

ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ಸಭೆ
ವಿಜಯವಾಣಿ ಸುದ್ದಿಜಾಲ ಗದಗ
ಶಿಕ್ಷಣ ಇಲಾಖೆಯಲ್ಲಿ ಕಳೆದ ಬಾರಿಗಿಂತ ಹಾಜರಾತಿ ಕಡಿಮೆ ಇದ್ದ ಶಾಲೆಗಳ ಬಗ್ಗೆ ಗಮನ ವಹಿಸಿ ಮಕ್ಕಳನ್ನು ಶಾಲೆಗೆ ಕರೆತರಬೇಕು. ಸರ್ಕಾರಿ ಶಾಲೆಯಲ್ಲಿ ಶೇ. 97 ಪ್ರತಿಶತ ಮಕ್ಕಳ ಹಾಜರಾತಿ ಕಡ್ಡಾಯ ಇರುವಂತೆ ಶಿಕ್ಷಕರು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶ ಕಡಿಮೆ ಆಗಿರಬಹುದು. ಆದರೆ ಮಕ್ಕಳಿಗೆ ನಕಲು ಮಾಡಲು ಬಿಟ್ಟುಕೊಟ್ಟಿಲ್ಲ. ಶಿಕ್ಷಕರ ಮೂಲಕ ಮಕ್ಕಳಿಗೆ ಮೇಲಿಂದಮೇಲೆ ಪರೀಕ್ಷೆಗಳನ್ನು ನಡೆಸಿ, ಮಕ್ಕಳು ಸ್ವಂತ ಬಲದಿಂದ ಬರೆಯುವಂತೆ ನೋಡಿಕೊಳ್ಳಲಾಯಿತು. ಹಾಗಾಗಿ ಫಲಿತಾಂಶ ಕಡಿಮೆ ಬಂದರೂ ಉತ್ತಮ್ಮ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.
ಶಾಲಾ ಕೊಠಡಿಗಳ ದುರಸ್ತಿ, ಹೊಸ ಕಟ್ಟಡಗಳಿಗೆ ಅನುದಾನ ಸಿಗಬೇಕು ಎಂದು ಸಚಿವರು, ಶಾಸಕರು ಆಗ್ರಹಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕಳೆದ ಬಾರಿಗಿಂತ ಅಧಿಕ ಅನುದಾನವನ್ನು ಶಿಕ್ಷಣ ಇಲಾಖೆಗೆ ನೀಡಿದ್ದಾರೆ. ಎಲ್ಲರ ನಿರೀಕ್ಷೆ ಗಿಂತಲೂ ಅಧಿಕ ಅನುದಾನ ಲಭ್ಯವಾಗಲಿದೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಸರ್ಕಾರದಿಂದ ಎಲ್ ಕೆ ಜಿ, ಯುಕೆಜಿ ಆರಂಭಿಸಲಾಗಿದೆ. ಕಳೆದ ವರ್ಷ ಕಲ್ಯಾಣ ಕರ್ನಾಟಕದಲ್ಲಿ ಆರಂಭಿಸಲಾಗಿತ್ತು. ಈ ಬಾರಿ ರಾಜ್ಯದ ಉಳಿದ ಭಾಗಗಳಲ್ಲಿ 4000 ಶಾಲೆಗಳಲ್ಲಿ ಎಲ್ ಕೆ ಜಿ, ಯುಕೆಜಿ ಆರಂಭಿಸಲಾಗುತ್ತಿದೆ. ಗದಗ ಜಿಲ್ಲೆಯಲ್ಲಿ 65 ಎಲ್ ಕೆ ಜಿ, ಯುಕೆಜಿ ಅನುಮೋದನೆ ನೀಡಲಾಗಿತ್ತು. ಇನ್ನೂ ಹೆಚ್ಚಿನ ಎಲ್ ಕೆ ಜಿ, ಯುಕೆಜಿಗೆ ಅನುಮೋದನೆ ನೀಡಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.
ರಾಜ್ಯದಲ್ಲಿ ಇನ್ನೂ 500 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುವುದು. 2000 ಕೋಟಿ ಬಜೆಟ್ ಇದ್ದು, ಅನುದಾನಕ್ಕೆ ಕೊರತೆ ಇಲ್ಲ. ಕೆಲ ಶಾಲೆಗಳಲ್ಲಿ 5 ಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳನ್ನು ಕೆಪಿಎಸ್ ಶಾಲೆಗೆ ನೋಂದಣಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಈ ಸಮಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಮಧು ಬಂಗಾರಪ್ಪ ಹೇಳಿದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಗದಗ ನಗರದಲ್ಲಿ ಕಳೆದ ಬಾರಿಗಿಂತ 700 ಕ್ಕೂ ಅಧಿಕ ಮಕ್ಕಳ ಪ್ರವೇಶ ಆಗುವುದು ಬಾಕಿ ಇದೆ. ಶಿರಹಟ್ಟಿ ತಾಲೂಕಿನಲ್ಲೂ ಕಳೆದ ಬಾರಿಗಿಂತ 1300 ಕ್ಕೂ ಹೆಚ್ಚು 1ನೇ ತರಗತಿಗೆ ಪ್ರವೇಶ ಬಾಕಿ ಇದೆ. ಅದೇ ರೀತಿ ರೋಣ, ಮುಂಡರಗಿಯಲ್ಲಿ ಇದೇ ಪರಿಸ್ಥಿತಿ ಇದೆ. ಜುಲೈ ತಿಂಗಳೊಳಗಾಗಿ ಪ್ರವೇಶ ಪ್ರಕ್ರಿಯೆ ಅಧಿಕಗೊಳ್ಳಬೇಕು ಎಂದು ಸಚಿವ ಎಚ್.ಕೆ. ಪಾಟೀಲ ನಿರ್ದೇಶನ ನೀಡಿದರು.
ಶಾಲಾ ಶೌಚಾಲಯ ದುರಸ್ತಿ ಬಗ್ಗೆ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ಶಾಲಾ ಶೌಚಾಲಯಗಳ ಕಡಿಮೆ ದುರಸ್ತಿಗೆ 5 ಕೋಟಿಗೂ ಅಧಿಕ ಹಣ ಬೇಕು. ಪೂರ್ಣ ದುರಸ್ತಿಗೆ 26 ಕೋಟಿ ಅಗತ್ಯವಿದೆ. ಹಾಗಾಗಿ, ದುರಸ್ತಿಗೆ ಶೇ. 50 ರಷ್ಟು ಅನುದಾನ ನೀಡಬೇಕು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಆಗ್ರಹಿಸಿದರು.
ಶಾಸಕ ಜಿ.ಎಸ್. ಪಾಟೀಲ, ಎಸ್.ವಿ. ಸಂಕನೂರು, ಚಂದ್ರು ಲಮಾಣಿ, ಬಿ.ಬಿ. ಅಸೂಟಿ, ಸಿ.ಎನ್. ಶ್ರೀಧರ, ಭರತ ಎಸ್ ಇತರರು ಇದ್ದರು.
ಕೋಟ್:
ಕೊಠಡಿಗಳ ದುರಸ್ತಿಗಳಿಗೆ ಅನುದಾನ ಅಗತ್ಯವಿದೆ. ಮುಂಡರಗಿ ಮತ್ತು ನರೇಗಲ್ ಪಟ್ಟಣದಲ್ಲಿ ಶಿಕ್ಷಕರ ನೇಮಕಾತಿಗೆ ಅನುಮೋದನೆ, ಹೈಸ್ಕೂಲ್ ಶಾಲಾ ಮಂಜೂರಾತಿ ಅಗತ್ಯವಿದೆ. ಈ ಬಗ್ಗೆ ಶಿಕ್ಷಣ ಅಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅಗತ್ಯ ಇರುವೆಡೆಗೆ ಶಾಲಾ ಮಂಜೂರು ನೀಡಲು ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ.
* ಜಿ.ಎಸ್. ಪಾಟೀಲ, ಶಾಸಕ .
ಕೋಟ್:
ಶಿಕ್ಷಕರ ಆನ್ಲೈನ್ ಹಾಜರಾತಿ, ಶಾಲಾ ಶೌಚಾಲಯ ದುರಸ್ತಿ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಮರಳಿ ಕರೆತರುವ ಯೋಜನೆ ಹಾಗೂ ಮಾದರಿ ಶಾಲಾ ಕೊಠಡಿ ನಿರ್ಮಾಣ ಮಾಡಲು ಸಚಿವ ಎಚ್.ಕೆ. ಪಾಟೀಲ ಅವರು ನಿರ್ದೇಶನ ನೀಡಿದ್ದರು. ಎಚ್.ಕೆ. ಪಾಟೀಲ ಅವರ ನಿರ್ದೇಶನಂತೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ.
* ಆರ್.ಎಸ್. ಬುರಡಿ, ಡಿಡಿಪಿಐ.
ಕಸ್ತೂರಿ ಬಾ ಶಾಲೆ ಬಗ್ಗೆ ಚರ್ಚೆ
ವಸತಿ ಶಾಲೆ ಗಳಾಗಿದ್ದು, ವಸತಿ ಮತ್ತು ಶೈಕ್ಷಣಿಕ ಕೊಠಡಿ ಒಂದೇ ಆಗಿದ್ದು, ಮೂಲ ಭೂತ ಸೌಕರ್ಯ ಇಲ್ಲದಿರುವ ಶಾಲೆಗಳ ಬಗ್ಗೆ ನನ್ನ ಗಮನಕ್ಕೆ ತರಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಗೊಜನೂರು ಕಸ್ತೂರಿ ಬಾ ವಸತಿ ಶಾಲೆ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ಜರುಗಿತು. ಈ ಬಗ್ಗೆ ಬೆಂಗಳೂರಿನಲ್ಲಿ ಗುರುವಾರ ಸಭೆ ನಡೆಸಿ ಅಗತ್ಯ ಸೌಲಭ್ಯ ಒದಗಿಸಿ ಕೊಡಲಾಗುವುದು. ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಬನ್ನಿ ಎಂದು ಡಿಡಿಪಿಐ ಅವರಿಗೆ ಶಿಕ್ಷಣ ಸಚಿವ ಬಂಗಾರಪ್ಪ ಸೂಚಿಸಿದರು.
ಶೌಚಾಲಯ ನಿರ್ವಹಣೆಗೆ ಅನುದಾನ ಸಿಗುತ್ತಿಲ್ಲ:
ಶಾಲಾ ಶೌಚಾಲಯ ನಿರ್ವಹಣೆಗೆ ಸರ್ಕಾರದಿಂದ ಅಗತ್ಯ ಅನುದಾನ ಸಿಗುತ್ತಿಲ್ಲ ಎಂದು ಶಾಸಕ ಚಂದ್ರು ಲಮಾಣಿ ವಿಷಯ ಪ್ರಸ್ತಾಪಿಸಿದರು. ಈ ಬಗ್ಗೆ ಮಾತನಾಡಿದ ಸಚಿವ ಬಂಗಾರಪ್ಪ ಅವರು, ಈ ಕುರಿತು ಉನ್ನತ ಮಟ್ಟದಲ್ಲಿ ಸಭೆ ನಡೆದಿದೆ. ವಿವಿಧ ರೀತಿಯಲ್ಲಿ ಸರ್ಕಾರದಿಂದ ಶಾಲಾ ಅಭಿವೃದ್ಧಿ ಸಮಿತಿಗೆ ಅನುದಾನ ನೀಡಲಾಗುತ್ತಿದೆ. ಆದರೆ ಆ ಅನುದಾನದಲ್ಲಿ ಶೌಚಾಲಯ ನಿರ್ವಹಣೆಗೆ ಇಂತಿಷ್ಟೇ ಹಣ ಬಳಕೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿಲ್ಲ. ಶಾಲಾ ಅಭಿವೃದ್ಧಿ ಸಮಿತಿಗೆ ಶೌಚಾಲಯ ನಿರ್ವಹಣೆಗೆ ಅನುದಾನ ಮಿತಿ ನೀಡಿ ಸರ್ಕಾರದಿಂದ ಆದೇಶ ಮಾಡಲಾಗುವುದು ಎಂದು ತಿಳಿಸಿದರು.
ಎಸ್.ವಿ. ಸಂಕನೂರು ಆಗ್ರಹ:
ಶೇ. 60 ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲಾ ಶಿಕ್ಷಕರಿಗೆ ನೋಟೀಸ್ ನೀಡುವ, ಅವರ ಬಡ್ತಿ, ಡಿಎ ಸೇರಿದಂತೆ ಮುಂತಾದ ಸೌಲಭ್ಯ ತಡೆಹಿಡಿಯುವ ಸರ್ಕಾರದ ಆದೇಶವನ್ನು ತಕ್ಷಣದಿಂದಲೇ ತಡೆ ಹಿಡಿಯಬೇಕು ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರು ಆಗ್ರಹಿಸಿದರು. ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಒತ್ತಾಯಿಸಿದ ಅವರು, ಇದ್ಯಾವ ನ್ಯಾಯ? ಅನೇಕ ಕಾರಣಗಳಿಂದ ಶಾಲಾ ಫಲಿತಾಂಶ ಕಡಿಮೆ ಆಗುತ್ತದೆ. ಅದಕ್ಕೆ ಶಿಕ್ಷಕರನ್ನು ದೋಷಿಸುವುದು ಸರಿಯಲ್ಲ. ಸರ್ಕಾರ ತಮ್ಮ ನಿರ್ದಾರ ಬದಲಿಸಬೇಕು ಎಂದು ಸಂಕನೂರು ಆಗ್ರಹಿಸಿದರು. ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿ, ಬುಧವಾರ ಬೆಂಗಳೂರಿನಲ್ಲಿ ಸಭೆ ಸೇರಿ ಈ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ. ನೀವು ಸಭೆಗೆ ಹಾಜರಿರಬೇಕು ಎಂದು ತಿಳಿಸಿದರು.
ಸಭೆಯ ಹೈಲೆಟ್ಸ:
* ಜಿಲ್ಲೆಯಲ್ಲಿ ಜಾರಿಯಾದ ಪಿಂಕ್ ಟಾಯ್ಲೆಟ್ ಪರಿಕಲ್ಪನೆ, ರಾತ್ರಿ ಓದಿನ ಮನೆಗೆ ಕಲ್ಪನೆಯನ್ನು ರಾಜ್ಯಕ್ಕೆ ವಿಸ್ತರಿಸಲಾಗುವುದು.
* ಅನುದಾನಿತ ಶಾಲೆಗಳಲ್ಲಿ 2015 ರಿಂದ 2020 ವರೆಗೆ ವಿವಿಧ ಕಾರಣದಿಂದ ತೆರವಾದ ಹುದ್ದೆಗಳ ನೇಮಕಾತಿಗೆ ಶೀಘ್ರ ಅನುಮೋದನೆ.
* ಶೇ.97 ರಷ್ಟು ಹಾಜರಾತಿಗೆ ಕ್ರಮ ವಹಿಸಬೇಕು.
* ಶಾಲಾ ಕೊಠಡಿಗಳ ಕ್ಷಮತೆ ಬಗ್ಗೆ ಪ್ರತಿ ವರ್ಷ ಜೂನ. 1 ರ ಒಳಗಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶಾಲಾ ಕೊಠಡಿಗಳ ಜೀವಿತಾವಧಿ ಬಗ್ಗೆ ಪ್ರಮಾಣಪತ್ರ ನೀಡುವುದು ಕಡ್ಡಾಯ.
* ನಗರದ ಸಿದ್ರಾಮೇಶ್ವರ ನಗರದ ಶಾಲೆಯಲ್ಲಿ ಮೌಲಾನಾ ಆಜಾದ ಶಾಲೆಯನ್ನು ಮತ್ತು ಅದೇ ಶಾಲೆಯ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ನಡೆಸುತ್ತಿರುವ ಬಗ್ಗೆ ಸಭೆಯಲ್ಲಿ ಸವಿವತು ಬೇಸರ ವ್ಯಕದತಪಡಿಸಿದರು. ನಾಳೆಯಿಂದ ಸೂಕ್ತ ಕೊಠಡಿ ವ್ಯವಸ್ಥೆ ಮಾಡುವಂತೆ ಎಚ್.ಕೆ. ಪಾಟೀಲ ನಿರ್ದೇಶನ.