ಆರೋಗ್ಯವೇ ಸಂಪತ್ತು, ನಿಷ್ಕಾಳಜಿ ಬೇಡ: ಕುಮಾರ ಪೂಜಾರ

19GDG05
Published on

ವಿಜಯವಾಣಿ ಸುದ್ದಿಜಾಲ ಗದಗ

ಆರೋಗ್ಯವೇ ಮಹಾ ಭಾಗ್ಯ. ಆರೋಗ್ಯದ ಬಗ್ಗೆ ಯಾರೂ ನಿಷ್ಕಾಳಜಿ ಮಾಡಬಾರದು ಎಂದು ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಕುಮಾರ ಪೂಜಾರ ತಿಳಿಸಿದರು.

ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯಿತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ಮಾನ ಆರೋಗ್ಯ ಮಂದಿರ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.

ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ತಾಲೂಕಿನ ಬಹುತೇಕ ಗ್ರಾಮಗಳಲ್ಲಿಯ ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಬಡ ಕೂಲಿಕಾರರಿಗೆ ಉಚಿತ ಆರೋಗ್ಯ ಶಿಬಿರದಿಂದ ತುಂಬಾ ಅನುಕೂಲವಾಗಿದೆ. ಆರೋಗ್ಯ ತಪಾಸಣೆ ಮಾಡಿಸುವುದರಿಂದ ಆರೋಗ್ಯದ ಏರುಪೇರುಗಳನ್ನು ತಿಳಿಯ ಬಹುದಾಗಿದೆ. ತಕ್ಷಣವೇ ಸಂಭವಿಸುವ ದುರಂತಗಳನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.

ಸಮುದಾಯ ಆರೋಗ್ಯ ಅಧಿಕಾರಿ ಡಾ. ಎಲ್​. ಕೃಷ್ಣ ಮಾತನಾಡಿ, ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಸ್ಥಳದಲ್ಲಿಯೇ ಬಿಪಿ, ಶುಗರ್​, ಮಧುಮೇಹ, ಅತಿ ರಕ್ತದೊತ್ತಡದಂತಹ ಪ್ರಾಥಮಿಕ ಅಸಾಂಕ್ರಮಿಕ ಗುಣಲಕ್ಷಣಗಳನ್ನು ಪತ್ತೆ ಹಚ್ಚಿ ಸೂಕ್ತ ಸಮಾಲೋಚನೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 130 ಮಹಿಳೆಯರು, 127 ಪುರುಷರು ಸೇರಿ 257 ಕೂಲಿ ಕಾಮಿರ್ಕರ ತೂಕ, ಬಿಪಿ, ಶುಗರ್​ ಪರಿಶೀಲಿಸಿ ಸಮಸ್ಯೆಗೆ ಮಾತ್ರೆಗಳನ್ನು ನೀಡಲಾಯಿತು.

ಗ್ರಾಪಂ ಅಧ್ಯಕ್ಷ ಅನಸೂಯಾ ಬೆಟಗೇರಿ, ಉಪಾಧ್ಯಕ್ಷ ರಾಜೇಶ್ವರಿ ಘೋಡಕೆ, ವೀರೇಶ ಬಸನಗೌಡ್ರ, ಗ್ರಾಪಂ ಕಾರ್ಯದಶಿರ್ ಪ್ರೀತಮ ಬಳ್ಳಾರಿ, ಗ್ರಾಪಂ ಸಿಬ್ಬಂದಿ ಶರಣಪ್ಪ ಹುಯಿಲಗೋಳ, ಮಾರುತಿ ಚಲವಾದಿ, ದುರ್ಗಪ್ಪ ಆಲೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net