ಸುಗ್ರೀವಾಜ್ಞೆ: ನಿಯಮ ಬಾಹಿರ ಬಡ್ಡಿ ವಸೂಲಿಗಾರರಿಂದ ಜನರ ರಕ್ಷಣೆಗೆ ಮಹತ್ವದ ಕಾನೂನು ಇದಾಗಿದೆ: ಎಚ್.ಕೆ. ಪಾಟೀಲ

IMG-20250212-WA0008
Published on
ವಿಜಯವಾಣಿ ಸುದ್ದಿಜಾಲ ಗದಗ
ಮೈಕ್ರೋ ಸಾಲ, ಸಣ್ಣ ಸಾಲ ಬಲವಂತದ ವಸೂಲಿ ಪ್ರತಿಬಂಧಕ ಆದ್ಯಾದೇಶಕ್ಕೆ ರಾಜ್ಯಪಾಲರಿಂದ ಬುಧವಾರ ಒಪ್ಪಿಗೆ ಸಿಕ್ಕಿದೆ. ಕಾನೂನು ಬಾಹಿರ ಲೇವಾದೇವಿ ವ್ಯವಹಾರ ಮಾಡಿ ಸಾಲ ಪಡೆದವರನ್ನು ಹಿಂಸಿಸುವ, ಒತ್ತೆ ಆಳುಗಳನ್ನಾಗಿ ಮಾಡಿಕೊಳ್ಳುವ, ದೈಹಿಕ ಹಿಂಸೆ ಮಾಡುವ ಅಕ್ರಮ ಕೃತ್ಯವನ್ನು ನಿಯಂತ್ರಿಸಲು ಮತ್ತು ಅಕ್ರಮ ಲೇವಾದೇವಿ ವ್ಯವಹಾರದ ಮೇಲೆ ನಿಯಂತ್ರಿಸಲು ಈ ಸುಗ್ರೀವಾಜ್ಞೆ ಮೂಲಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು   ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯಪಾಲರು ಒಪ್ಪಿಗೆ ನೀಡಿದ್ದರಿಂದ ಬಡವರ ರಕ್ಷಣೆಗೆ ಸರ್ಕಾರಕ್ಕೆ ಬಲ ಬಂದಂತಾಗಿದೆ. ಸಾಲಗಾರರಿಂದ ಜನರನ್ನು ರಕ್ಷಿಸಲು ಜನಪರ ಕಾನೂನು ಅವಶ್ಯವಿತ್ತು. ಸಾಲ ವಸೂಲಿ ಹೆಸರಲ್ಲಿ ಕಿರುಕುಳ, ಅಮಾನವೀಯ ಕೃತ್ಯಗಳು, ವಿಪರೀತ ಬಡ್ಡಿ, ಮೀಟರ್ ಬಡ್ಡಿ ದಂಧೆಗಳಿಗೆ ತಡೆ ನೀಡಬೇಕು ಎಂಬ ನಿಲುವು ಸರ್ಕಾರ ಹೊಂದಿದೆ. ಇದರ ಪರಿಣಾಮವೇ ಸುಗ್ರೀವಾಜ್ಞೆ ಎಂದು ಹೇಳಿದರು.
ಸುಗ್ರೀವಾಜ್ಞೆ ತರುವ ಸಂದರ್ಭದಲ್ಲಿ ರಾಜ್ಯದಲ್ಲಿ ಸಂವಾದ, ವಾದ, ವಿವಾದ, ಆಲೋಚನೆಗಳನ್ನು ಸಮದೂಗಿಸಿ ಜನಪರ ಸುಗ್ರೀವಾಜ್ಞೆ ತರಲಾಗಿದೆ. ರೈತರು, ಮಹಿಳೆ, ಮಹಿಳಾ ಸ್ವಸಹಾಯ ಗುಂಪು, ಮಹಿಳಾ ರೈತರು, ಪೂಟ್ ಪಾತ್ ಉದ್ದಿಮೆಗಳು, ಅಂಗಂಡಿಗಳಲ್ಲಿ ಕೆಲಸ ಮಾಡುವರು, ಬಡವರು, ಆರ್ಥಿಕವಾಗಿ ಹಿಂದುಳಿದವರ ರಕ್ಷಣೆ ಮಾಡಲು ಈ ಸುಗ್ರೀವಾಜ್ಞೆ ಅನುಕೂಲ ಆಗಲಿದೆ.
ನೋಂದಾಯಿತ ಅಲ್ಲದ, ಕಾನೂನು ಬಾಹಿರ ಲೇವಾದೇವಿ ವ್ಯವಹಾರ ಮಾಡುವರ ಮೇಲೆ ಕ್ರಮ ಕೈಗೊಳ್ಳಲಾಗುವುದು.  ಸಾಲ ಪಡೆದವರಿಗೆ ಒತ್ತಾಯ ಪೂರ್ವಕ ಕಿರುಕುಳ, ಅವರನ್ನು ಒತ್ತೆ ಆಳುಗಳಾಗಿ ಮಾಡಿಕೊಳ್ಳುವುದು ಕಾನೂನು ಬಾಹಿರ ಚಟುವಟಿಕೆ ಆಗಿತ್ತು.  ಲೇವಾದೇವಿ ವ್ಯವ್ಯಹಾರ ಮಾಡುವರಿಂದ ಕಿರುಕಳಕ್ಕೆ ಒಳಪ್ಪಟ್ಟವರನ್ನು ರಕ್ಷಣೆ ಮಾಡುವ ಕಾನೂನು ಅಗತ್ಯ ಇತ್ತು. ಇಂತಹ ಕಾನೂನಿಂದ ಜನರ ರಕ್ಷಣೆಯನ್ನು ಕಾನೂನು ಚೌಕಟ್ಟಿನ ಒಳಗೆ ತಂದಂತಾಯಿತು ಎಂದು ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಇತರರು ಇದ್ದರು.
ಕೋಟ್:
ನಿಯಮಾನುಸಾರ ಬಡ್ಡಿ ವಸೂಲಿ, ಜನರಿಗೆ ಕಿರುಕುಳ ನೀಡದೇ ನಿಯಮಾನುಸಾರ ಬಡ್ಡಿ ಪಡೆಯುವರಿಗೆ, ಬ್ಯಾಂಕ್ ಗಳಿಗೆ ಈ ಸುಗ್ರೀವಾಜ್ಞೆಯಿಂದ ತೊಂದರೆ ಆಗುವುದಿಲ್ಲ. ಕಾನೂನಾತ್ಮಕ ವ್ಯವಹಾರಕ್ಕೆ ಸ್ವಾಗತ ಇದ್ದೇ ಇದೆ.
* ಎಚ್.ಕೆ. ಪಾಟೀಲ, ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net