

ವಿಜಯವಾಣಿ ಸುದ್ದಿಜಾಲ ಗದಗ
ಹಳೆ ಪಿಂಚಣಿ ಜಾರಿ, ಆರೋಗ್ಯ ವಿಮೆ, ಡಿಪಿಆರ್ ಬದಲಾವಣೆ ಹಾಗೂ ಅಪಘಾತದಲ್ಲಿ ಮೃತರಾದ ಸರ್ಕಾರಿ ನೌಕರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡುವ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿವೆ. ಕೇಂದ್ರ ಮಾದರಿಯ ವೇತನ ಜಾರಿಗೂ ನೂತನ ವೇತನ ಆಯೋಗದಲ್ಲಿ ಶಿಫಾರಸು ಮಾಡಲಾಗಿದೆ. ಸಂಘಟನಾತ್ಮಕ ಹೋರಾಟ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ರಾಜ್ಯ ಸರ್ಕಾರಿ ನೌಕರ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.
ನಗರದ ಕನಕ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಘಟಕದ ವತಿಯಿಂದ 2023-24ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬೃಹತ್ ಸಂಘಟನೆ 6 ಲಕ್ಷ ಸರಕಾರಿ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಸಂಘಟನಾತ್ಮಕವಾಗಿ ಹೋರಾಟ ಮಾಡಲಾಗುತ್ತಿದೆ. ಸರ್ಕಾರದ ಜತೆಗೆ ಸಂಘರ್ಷಕ್ಕಿಳಿಯದೇ ಸಂಧಾನದ ಮೂಲಕ 7ನೇ ವೇತನ ಆಯೋಗವನ್ನು ಜಾರಿಗೊಳಿಸಿದ ಹೆಗ್ಗಳಿಕೆ ನಮ್ಮ ಸರ್ಕಾರಿ ನೌಕರರ ಸಂಘಕ್ಕೆ ಸಲ್ಲುತ್ತದೆ ಎಂದರು.
ದೇಶದಲ್ಲಿ ಅಭಿವೃದ್ಧಿ, ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ ನಲ್ಲಿ ನಮ್ಮ ಕರ್ನಾಟಕ ಮೊದಲಸ್ಥಾನದಲ್ಲಿದೆ. ಅಭಿವೃದ್ಧಿ ಸೂಚ್ಯಂಕ ಪಟದಲ್ಲಿ ಐದನೇ ಸ್ಥಾನದಲ್ಲಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ನೌಕರರ ಜನಮುಖಿ, ಸಮಾಜಮುಖಿ, ಗಣನೀಯ ಸೇವೆಗಳೇ ಕಾರಣವಾಗಿದೆ. ಭೂಕುಸಿತ, ಪ್ರವಾಹ, ಕೋವಿಡ್ ಸೇರಿ ಇತರೆ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಕೋಟ್ಯಂತರ ಹಣವನ್ನು ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದ ಹೆಗ್ಗಳಿಕೆ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಸಲ್ಲುತ್ತದೆ ಎಂದರು.
ಗ್ಯಾರಂಟಿ ಯೋಜನೆಗಳ ನಡುವೆ ಸಿಎಂ ಸಿದ್ದರಾಮಯ್ಯ ಅವರು 7ನೇ ವೇತನ ಆಯೋಗ ಜಾರಿಗೊಳಿಸಲು ಸಾಧ್ಯವಾಗುತ್ತಾ ಎಂಬ ಸಂಶಯದಲ್ಲಿದ್ದರು. ಆದರೆ, ಸಂಘದ ರಚನಾತ್ಮಕ, ಕ್ರಿಯಾತ್ಮಕ, ಸಂಘಟನಾತ್ಮಕ ಶಕ್ತಿಗೆ 7ನೇ ವೇತನ ಆಯೋಗ ಯಥಾವತ್ತಾಗಿ ಜಾರಿಯಾಗಲು ಸಾಧ್ಯವಾಯಿತು ಎಂದರು.
ನೌಕರರು ಪ್ರಬುದ್ಧವಾಗಿರುವ ವರ್ಗವಾಗಿದೆ. ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಮುಂದಿನ ಎರಡು ತಿಂಗಳೊಳಗಾಗಿ ಸರ್ಕಾರಿ ನೌಕರರ ಹಾಗೂ ಅವರ ಕುಟುಂಬಗಳಿಗೆ ಉಚಿತವಾಗಿ ಆರೋಗ್ಯ ವಿಮೆ ದೊರೆಯುವ ನಿಟ್ಟಿನಲ್ಲಿ ಯೋಜನೆ ಜಾರಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ರವಿ ಗುಂಜೀಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸರ್ಕಾರಿ ನೌಕರರ ಸಂಘದ ಹೋರಾಟದ ಫಲವಾಗಿ ರಾಜ್ಯ ಸರ್ಕಾರದ ಆರ್ಥಿಕ ಮುಗ್ಗಟ್ಟಿನ ಸಮಯದಲ್ಲೂ 7ನೇ ವೇತನ ಆಯೋಗ ಜಾರಿಯಾಗಲು ಸಾಧ್ಯವಾಗಿರುವುದು ನಮಗೆ ಹೆಮ್ಮೆಯ ವಿಷಯ. 7ನೇ ವೇತನ ಆಯೋಗ ಅನುಷ್ಠಾನಗೊಳಿಸಲು ಹೋರಾಟ ನಡೆಸಿದ
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು. ಆರೋಗ್ಯ ವಿಮೆ ಯೋಜನೆ ಅನುಷ್ಠಾನಗೊಳಿಸುವುದು ಬಾಕಿಯಿದ್ದು, ಅದನ್ನು ಕೂಡ ನೆರವೇರಿಸಲು ಹೋರಾಟ ಮುಂದುವರಿಸುವುದಾಗಿ ಹೇಳಿದರು.
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಬಸವರಾಜ ಬಳ್ಳಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಶ್ರೀನಿವಾಸ್, ಖಜಾಂಚಿ ಡಾ. ಎಸ್. ಸಿದ್ಧರಾಮಣ್ಣ, ಬಿ.ಎಚ್. ವೆಂಕಟೇಶಯ್ಯ, ಎಂ.ವಿ. ರುದ್ರಪ್ಪ, ಎಸ್. ಬಸವರಾಜು, ಆರ್. ಮೋಹನಕುಮಾರ, ಡಾ. ಸದಾನಂದ ನೆಲ್ಕುದ್ರಿ, ಜಿಲ್ಲಾ ಸಂಘದ ಕೋಶಾಧ್ಯಕ್ಷ ಸತೀಶ ಕಟ್ಟಿಮನಿ, ರಾಜ್ಯ ಪರಿಷತ್ ಸದಸ್ಯ ಡಾ. ಶರಣು ಗೋಗೇರಿ, ಜಿಲ್ಲಾ ಕಾರ್ಯದರ್ಶಿ ಕೆ.ಬಿ. ಕೊಣ್ಣೂರ ಇತರರು ಇದ್ದರು.