

ಡಿ.ಆರ್. ಪಾಟೀಲ ನಮ್ಮ ಕುಟುಂಬದ ಗೌರವ: ಎಚ್.ಕೆ. ಪಾಟೀಲ
ವಿಜಯವಾಣಿ ಸುದ್ದಿಜಾಲ ಗದಗ
ನಗರದ ತೊಂಟದಾರ್ಯ ಮಠದಲ್ಲಿ ಬುಧವಾರ "ಸಂತ ರಾಜಕಾರಣಿ ಡಿ.ಆರ್. ಪಾಟೀಲ' ಗ್ರಂಥ ಬಿಡುಗಡೆ ಕಾರ್ಯಕ್ರಮ ಜರುಗಿತು. "ಡಿ.ಆರ್. ಪಾಟೀಲ ಅವರಂತಹ ಮೇರು ವ್ಯಕ್ತಿತ್ವದ ರಾಜಕಾರಣಿ ವಿಧಾನ ಮಂಡಲದಲ್ಲಿ ಇರಬೇಕಿತ್ತು' ಎಂದು ವೇದಿಕೆಯಲ್ಲಿದ್ದ ಗಣ್ಯರು ಭಾಷಣದಲ್ಲಿ ಉಲ್ಲೇಖಿಸುದರ ಜತೆಗೆ ಇಂದಿನ ರಾಜಕಿಯ ವ್ಯವಸ್ಥೆಯಲ್ಲಿ ಡಿ.ಆರ್. ಪಾಟೀಲರಂತಹ ರಾಜಕಾರಣಿಯನ್ನು ವಿಧಾನಮಂಡಲದಲ್ಲಿ ಊಹಿಸುವುದಕ್ಕೂ ಕಷ್ಟ ಎಂಬಂತೆ ವ್ಯವಸ್ಥೆ ಕುಲಗೆಟ್ಟಿದೆ ಎಂದು ಆತ್ಮವಿಮರ್ಶೆ ಮಾಡಿಕೊಂಡರು. ಎಚ್. ಕೆ. ಪಾಟೀಲರು ತಮ್ಮ ಭಾಷಣದಲ್ಲಿ, ಡಿ.ಆರ್. ಪಾಟೀಲ ನಮ್ಮ ಕುಟುಂಬದ ಗೌರವ ಎಂದು ಎಚ್.ಕೆ. ಪಾಟೀಲರು ವೇದಿಕೆಯಲ್ಲಿ ಭಾವನಾತ್ಮಕ ಮಾತುಗಳನ್ನಾಡಿದ್ದು ನೆರೆದ ಜನರನ್ನು ಭಾವುಕಗೊಳಿಸಿತು. ರಾಜಕೀಯ ಜೀವನದಲ್ಲಿ ಪರಸ್ಪರ ತ್ಯಾಗದ ಕುರಿತು, ಎಚ್.ಕೆ. ಪಾಟೀಲ ಮತ್ತು ಡಿ.ಆರ್. ಪಾಟೀಲ ಅವರು ತಮ್ಮ ಸಹೋದರತ್ವ ಮತ್ತು ರಾಜಕೀಯ ಸಂಬಂಧಗಳ ಒಳಪುಟಗಳ ಕುರಿತು ಲೋಕಾಭಿಮಾನರಾಗಿ ಹಂಚಿಕೊಂಡರು. ಇದರಿಂದ ವೇದಿಕೆಯ ಕಳೆ ಮತ್ತಷ್ಟು ವ್ಯಾಪಿಸಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ತಂದೆಯವರಾದ ಕೆ.ಎಚ್. ಪಾಟೀಲರು ದಿವಂಗತರಾದ ನಂತರ ನಮ್ಮ ಮನೆತನದ ಗೌರವವನ್ನು ಮತ್ತಷ್ಟು ಹಿರಿಮೆಗೊಳಿಸಿದವರು ಸಹೋದರ ಡಿ.ಆರ್. ಪಾಟೀಲರು. ಅವರ ನಾಯಕತ್ವ ಬಳುವಳಿಯಾಗಿ ಬರುವುದು ಕಷ್ಟಸಾಧ್ಯ. ನಮ್ಮನ್ನು ಪರೀಕ್ಷೆಗೆ ಒಳಪಡಿಸಿ, ನಮಗೆ ಯಶಸ್ಸು ತಂದುಕೊಟ್ಟು, ನಮ್ಮ ಯಶಸ್ಸಿನಲ್ಲಿ ಅವರು ಯಶಸ್ಸು ಕಾಣುತ್ತಾರೆ. ದಿವಂಗತ ಕೆ.ಎಚ್. ಪಾಟೀಲ ಅವರ ನಿರ್ದೇಶನಗಳನ್ನು ಅನುಷ್ಠಾನ ಮಾಡಲು ಡಿ.ಆರ್. ಪಾಟೀಲ ಅವರು ತಮ್ಮ ಅರ್ಧ ಜೀವನವನ್ನೇ ಮುಡಿಪಾಗಿಟ್ಟರು. ಜಿಲ್ಲೆಯಲ್ಲಿ ಅಭಿವೃದ್ಧಿಪರ ಬದಲಾವಣೆ ತರಲು ಹಿರಿಯ ಸಹೋದರ ಡಿ.ಆರ್. ಪಾಟೀಲ ಅವರ ಶ್ರಮ ಮತ್ತು ಲಿಂಗೈಕ್ಯ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಇದೆ. ರೈತರನ್ನು ಶೋಷಣೆಯಿಂದ ಮುಕ್ತಗೊಳಿಸಲು, ಎಪಿಎಂಸಿಗಳಲ್ಲಿ ಭ್ರಷ್ಟಾಚಾರ ಮುಕ್ತಮಾಡಲು ಡಿ.ಆರ್. ಪಾಟೀಲ ಮಾದರಿ ಕೆಲಸ ಮಾಡಿದ್ದಾರೆ. ಗ್ರಾಮಸ್ವರಾಜ್ಯ ನೀತಿ ಜಾರಿಗೆ ಅವರ ಆಗ್ರಹ ಮೊದಲಿನಿಂದಲೂ ಇದೆ ಎಂದರು. ಅವರ ಮಾರ್ಗದರ್ಶನ, ಸರಳತೆ ನಮಗೆ ಆದರ್ಶ ಎಂದರು.
ಸಂಬಂಧಗಳು ಸುಧಾರಿಸಿದವು:
ಎಚ್.ಕೆ. ಪಾಟೀಲರು ತಮ್ಮ ಆರಂಭಿಕ ರಾಜಕೀಯ ಜೀವನವನ್ನು ಸ್ಮರಿಸಿ, ಮೊದಲ ಬಾರಿಗೆ ಎಂಎಲ್ಸಿ ಆದ ಸಂದರ್ಭದಲ್ಲಿ ತೋಂಟದಾರ್ಯ ಸಿದ್ಧಲಿಂಗೇಶ್ವರ ಟ್ರಸ್ಟ್ ಗೆ ನನ್ನನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು. ಅದಕ್ಕೆ ವಿರೋಧ ವ್ಯಕ್ತವಾಗಿತ್ತು. ಅಂದು ಡಿ.ಆರ್. ಪಾಟೀಲರು ತೋಂಟದಾರ್ಯ ಶ್ರೀಗಳ ಬಳಿ ನನ್ನನ್ನು ಕರೆದುಕೊಂಡು ಹೋಗಿದ್ದರು ಮತ್ತು ಶ್ರೀಗಳ ಮಾರ್ಗದರ್ಶನದಂತೆ ಟ್ರಸ್ಟ್ ನಲ್ಲಿ ಕಾರ್ಯನಿರ್ವಹಿಸಲು ಸೂಚಿಸಿದ್ದರು. ಅಂದಿನಿಂದ ತೋಂಟದಾರ್ಯ ಮಠ ಮತ್ತು ನಮ್ಮ ಕುಟುಂಬದ ಸಂಬಂಧ ಸುಧಾರಿಸಿದರು. ತದನಂತರ ಶ್ರೀಗಳು ಯಾವುದೇ ಸಾಮಾಜಿಕ ನಿರ್ಣಯಗಳನ್ನು ತೆಗೆದುಕೊಳ್ಳಲು ನಮ್ಮನ್ನು ಸಂಪಕಿರ್ಸುತ್ತಿದ್ದರು ಎಂದು ತಿಳಿಸಿದರು.
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಗದಗ ಮಣ್ಣಿನ ಸಂಪ್ರದಾಯದ ರಾಯಭಾರಿಯಂತೆ ಡಿ.ಆರ್. ಪಾಟೀಲ ಇದ್ದಾರೆ. ಗಾಂಧಿವಾದಿ, ಧರ್ಮ ಶ್ರದ್ಧತೆ, ನಾಯಕತ್ವ ಗುಣ ಸೇರಿದಂತೆ ಎಲ್ಲವನ್ನು ಒಳಗೊಳ್ಳುವ ಪ್ರತಿರೂಪವೇ ಡಿ.ಆರ್. ಪಾಟೀಲರು. ಹೊಸ ಮತ್ತು ಹಳೆಯ ರಾಜಕಾರಣಕ್ಕೆ ಕೊಂಡಿಯಂತಿರುವ ಬೆರಳಣಿಕೆಯಷ್ಟು ರಾಜಕಾರಣಿಗಳಲ್ಲಿ ಡಿ.ಆರ್. ಪಾಟೀಲರು ಒಬ್ಬರು ಎಂದರು.
ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಬೆಂಗಳೂರಿನ ಗಾಂಧೀ ಸ್ಮಾರಕನಿಧಿ ಅಧ್ಯಕ್ಷ ವೂಡೆ ಕೃಷ್ಣ ಅವರು, ಡಿ.ಆರ್. ಪಾಟೀಲ ರಾಜಕೀಯ ಜೀವನದಲ್ಲಿ ಎಂದಿಗೂ ತಮ್ಮ ತತ್ವದಿಂದ ಹಿಂದೆ ಸರಿದಿಲ್ಲ. ಬಹುತ್ವವು ನಮ್ಮ ಶಕ್ತಿಯೇ ವಿನಃ ನಮ್ಮ ದೌರ್ಭಲ್ಯವಲ್ಲ ಎಂಬುದನ್ನು ಡಿ.ಆರ್. ಪಾಟೀಲ ಅವರು ಅಳವಡಿಸಿಕೊಂಡು ಬಂದಿದ್ದಾರೆ. ಇನ್ನೊಬ್ಬರಿಗಾಗಿ ಮರುಗುವ ಜೀವ ಅವರದ್ದು. ತುಂಬ ಸರಳ ಜೀವನ ಪದ್ದತಿ, ಪಾರದರ್ಶಕ ಬದುಕು, ಅಜಾತ ಶತ್ರು ಅವರಾಗಿದ್ದಾರೆ. ಸಾರ್ವಜನಿಕ ಪರಿಶುದ್ಧತೆಗೆ ಪ್ರತಿರೂಪವೇ ಡಿ.ಆರ್. ಪಾಟೀಲ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಬದ್ಧತೆಯನ್ನು ಅವರಲ್ಲಿ ನೋಡಿ ಕಲಿಯಬೇಕು. ನಾನು ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದ ಸಂದರ್ಭದಲ್ಲಿ ಗ್ರಾಪಂಗಳಿಗೆ ನೇರವಾಗಿ ಅನುದಾನ ಒದುಗಿಸುವ ಪ್ರಕ್ರಿಯೆಯನ್ನು ಡಿ.ಆರ್. ಪಾಟೀಲರ ಸಲಹೆ ಮೇರೆಗೆ ಆರಂಭೀಸಿದ್ದೇನು. ವಿರೋಧಿಗಳಿಲ್ಲದ್ದ ವ್ಯಕ್ತಿತ್ವ ಡಿ.ಆರ್. ಪಾಟೀಲ ಅವರದ್ದಾಗಿದೆ. ಅವರಿಗೆ ವಿರೋದಿಗಳೇ ಇಲ್ಲ ಎಂದು ಹೊರಟ್ಟಿ ಹೇಳಿದರು.
======
ಅವರಂತಿರಬೇಕು:
ವಿಧಾನಮಂಡಲದಲ್ಲಿ ಡಿ.ಆರ್. ಪಾಟೀಲ ಅವರಂತಹ ರಾಜಕಾರಣಿ ಅವಶ್ಯಕತೆ ಇದೆ ಎಂಬುದನ್ನು ಗಣ್ಯರು ಒತ್ತಿ ಹೇಳಿದರು. ಸೇವಾ ರಾಜಕಾರಣ ಬದಲಾಗಿ ಸ್ವರಾಜಕಾರಣ ನಡೆಯುತ್ತಿದೆ, ಸೇವಾ ರಾಜಕಾರಣದ ಕೊನೆಯ ಕೊಂಡಿಯಾಗಿ ಡಿ.ಆರ್. ಪಾಟೀಲ ಇದ್ದಾರೆ. ಆದರೆ, ಅಂತಹ ಸಂತ ರಾಜಕಾರಣಿ ವಿಧಾನ ಮಂಡಲದಲ್ಲಿ ಇರಬೇಕು ಎನ್ನುವ ವಿಚಾರ ಮಾಡಲು ಊಹಿಸಲಾಗದಷ್ಟು ರಾಜಕಾರಣ ಕಲುಷಿತವಾಗಿದೆ ಎಂದು ಕೃಷ್ಣಬೈರೇಗೌಡ ಬೇಸರ ವ್ತಕ್ತಪಡಿಸಿದರು. ವಿಧಾನಮಂಡಲದಲ್ಲಿ ಡಿ.ಆರ್. ಪಾಟೀಲರು ಬಂದರೆ ಅದೊಂದು ದೇವಸ್ಥಾನಕ್ಕೆ ಸಮಾನ ಆಗುತ್ತದೆ ಎಂದು ಬಸವರಾಜ ಹೊರಟ್ಟಿ ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ಗ್ರಂಥ ಲೇಖಕ ಜೆ.ಕೆ. ಜಮಾದಾರ ಒಳಗೊಂಡು ಗಣ್ಯರನ್ನು ಸನ್ಮಾನಿಸಲಾಯಿತು. ತೋಂಟದ ಸಿದ್ಧರಾಮ ಶ್ರೀಗಳು ಮತ್ತು ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಶ್ರೀಗಳು ಸಾನ್ನಿದ್ಯ ವಹಿಸಿದ್ದರು. ಡಿ.ಆರ್. ಪಾಟೀಲ ಶಾಸಕ ಜಿ.ಎಸ್. ಪಾಟೀಲ, ಎಸ್.ವಿ. ಸಂಕನೂರು, ಐ.ಜಿ. ಸನದಿ, ಬಿ.ಆರ್. ಯಾವಗಲ್ಲ, ಜಿ.ಎಸ್. ಗಡ್ಡದೇವರಮಠ, ಜೆ.ಕೆ. ಜಮಾದಾರ, ಉಮೇಶಗೌಡ ಪಾಟೀಲ ಇತರರು ಇದ್ದರು.
===
ಕೋಟ್:
ಡಿ.ಆರ್. ಪಾಟೀಲರ ಅವರಿಗೆ ಇರುವಷ್ಟು ಸಮಯಪ್ರಜ್ಞೆ ಮತ್ತೊಬ್ಬರಿಲ್ಲ. ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಯಾವಾಗಲೂ ಸಕಾರಾತ್ಮ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ. ಅವರಿಂದ ಯುವ ರಾಜಕಾರಣಿಗಳು ಕಲಿಯುವುದು ಬಹಳಷ್ಟಿದೆ.
- ಜಿ.ಎಸ್. ಪಾಟೀಲ, ಶಾಸಕರು
====
ಕೋಟ್:
ಕಲುಷಿತ ಗೊಂಡ ಇಂತಹ ರಾಜಕೀಯ ವ್ಯವಸ್ಥೆಯಲ್ಲಿ ಡಿ.ಆರ್. ಪಾಟೀಲ ಅವರಂತಹ ರಾಜಕಾರಣಿಗಳು ರಾಜಕೀಯ ವ್ಯವಸ್ಥೆ ತಿಳಿಗೊಳಿಸಲು ಅಗತ್ಯವಿದೆ. ಅವರು ಸ್ವಂತಕ್ಕಾಗಿ ರಾಜಕೀಯ ಮಾಡಲಿಲ್ಲ. ಅಂತರ್ಜಲ ಹೆಚ್ಚಿಸುವ, ಗ್ರಾಮ ಸ್ವರಾಜ್ಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅವರ ಪಾತ್ರ ಹೆಚ್ಚಿದೆ. ನೂರು ವರ್ಷಗಳ ಕಾಲ ಆರೋಗ್ಯವಂತಬದುಕು ಅವರದ್ದಾಗಲಿ.
- ಎಸ್. ವಿ. ಸಂಕನೂರು
===
ಕೋಟ್
ಡಿ.ಆರ್. ಪಾಟೀಲ ಅವರನ್ನು ಕೇಂದ್ರದ ರಾಜಕಾರಣದಲ್ಲಿ ನೋಡಬೇಕೆನ್ನುವುದು ದಿವಂಗತ ಕೆ.ಎಚ್. ಪಾಟೀಲ ಅವರ ಬಯಕೆ ಆಗಿತ್ತು. ರಾಜ್ಯದಲ್ಲಿ 4 ಜನರನ್ನು ರಾಜ್ಯಸಭೆಗೆ ಕಳುಹಿಸುತ್ತೇವೆ. ಅದರಲ್ಲಿ ಡಿ.ಆರ್. ಪಾಟೀಲ ಅವರನ್ನು ಒಬ್ಬರಾಗಿ ಕಳುಹಿಸಿದರೆ ಉತ್ತಮ ನಿರ್ಧಾರ.
ಐ.ಜಿ. ಸನದಿ, ಮಾಜಿ ಸಂಸದ
===
ಕೋಟ್:
ಎಚ್. ಕೆ. ಪಾಟೀಲರಿಗಾಗಿ ನೀವು ಕ್ಷೇತ್ರವನ್ನು ತ್ಯಾಗ ಮಾಡಿದ್ದೀರಿ ಎಂದು ಕೆಲವರು ಹೇಳುತ್ತಾರೆ. ಆದರೆ, ಎಚ್. ಕೆ. ಪಾಟೀಲ ನನಗಾಗಿ ತ್ಯಾಗ ಮಾಡಿದ್ದು ಹಲವರಿಗೆ ಗೊತ್ತಿಲ್ಲ.
- ಡಿ.ಆರ್. ಪಾಟೀಲ, ಮಾಜಿ ಶಾಸಕ.