ ಮನೆಯು 6 ರಿಂದ 7 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಜೊತೆಗೆ ರಸ್ತೆ ಚರಂಡಿ ಯುಜಿಡಿ ಸೇರಿದಂತೆ ಇತರೆ ಕಾಮಗಾರಿಗಳನ್ನು ನೆರವೇರಿಸಲಾಗುವುದು ಎಂದರು. ಕಾಮಗಾರಿ ಅನುಷ್ಠಾನಗೊಳಿಸುವ ಇಲಾಖೆ ಅಧಿಕಾರಿಗಳು ಮನೆಗಳ ನಿರ್ಮಾಣ ಸೇರಿದಂತೆ ಇತರ ಕಾಮಗಾರಿ ಕೈಗೊಂಡಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಇರುವಂತೆ ನೋಡಿಕೊಳ್ಳಬೇಕು ಅಲ್ಲದೆ ಮನೆ ನಿರ್ಮಾಣ ಕಾಮಗಾರಿ ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮನೆ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರು ಸಹ ಮನೆ ನಿರ್ಮಾಣವು ಬಡವರಿಗೆ ವಿತರಿಸುವ ಮನೆಗಳಾಗಿದ್ದು ಉತ್ತಮ ಗುಣಮಟ್ಟದ ಮನೆ ನಿರ್ಮಿಸುವ ಮೂಲಕ ಬಡವರ ಸೇವೆ ಮಾಡುವಂತೆ ಹೇಳಿದರು. ಈ ಪ್ರದೇಶದ ಹಲವರ ಬೇಡಿಕೆಯಾಗಿರುವ ರೇಷನ್ ಕಾರ್ಡ್ ಸಮಸ್ಯೆ ಕುರಿತಂತೆ ಮಾತನಾಡಿದ ಸಚಿವರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿರುವ ಬಿಬಿ ಅಸೂಟಿಯವರು ಈ ವೇಳೆ ನಮ್ಮ ಜೊತೆಗಿದ್ದಾರೆ ಅವರು ನಿಮಗೆ ಇರುವ ರೇಷನ್ ಕಾರ್ಡ್ ಸಮಸ್ಯೆ ಇನ್ನೊಂದು ತಿಂಗಳ ಒಳಗಾಗಿ ಸರಿಪಡಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಚಿವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ ಬಿ ಅಸೂಟಿ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಪ್ರಭು ಬುರಬುರೆ, ನಗರ ಸಭೆ ಸದಸ್ಯೆ ಪದ್ಮಾ ಕಟಗಿ, ಆಂಜನೇಯ ಕಟಗಿ ಸೇರಿದಂತೆ ಹಲವರು ಹಾಜರಿದ್ದರು.