

ವಿಜಯವಾಣಿ ಸುದ್ದಿಜಾಲ ಗದಗ
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ (ಡಿಬಿಓಟಿ) ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ 6 ತಿಂಗಳಿಂದ ಸಮರ್ಪಕ ವೇತನ ನೀಡದೇ ಇರುವುದರಿಂದ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಕೂಡಲೇ ಸಿಬ್ಬಂದಿಗಳಿಗೆ ಸಮರ್ಪಕ ವೇತನವನ್ನು ಪಾವತಿಸಬೇಕು ಎಂದು ಡಿಬಿಓಟಿ ಉದ್ಯೋಗಿ ಮಂಜುನಾಥ ಸೂಡಿ ಹೇಳಿದರು.
ಇತ್ತೀಚೆಗೆ ಗದಗ ಜಿಲ್ಲಾಡಳಿತ ಮುಂಭಾಗದಲ್ಲಿ ಡಿಬಿಓಟಿ ಸಿಬ್ಬಂದಿಗಳಿಗೆ ವೇತನ ಹಾಗೂ ನಿರ್ವಹಣೆ ಸಂಪನ್ಮೂಲ ಒದಗಿಸುವಂತೆ ಸಾಂಕೇತಿಕವಾಗಿ ಧರಣಿ ನಡೆಸಿ ಮಾತನಾಡಿದ ಅವರು, 2023 ಡಿ. ತಿಂಗಳಿಂದ ಸರ್ಕಾರವು ಬಿಲ್ ನೀಡಬೇಕಾಗಿದೆ. ಉದ್ಯೋಗಿಗಳ, ಕೆಲಸಗಾರರ ವೇತನ ಮತ್ತು ಕನಿಷ್ಠ ನಿರ್ವಹಣೆಗೆ ಬೇಕಾಗುವ ಅತ್ಯಾವಶ್ಯಕ ಸಾಮಗ್ರಿಗಳಿಗೆ ಕೊರತೆ ಆಗದಂತೆ ಗಮನ ಹರಿಸಿ ಇಲಾಖೆ ಅನುದಾನ ಬಿಡುಗಡೆ ಮಾಡಬೇಕು. ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು ಎಂಬ ಹಿತ ದೃಷ್ಟಿಯಿಂದ ನೀರು ಸರಬರಾಜು ಸ್ಥಗಿತ ಗೊಳಿಸದೇ ಇಲಾಖೆಯ ಮತ್ತು ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯುವ ಉದ್ದೇಶದಿಂದ ಸಂಕೇತಿಕ ಧರಣಿ ನಡೆಸಲಾಗುತ್ತಿದೆ.
ಉಮೇಶ ಬೆಟಗೇರಿ, ಬಸವರಾಜ ನಿಚಣಕಿ, ಮಂಜು ಭೋವಿ, ಸುನೀಲ ತಿಮ್ಮಣ್ಣವರ, ಪ್ರಕಾಶ ನಾಗನೂರ, ಶಂಕ್ರಯ್ಯ ಗಣಾಚಾರಿ, ಸಿದ್ದಪ್ಪ ಹಳೆಮನಿ, ಸಂತೋಷ ಕಮ್ಮಾರ, ರಾಚನಗೌಡ ಪಾಟೀಲ ಇತರರು ಇದ್ದರು.