

ಗದಗ: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಸಮಸ್ತ ಪದವೀಧರರು ತಮ್ಮ ಹೆಸರ ಮತದಾರರ ಪಟ್ಟಿಯಲ್ಲಿ ಸೇರಿಸಲು ಮರು ನೋಂದಣಿ ಹಾಗೂ ಅರ್ಹ ಪದವೀಧರರು ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಗದುಗಿನ ನಿತ್ಯ ವಿಜಯ ಪ್ರತಿಷ್ಠಾನ (ರಿ)ದ ಸಂಸ್ಥಾಪಕ, ಬಿಜೆಪಿಯ ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸದಸ್ಯರಾದ ಡಾ.ಎಸ್.ವ್ಹಿ.ಶಿವನಗೌಡರ ಪದವೀಧರರಲ್ಲಿ ಮನವಿ ಮಾಡಿಕೊಂಡರು.
ಅವರು ನರೇಗಲ್ಲ ಪಟ್ಟಣದ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ಉಪನ್ಯಾಸಕ, ಶಿಕ್ಷಕ ವೃಂದವನ್ನು ಭೇಟಿ ಮಾಡಿ ಮತದಾರರಲ್ಲಿ ಜಾಗೃತಿ ಮೂಡಿಸುವ ಹಾಗೂ ಮತದಾರರ ಪಟ್ಟಿಗೆ ಹೊಸದಾಗಿ ನೋಂದಣಿ ಮಾಡುವ ಅಭಿಯಾನದ ಮಾಲಿಕೆಯಲ್ಲಿ ಮಾತನಾಡಿದರು.
ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಕಳೆದ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡು ಮತದಾನ ಮಾಡಿದವರು ನವೆಂಬರ್ 6 ರೊಳಗೆ ಮರು ನೋಂದಣಿ ಮಾಡಿಕೊಳ್ಳಬೇಕು.
ನವೆಂಬರ್ 1, 2022 ಕ್ಕಿಂತ ಮೊದಲು ತೇರ್ಗಡೆ ಹೊಂದಿದ ಎಲ್ಲ ಪದವೀಧರರು ಮತದಾನಕ್ಕೆ ಅರ್ಹರಾಗಿದ್ದು ಅವರು ಹೊಸದಾಗಿ ಅಗತ್ಯ ದಾಖಲಾತಿಯೊಂದಿಗೆ ನಿಗದಿತ ಅರ್ಜಿ ಫಾರ್ಮ ಭರ್ತಿ ಮಾಡಿ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನವೆಂಬರ್ 6 ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಡಾ.ಎಸ್.ವ್ಹಿ.ಶಿವನಗೌಡರ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ಉಪನ್ಯಾಸಕ, ಶಿಕ್ಷಕರು ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.