

ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಸಂಸ್ಥೆಯ ಮೈದಾನದಲ್ಲಿ ಸ್ವತಃ ತಾವೇ ತಯಾರಿಸಿದ ಗಾಳಿ ಪಟಗಳನ್ನು ಆಕಾಶಕ್ಕೆ ಹಾರಿಸಿ ಗಗನಕ್ಕೆ ಚುಂಬಿಸಿದರು.
ಮಕ್ಕಳು ಬಣ್ಣ ಬಣ್ಣದ ಕಾಗದ, ತೆಳು ಪ್ಲಾಸ್ಟಿಕ್ ಹಾಳೆ ಅಥವಾ ಬಟ್ಟೆಯನ್ನು ಬಳಸಿ, ಬಿದಿರಿನ ಕಡ್ಡಿಗಳು, ಅಂಟಿನ ಡಬ್ಬಿ ಹಾಗೂ ಉದ್ದನೆಯ ಸಾದಾರಣ ದಾರವನ್ನು ತಾವೇ ಮನೆಯಿಂದ ತೆಗೆದುಕೊಂಡು ಬಂದು ಶಾಲೆಯ ನೀತಿ ಶಿಕ್ಷಣ ಅವಧಿಯಲ್ಲಿ ಮಾರ್ಗದರ್ಶಿ ಶಿಕ್ಷಕರು ಸೂಚಿಸಿದಂತೆ, ವಿವಿಧ ರೀತಿಯ ಚೌಕಾಕಾರದಲ್ಲಿ ಪಟಗಳನ್ನು ತಯಾರಿಸಿ, ಪಟಗಳಿಗೆ ಒಂದು ಉದ್ದನೆಯ ದಾರವನ್ನು ಕಟ್ಟಿ, ಗಾಳಿಪಟದ ಕೆಳಗಿನ ಭಾಗದಲ್ಲಿ ಸ್ವಲ್ಪ ಉದ್ದನೆಯ ಪಟ್ಟಿಯ ರೂಪದಲ್ಲಿ ಬಾಲಂಗೋಚಿಯನ್ನು ಕಟ್ಟಿ, ಹೆಚ್ಚು ಗಾಳಿ ಬೀಸುವ ಸಂಸ್ಥೆಯ ಮೈದಾನದಲ್ಲಿ ಮಕ್ಕಳು ಅತೀ ಉಲ್ಲಾಸದಿಂದ ಗಗನಕ್ಕೆ ಪಟಗಳನ್ನು ಹಾರಿಸಿ, ಕುಣಿದು ಕುಪ್ಪಳಿಸಿದರು. ಭಾರತದ ಸಂಸ್ಕೃತಿ ಸಂಭ್ರಮವನ್ನು ಬಿಂಬಿಸುವ ಗಾಳಿ ಪಟಗಳನ್ನು ಶಾಲಾ ಮಕ್ಕಳು ಹಾರಿಸಿದ ಪರಿ ನೋಡಿ ಶಿಕ್ಷಕರು, ಇತರೆ ಮಕ್ಕಳು, ಪಾಲಕರು ಹಾಗೂ ಸಾರ್ವಜನಿಕರು ಚಪ್ಪಾಳೆ ತಟ್ಟಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತದಲ್ಲಿ ಹಲವು ಭಾಗಗಳಲ್ಲಿ ಮಕರ ಸಂಕ್ರಾಂತಿ, ಕಾರ ಹುಣ್ಣುಮೆ ಸಂದರ್ಭದಲ್ಲಿ ಗಾಳಿಪಟಗಳನ್ನು ಹಾರಿಸುವ ಪದ್ಧತಿ ಇದೆ. ಹಾಗೆಯೇ ದೇಶದ ಅನೇಕ ಭಾಗಗಳಲ್ಲಿ ಸಾಮಾನ್ಯವಾಗಿ ಹಬ್ಬ, ಅಥವಾ ಜಾತ್ರೆಯ ಸಂದರ್ಭದಲ್ಲಿ ಗಾಳಿಪಟಗಳ ಉತ್ಸವ ಜರುಗುತ್ತವೆ, ಹಾಗೆಯೇ ನಮ್ಮ ಶಾಲಾ ಮಕ್ಕಳು ತಮ್ಮ ತಮ್ಮ ಸೃಜನಶೀಲತೆಯಿಂದ ಸ್ವತಃ ತಾವೇ ಗಾಳಿಪಟಗಳನ್ನು ತಯಾರಿಸಿ, ಆಕಾಶಕ್ಕೆ ಹಾರಿಸಿ, ಮಕ್ಕಳು ಕೂಡ ಅತೀ ಮೇಲೆ ಹಾರಿದ ಗಾಳಿಪಟದ ಹಾಗೇ ತಮ್ಮ ಅಭ್ಯಾಸ ಹಾಗೂ ಉತ್ತಮ ಸಾಧನೆ ಮಾಡಬೇಕೆಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಮಕ್ಕಳಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಸಮಸ್ತ ಶಿಕ್ಷಕ/ಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.