ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಮಾತನಾಡಿ ಗದಗ ನಗರದಲ್ಲಿ ಕಳೆದ ಬಾರಿಯ ದಾಖಲಾತಿಗಿಂತ 700 ಕ್ಕೂ ಅಧಿಕ ಮಕ್ಕಳ ಪ್ರವೇಶ ಆಗುವುದು ಬಾಕಿ ಇದೆ. ಶಿರಹಟ್ಟಿ ತಾಲೂಕಿನಲ್ಲೂ ಕಳೆದ ಬಾರಿಗಿಂತ 1300 ಕ್ಕೂ ಹೆಚ್ಚು 1ನೇ ತರಗತಿಗೆ ಪ್ರವೇಶ ಬಾಕಿ ಇದೆ. ಅದೇ ರೀತಿ ರೋಣ, ಮುಂಡರಗಿಯಲ್ಲಿ ಇದೇ ಪರಿಸ್ಥಿತಿ ಇದೆ. ಜುಲೈ ತಿಂಗಳೊಳಗಾಗಿ ಪ್ರವೇಶ ಪ್ರಕ್ರಿಯೆ ಅಧಿಕಗೊಳ್ಳಬೇಕು ಎಂದು ಸಚಿವ ಎಚ್.ಕೆ. ಪಾಟೀಲ ನಿರ್ದೇಶನ ನೀಡಿದರು.
ಶಾಲಾ ಶೌಚಾಲಯ ದುರಸ್ತಿ ಬಗ್ಗೆ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ಶಾಲಾ ಶೌಚಾಲಯಗಳ ಕಡಿಮೆ ದುರಸ್ತಿಗೆ 5 ಕೋಟಿಗೂ ಅಧಿಕ ಹಣ ಬೇಕು. ಪೂರ್ಣ ದುರಸ್ತಿಗೆ 26 ಕೋಟಿ ಅಗತ್ಯವಿದೆ. ಹಾಗಾಗಿ, ದುರಸ್ತಿಗೆ ಶೇ. 50 ರಷ್ಟು ಅನುದಾನ ನೀಡಬೇಕು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕೋರಿದರು.
ಜಿಲ್ಲೆಯಲ್ಲಿ ಓದಿನ ಮನೆ ಮೂಲಕ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕ್ರಮ ವಹಿಸಿದೆ ಅದೇ ರೀತಿ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಪಿಂಕ್ ಟಾಯ್ಲೆಟ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಎರಡೂ ಯೋಜನೆಗಳು ಉತ್ತಮವಾಗಿದ್ದು ಅವುಗಳನ್ನು ರಾಜ್ಯಾದ್ಯಂತ ವಿಸ್ತರಿಸಬೇಕು ಎಂದರು.
ಪ್ರತಿ ವರ್ಷ ಶಾಲಾ ಆರಂಭಕ್ಕೂ ಮೊದಲು ಲೋಕೋಯೋಗಿ ಇಲಾಖೆ ಇಂಜನೀಯರ್ ಗಳು ಶಾಲಾ ಕಟ್ಟಡಗಳ ಪರಿಶೀಲಿಸಿ ಬಳಕೆಗೆ ಯೋಗ್ಯವಾಗಿರುವ ಕುರಿತು ವರದಿ ನೀಡಬೇಕು. ಈ ವರ್ಷ ಈಗಾಗಲೇ ಶಾಲೆಗಳು ಆರಂಭವಾಗಿದ್ದು ಜಿಲ್ಲೆಯಲ್ಲಿ ಅಗಸ್ಟ 15 ರೊಳಗಾಗಿ ಶಾಲಾ ಕೊಠಡಿಗಳು ಬಳಕೆಗೆ ಯೋಗ್ಯವಾಗಿರುವ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದರು.
ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರು ಮಾತನಾಡಿ ಆದ್ರಳ್ಳಿಯಲ್ಲಿರುವ ಶಾಲೆಯಲ್ಲಿ 650 ಕ್ಕೂ ಹೆಚ್ಚು ಅಧಿಕ ಮಕ್ಕಳು ದಾಖಲಾತಿಯಿದೆ. ಆದಕಾರಣ ಆ ಶಾಲೆಯನ್ನು ಕೆಪಿಎಸ್ (ಕರ್ನಾಟಕ ಪಬ್ಲಿಕ ಶಾಲೆಯನ್ನಾಗಿ ) ಮಾಡಬೇಕು ಎಂದು ಸಚಿವರ ಗಮನಕ್ಕೆ ತಂದರು.
ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ ಜಿಲ್ಲೆಯಲ್ಲಿಯ ಹಳೆ ಶಾಲಾ ಕಟ್ಟಡಗಳಿಗೆ ಕಾಯಕಲ್ಪ ಆಗಬೇಕಿದೆ. ಜಿಲ್ಲೆ ಶೈಕ್ಷಣಿಕ ಸಾಧನೆಯಲ್ಲಿ ಹಿಂದೆ ಇರುವುದು ಖೇದಕರ ಸಂಗತಿಯಾಗಿದೆ. ಫಲಿತಾಂಶ ಸುಧಾರಣೆಗೆ ಒತ್ತುನೀಡಬೇಕಿದೆ. ಮುಂಡರಗಿ ತಾಲೂಕಾ ಕೇಂದ್ರದಲ್ಲಿ ಸರ್ಕಾರಿಪ್ರೌಢಶಾಲೆ ಈವರೆಗೂ ಸ್ಥಾಪನೆಯಾಗಿಲ್ಲ. ಶಿಕ್ಷಣ ಸಚಿವರು ಈ ಕುರಿತು ಗಮನ ಹರಿಸಬೇಕು. ದ್ವಿಭಾಷಾ ನೀತಿ ಸ್ವಾಗತಾರ್ಹವಾಗಿದೆ. ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದೊಂದು ಸರ್ಕಾರದ ಉತ್ತಮ ನಿರ್ಧಾರವಾಗಿದೆ ಎಂದರು.
ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ ಮಾತನಾಡಿ ಕಳೆದ ವಾರ ದೀಯುದಮನ್ ದ್ವೀಪಕ್ಕೆ ತೆರಳಿದಾಗ ಒಂದೇ ಸರ್ಕಾರಿ ಶಾಲೆಯಲ್ಲಿ 12000 ಕ್ಕೂ ಅಧಿಕ ವಿದ್ಯಾರ್ಥಿಗಳಿರುವುದು ಗಮನಿಸಲಾಗಿದೆ. ಅಲ್ಲಿರುವ ಮೂಲಭೂತ ಸೌಕರ್ಯ, ವ್ಯವಸ್ಥೆ ಉತ್ತಮವಾಗಿತ್ತು. ಅದರಂತೆ ರಾಜ್ಯದಲ್ಲಿ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಹೆಚ್ಚಿನ ಒತ್ತು ನೀಡುವಂತಾಗಲಿ ಎಂದರು.