ಮಕ್ಕಳನ್ನೇ ದೇಶದ ಆಸ್ತಿಯಾಗಿಸುವ ಜವಾಬ್ದಾರಿ ಗುರುವಿನದ್ದು

05 GDG TEACHER
Published on

ಗದಗ: ತಂದೆ- ತಾಯಿಗಳು ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಮೌಲ್ಯಯುತ, ಗುಣಮಟ್ಟದ ಶಿಕ್ಷಣ ನೀಡಿ ಅವರ ವ್ಯಕ್ತಿತ್ವ ರೂಪಿಸುವುದರೊಂದಿಗೆ ದೇಶದ ಆಸ್ತಿಯನ್ನಾಗಿಸುವ ಮಹತ್ತರ ಜವಾಬ್ದಾರಿ ಪಾಲಕರು ಹಾಗೂ ಶಿಕ್ಷಕರ ಮೇಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆಯಿಂದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ಜರುಗಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆ.15, ಜ.26ರ ನಂತರ ಸೆ.5ರ ಶಿಕ್ಷಕರ ದಿನಾಚರಣೆಗೆ ಅತ್ಯಂತ ಮಹತ್ವವಿದೆ. ಶಿಕ್ಷಕರ ದಿನಾಚರಣೆಯ ಮೂಲಕ ಶಿಕ್ಷಕರಿಗೆ ಗೌರವ ಸಲ್ಲಿಸಲಾಗುತ್ತದೆ. ಶಿಕ್ಷಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಮುಂಡರಗಿ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಿ.ಎಸ್. ಅರಸನಾಳ ಮಾತನಾಡಿ, ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಶ್ರೇಷ್ಠ ತತ್ವಜ್ಞಾನಿಯಾಗಿದ್ದರು. ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವರು ಶಿಕ್ಷಣ ಮತ್ತು ಶಿಕ್ಷಕ ಹೇಗಿರಬೇಕು ಎಂಬ ಕಲ್ಪನೆ ಇಟ್ಟುಕೊಂಡಿದ್ದರು. ಗುರು- ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾಗಿದ್ದು, ಶಿಕ್ಷಣ ಮತ್ತು ಶಿಕ್ಷಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
ಶಿಕ್ಷಣಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಬುರಡಿ ಮಾತನಾಡಿದರು. ಕಪೋತಗಿರಿ ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿದರು. ಗದಗ- ಬೆಟಗೇರಿ ನಗರಸಭೆ ಉಪಾಧ್ಯಕ್ಷರಾದ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ್, ಡಯಟ್ ಉಪನಿರ್ದೇಶಕ ಜಿ.ಎಲ್. ಬಾರಾಟಕ್ಕೆ, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಎಚ್.ಎಸ್. ಜಿನಗಿ, ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ, ಎಸ್.ಎನ್. ಬಳ್ಳಾರಿ, ವಿವೇಕಾನಂದಗೌಡ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net