

ಗದಗ: ಗ್ಯಾರಂಟಿ ಯೋಜನೆಗಳ ಮೂಲಕ ಕ್ರಾಂತಿಕಾರಿ ಬದಲಾವಣೆ ಮಾಡಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಬಡವರನ್ನು ಅಪಹಾಸ್ಯ ಮಾಡಿದ ಬಿಜೆಪಿಯನ್ನು ಧಿಕ್ಕರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ನಗರದ ಖಾನ್ ತೋಟ ಜನತಾ ಕಾಲೋನಿಯ 20ನೇ ವಾರ್ಡ್ ನಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಮತಯಾಚಿಸಿ, ಮಾತನಾಡಿದ ಅವರು, ಜನಸಾಮಾನ್ಯರ ಕೌಟುಂಬಿಕ ನಿರ್ವಹಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಮತ್ತು ಯುವನಿಧಿ ಸೇರಿ ಪ್ರತಿ ವರ್ಷ ಸುಮಾರು 60 ಸಾವಿರ ರೂ.ಗಳವರೆಗೆ ಸಹಾಯಧನ ನೀಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಚ್ಛೇ ದಿನ್ ಬರುವುದಾಗಿ ಬಡವರನ್ನು ಅಪಹಾಸ್ಯ ಮಾಡಿದ್ದಾರೆ. ಜನ ಧನ ಖಾತೆ ತೆರೆಯಲು ತಿಳಿಸಿ ವಂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಪಕ್ಷವನ್ನು ತಿರಸ್ಕರಿಸಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಲೋಕಸಭಾ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭರವಸೆ ನೀಡಿದಂತೆ ದೇಶದಲ್ಲಿ ಅಚ್ಛೇ ದಿನ್ ಬರಲೇ ಇಲ್ಲ. ಆದರೆ ರಾಜ್ಯದಲ್ಲಿ ಕಳೆದ ಎಂಟು ತಿಂಗಳಿಂದ ಜಾರಿಯಾಗಿರುವ ಗ್ಯಾರಂಟಿ ಯೋಜನೆಗಳಿಂದ ಜನತೆಯಲ್ಲಿ ಹುಮ್ಮಸ್ಸು ಮೂಡಿದೆ. ಜೊತೆಗೆ ನೀರಾವರಿ ಯೋಜನೆ ಅನುಷ್ಠಾನ ಮೂಲಕ ಮನೆ ಮಾತಾಗಿರುವ ಎಚ್.ಕೆ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಸಾಗುವ ನನಗೆ ತಮ್ಮ ಮತ ನೀಡಿ ಆಶೀರ್ವದಿಸಬೇಕೆಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಬೆಲೆ ಏರಿಕೆಯಿಂದ ಜನಸಾಮಾನ್ಯರನ್ನು ಸಂಕಷ್ಟಗಳಿಗೆ ನೂಕಿದ ಬಿಜೆಪಿಗೆ ಈ ಬಾರಿ ತಕ್ಕ ಪಾಠ ಕಲಿಸಬೇಕಿದೆ. ಈ ಹಿನ್ನೆಲೆಯಲ್ಲಿ ಮನೆ ಮಗನಂತಿರುವ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸಬೇಕು ಎಂದು ಹೇಳಿದರು.
ಗದುಗಿನ ಖಾನ್ ತೋಟ ಜನತಾ ಕಾಲೋನಿಯ 20ನೇ ವಾರ್ಡ್ ನಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮತಯಾಚಿಸಿ, ಮಾತನಾಡಿದರು.
ನಗರಸಭೆ ಸದಸ್ಯೆ ಪರ್ವಿನ್ ಬಾನು ಮುಲ್ಲಾ, ಸ್ಥಳೀಯರಾದ ಪ್ರಸನ್ನ ಶಾಬಾದಿಮಠ, ಹನುಮಂತಪ್ಪ ಮುಂಡರಗಿ, ಕೆ.ಆರ್.ಸುಣಗಾರ, ಎಂ.ಎ.ಮೌಲ್ವಿ, ಎಚ್.ಕೆ.ಮುಲ್ಲಾ, ಮೇಘರಾಜ ಕಲಬುರ್ಗಿ, ಮುಸ್ಕಾನ್ ಸಯ್ಯದ್ ಉಪಸ್ಥಿತರಿದ್ದರು.