ಹೊಸ ಪ್ರವಾಸೋದ್ಯಮ ನೀತಿ: 25 ವಿಷಯಾಧಾರಿತ ಕ್ಷೇತ್ರಗಳ ಅಭಿವೃದ್ಧಿಗೆ 44 ಯೋಜನೆಗಳ ಅನುಷ್ಠಾನ

30GDG07
Published on

ವಿಜಯವಾಣಿ ಸುದ್ದಿಜಾಲ ಗದಗ

ಮುಂಬರುವ 5 ವರ್ಷಗಳ ಅವಧಿಯಲ್ಲಿ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ವೇಗ ನೀಡಿಲು 2024 - 29 ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಸಚಿವ ಎಚ್​.ಕೆ. ಪಾಟೀಲ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಮಾಜದ ಎಲ್ಲ ವರ್ಗದ ಜನರನ್ನು ಗಮನಿಸಿ ಹೊಸ ಪ್ರವಾಸೋದ್ಯಮ ನೀತಿ ಜಾರಿ ತರಲಾಗುತ್ತಿದೆ. ಶೈಕ್ಷಣಿಕ ಪ್ರವಾಸ, ಕೃಷಿ ಪ್ರವಾಸ, ಪಾರಂಪರಿಕ ತಾಣಗಳ ಭೇಟಿ ಮತ್ತು ಅಧ್ಯಯನ, ಸಾಹಸ ಪ್ರವಾಸೋದ್ಯಮ, ವಿರಾಮ, ವಿನೋದ, ಜ್ಞಾನಾರ್ಜನೆ ಮುಂತಾದವುಗಳಿಗೆ ಆಧ್ಯತೆ ನೀಡಿ ಸಮಗ್ರ ನೀತಿಯನ್ನು ರೂಪಿಸಿದ್ದೇವೆ. ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ನೂತನ ನೀತಿ ಅನುಕೂಲ. ರಾಜ್ಯದಲ್ಲಿ 9 ಕೇಂದ್ರಿಕೃತ ವಲಯಗಳನ್ನು ಗುರುತಿಸಿ ಅಭಿವೃದ್ಧಿ ಗೊಳಿಸಲಾಗುವುದು. ಹೊಸ ನೀತಿ ಅನುಸಾರ ಖಾಸಗಿ ಸಹಭಾಗಿತ್ವಕ್ಕೂ ಮೊದಲ ಆಧ್ಯತೆ ನೀಡಲಾಗಿದೆ ಎಂದರು.

ವಿವಿಧ ಕ್ಷೇತ್ರಗಳ ಆಯ್ಕೆ:

ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯದಲ್ಲಿ 25 ವಿಷಯಾಧಾರಿತ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಸಾಹಸ, ಕೃಷಿ, ಕರಾವಳಿ, ಬೀಚ್​, ಪಾರ್ಕ, ಪರಿಸರ, ಚಲನಚಿತ್ರ, ಒಳನಾಡು, ಕರಾವಳಿ, ಕಡಲು, ವೈದ್ಯಕಿಯ, ವ್ಯಾಪಾರ, ಗಣಿಗಾರಿಕೆ, ಗ್ರಾಮೀಣ, ಬುಡಕಟ್ಟು, ಸ್ವಾಸ್ಥ$್ಯ ಸೇರಿದಂತೆ 25 ವಿಷಯಾಧಾರಿತ ಕ್ಷೇತ್ರ ಗುರುತಿಸಲಾಗಿದೆ. ಈ ಕ್ಷೇತ್ರಗ ಅಭಿವೃದ್ಧಿಗಾಗಿ 44 ಯೋಜನೆಗಳನ್ನು ಹೊಸ ನೀತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಪ್ರವಾಸಿ ಗ್ರಾಮ ಯೋಜನೆ, ಅತಿಥಿಗೃಹ ಯೋಜನೆ, ಹೊಟೆಲ್​ ಬಜೆಟ್​ ಯೋಜನೆ, ವಸ್ತು ಸಂಗ್ರಹಾಲಯ ಯೋಜನೆ, ಧ್ವನಿ ಮತ್ತು ಬೆಳಕಿನ ಯೋಜನೆ, ಪ್ರವಾಸೋದ್ಯಮ ಸ್ಟಾರ್ಟಪ್​, ಪ್ರವಾಸಿ ಆಯೋಜಕರು, ಟ್ರಾವೆಲ್​ ಏಜೆಂಟ್​, ಯುವ ಪ್ರವಾಸೋದ್ಯಮ ಯೋಜನೆ ಸೇರಿದಂತೆ 44 ಯೋಜನೆ ಅಳವಡಿಸಿಕೊಳ್ಳಲಾಗಿದೆ ಎಂದರು.

48 ಕೋಟಿ ಪ್ರವಾಸಿಗರ ಗುರಿ:

ರಾಜ್ಯದಲ್ಲಿ ಪ್ರತಿವರ್ಷ 26 ರಿಂದ 31 ಕೋಟಿ ಜನರು ಪ್ರವಾಸ ಮಾಡುತ್ತಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಅದರಲ್ಲಿ 12 ಲಕ್ಷ ಜನ ವಿದೇಶಿಗಳು ಒಳಗೊಂಡಿದ್ದಾರೆ. ಹೊಸ ನೀತಿ ಅನ್ವಯ ಪ್ರವಾಸಿಗರ ಸಂಖ್ಯೆಯನ್ನು 48 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. 20 ಲಕ್ಷ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸುವ ಗುರಿ ಇದೆ. ಪ್ರವಾಸೋದ್ಯಮ ಅಭಿವೃದ್ಧಿಗೊಳ್ಳಲು ಜನರ ಸಹಭಾಗಿತ್ವವೇ ಮುಖ್ಯ. ಸ್ನೇಹದ ಮನೋಭಾವ, ಅತಿಥಿಗಳನ್ನು ಗೌರವಿಸುವ ಮನೋಭಾವ ಇರುವ ದೇಶಗಳು, ರಾಜ್ಯಗಳು ಅತೀ ಹೆಚ್ಚು ಪ್ರವಾಸಿಗರನ್ನು ಹೊಂದುತ್ತಾರೆ. ಈ ಹಿನ್ನೆಲೆ ಜನರ ಸಹಕಾರ ಅಗತ್ಯವಿದೆ ಎಂದು ಎಚ್​.ಕೆ. ಪಾಟೀಲ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಗುರಣ್ಣ ಬಳಗಾನೂರು, ಅಶೋಕ ಮಂದಾಲಿ, ಎಸ್​. ಎನ್​. ಬಳ್ಳಾರಿ, ಬಸವರಾಜ ಕಡೆಮನಿ, ಅಕ್ಬರಸಾಬ್​ ಬಬಚಿರ್ ಇತರರು ಇದ್ದರು.

ಸುದ್ದಿಗೋಷ್ಟಿ ಮುಖ್ಯಾಂಶಗಳು:

* ತೆರಿಗೆ ವಿನಾಯಿತಿ: ಸರ್ಕಾರ & ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಪ್ರವಾಸೋದ್ಯಮ ಯೋಜನೆಗಳ ಅನುಷ್ಠಾನಕ್ಕೆ ಅವಕಾಶ ನೀಡಿದೆ. ಪ್ರವಾಸೋದ್ಯಮದಲ್ಲಿ ಆಸಕ್ತಿ ವಹಿಸುವ ಉದ್ಯಮಿಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡಲು ಸರ್ಕಾರ ಸಕಾರಾತ್ಮಕ ಚಿಂತನೆ ನಡೆಸಿದೆ. ಆದಾಯ ತೆರಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗುವುದು ಎಂದರು:

* ಪ್ರವಾಸೋದ್ಯಮ ಯೋಜನೆ ಅನುಷ್ಠಾನಕ್ಕೆ ಉದ್ಯಮಿಗಳಿಗೆ ಅಗತ್ಯ ಅನುಮತಿಗಳನ್ನು ಪಡೆಯಲು ಇರುವ ಕ್ಲಿಷ್ಠತೆಯನ್ನು ದೂರ ಮಾಡಲು ಏಕಗವಾ ಮೂಲಕ ಅನುಮತಿ ನೀಡಲು ಚಿಂತಿಸಲಾಗುವುದು ಎಂದು ತಿಳಿಸಿದ ಸಚಿವರು, ಅನಿವಾರ್ಯತೆ ಸೃಷ್ಟಿ ಆದರೆ ನೀತಿಯನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿ ಏಕಗವಾ ವ್ಯವಸ್ಥೆ ಮೂಲಕ ಅನುಮತಿಗಳನ್ನು ನೀಡಲಾಗುವುದು ಎಂದರು

* ಸ್ಮಾರಕ ಗುರುತಿಸಬೇಕು: ರಾಜ್ಯದಲ್ಲಿ 25000 ಸ್ಮಾರಕಗಳಿವೆ. ಆದರೆ ಅಂದಾಜು 1000 ಒಳಗಿನ ಸ್ಮಾರಕಕ್ಕೆ ಮಾತ್ರ ಗೆಜೆಟ್​ ಮಾಡಲಾಗಿದೆ. ಇನ್ನೂ ಸ್ಮಾರಕಗಳನ್ನು ಗುರುತಿಸುವ ಕೆಲಸ ಆಗಬೇಕಿದೆ. ಸ್ಮಾರಕ ಗುರುತಿಸಿ ಪರಿಚಯಿಸಿದಾಗ ಮಾತ್ರ ಕ್ಷೇತ್ರಗಳ ಅನಾವರಣ ಮತ್ತು ಪ್ರವಾಸೋದ್ಯಮಕ್ಕೆ ಪೂರಕ ಆಗಲಿದೆ.

* ಒಳಮಿಸಲಾತಿ ಪ್ರಕ್ರಿಯೆ ನಿಖರ ಅಂಕಿಅಂಶಗಳ ಅಗತ್ಯತೆ ಇದೆ. ಇತರೆ ರಾಜ್ಯಗಳಲ್ಲಿ ಇದೇ ರಿತಿ ಒಳಮೀಸಲು ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಕೆಲ ರಾಜ್ಯಗಳಲ್ಲಿ ಉಪ ಪಂಗಡಗಳನ್ನು ಗುರುತಿಸುವ ಕಾರ್ಯ ಆಗಿರಲಿಲ್ಲ. ರಾಜ್ಯದಲ್ಲೂ ಇಂತಹ ಸಮಸ್ಯೆ ಉದ್ಭವಿಸಬಾರದೆಂದು ಸೂಕ್ತ ದಾಖಲೆ, ಅಂಕಿ ಅಂಶಗಳ ನಿಖರತೆ, ಇತರೆ ರಾಜ್ಯದ ಪ್ರಕ್ರಿಯೆ ಅವಲೋಕಿಸಲು ನಿವೃತ್ತ ನ್ಯಾಯಮುತಿರ್ಗಳ ನೇತೃತ್ವದ ಆಯೋಗ ರಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

* ವಕ್ಫ ಪ್ರಕರಣ: ಜಿಲ್ಲೆಯಲ್ಲಿ 689 ವಕ್ಫ ಸಂಬಂಧಿತ ಹಳೆಯ ಪ್ರಕರಣಗಳಿವೆ. ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ರೈತರಿಗೂ ನೋಟೀಸ್​ ಕೊಟ್ಟಿಲ್ಲ. ಗದಗ ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ಇಲ್ಲ. ಆತಂಕದ ಪರಿಸ್ಥಿತಿಯೂ ಇಲ್ಲ. ಈ ಹಿಂದೆ ರೈತರು ಮತ್ತು ವಕ್ಫ ಮಂಡಳಿ ನಡುವಿನ ವ್ಯಾಜ್ಯಗಳ ಪ್ರಕರಣಗಳಿದ್ದು, ವಿವಿಧ ಹಂತದ ನ್ಯಾಯಾಲಯಗಳಲ್ಲಿಗೆ ಪ್ರಕರಣ ಇವೆ ವಿನಃ ಏಕಾಏಕಿ ರೈತರಿಗೆ ನೋಟೀಸ್​ ನೀಡಿಲ್ಲ. ಚುನಾವಣೆ ಬಂದಾಗ ಬಿಜೆಪಿ ಇಂತಹ ತಂತ್ರಗಾರಿಕೆ ನಡೆಸುತ್ತದೆ ಎಂದರು.

* ಜಾತಿಗಣತಿ: ದೇಶದ ವಿವಿಧ ರಾಜ್ಯಗಳಲ್ಲಿ ಜಾತಿ ಗಣತಿ ಕೂಗು ಕೇಳೀಬರುತ್ತಿದೆ. ಬಿಜೆಪಿಯ ಅಂಗ ಸಂಸ್ಥೆಗಳೂ ಸಹ ಜಾತಿ ಗಣತಿ ನಡೆಯಬೇಕೆಂದು ಆಸಕ್ತಿ ಹೊಂದಿದ್ದಾರೆ. ಹಾಗಾಗಿ ಜಾತಿಗಣತಿ ಕಡ್ಡಾಯ ಆಗಬೇಕು ಎಂಬುದು ಸರ್ಕಾರ ನಿಲುವು ಆಗಿದೆ ಎಂದು ಸಚಿವರು ಹೇಳಿದರು.

======

ಓಬಾಮಾ ಆಹ್ವಾನ:

1924 ಇಸ್ವಿ ಡಿ.26, 27 ರಂದು ಬೆಳಗಾವಿಯಲ್ಲಿ ನಡೆದ 39ನೇ ಕಾಂಗ್ರೆಸ್​ ರಾಷ್ಟ್ರೀಯ ಸಮಾವೇಶದಲ್ಲಿ ಗಾಂಧಿ ಜೀ ಅಧ್ಯಕ್ಷತೆ ವಹಿಸಿದ್ದರು. ಅವರ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯ ಚಳುವಳಿ ಸ್ವರೂಪ ಬದಲಾಯಿತು. ಅಧಿವೇಶನ ಶತಮಾನೋತ್ಸಸ ಅಂಗವಾಗಿ ಮುಂಬರುವ ಬೆಳಗಾವಿ ಅಧಿವೇಶನಕ್ಕೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ ಓಬಾಮಾ ಅವರನ್ನು ಆಹ್ವಾನಿಸಿ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ ಎಂದು ಸಚಿವ ಎಚ್​.ಕೆ. ಪಾಟೀಲ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net