ಗದಗ: ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ

25GDG05
Published on

ಗದಗ: ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ (ಪಿಪಿಟಿಸಿಟಿ ಕೇಂದ್ರ) ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಳೆ ಜಿಲ್ಲಾಸ್ಪತ್ರೆಯ ಡ್ಯಾಪ್ಕ್ಯೂ ಕಛೇರಿ ಸಭಾಭವನದಲ್ಲಿ ಬುಧವಾರದಂದು  ತಾಯಿಯಿಂದ ಮಗುವಿಗೆ ಹೆಚ್.ಐ.ವಿ. ಸೋಂಕು ನಿರ್ಮೂಲನೆಗಾಗಿ ಆಂದೋಲನ ಕಾರ್ಯಕ್ರಮ ಹಾಗೂ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಡಾ.ಅರುಂಧತಿ ಕುಲಕರ್ಣಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ ಪ್ರತಿಯೊಬ್ಬ ಗರ್ಭಿಣಿ ಮಹಿಳೆಯು ಆರೋಗ್ಯಯುತ ಜೀವನ ನಡೆಸಲು ಪೌಷ್ಟಿಕಾಂಶಯುಕ್ತ ಆಹಾರ ಸೆವನೆ ಮಾಡಬೇಕು.  ಹೆಚ್.ಐ.ವಿ. ಮುಕ್ತ ಮಗುವನ್ನು ಪಡೆಯಲು ಹೆಚ್.ಐ.ವಿ. ಕಾಯಿಲೆಯ ಮಾಹಿತಿ ಪಡೆದು ಎಲ್ಲ ಗರ್ಭಿಣಿ ಮಹಿಳೆಯರು ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡಿದರು. ಇದೇ ಸಂಧರ್ಭದಲ್ಲಿ 40 ಜನಗರ್ಭಿಣಿ ಮಹಿಳೆಯರಿಗೆ ಊಡಿತುಂಬುವ ಮೂಲಕ ಸೀಮಂತ ಮಾಡಿದರು.  

ಪ್ರತಿಯೊಬ್ಬ ಗರ್ಭಿಣಿಯು ಪ್ರತಿ ತ್ರೈಮಾಸಿಕದಲ್ಲಿ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಲು ತಿಳಿಸಿದರು. ಪ್ರತಿದಿನ ಯೋಗ ವ್ಯಾಯಾಮ ಮಾಡುತ್ತ ಚಟುವಟಿಕೆಯಿಂದ ಇರಲು ತಿಳಿಸಿದರು. ಹೆಚ್.ಐ.ವಿ ಏಡ್ಸ್ ಕಾಯ್ದೆ ಜಾರಿಯಾಗಿದ್ದು, ಹೆಚ್.ಐ.ವಿ.ಯೊಂದಿಗೆ ಬದುಕುತ್ತಿರುವ ವ್ಯಕ್ತಿಗಳಿಗೆ ಸಾರ್ವಜನಿಕ ಕ್ಷೇತ್ರ ಹಾಗೂ ಖಾಸಗಿ ಕ್ಷೇತ್ರದಲ್ಲಿ ಹೆಚ್.ಐ.ವಿ ಸಂಬಂಧಿತ ತಾರತಮ್ಯದ ವಿರುಧ್ಧ ಕಾನೂನಿನ ರಕ್ಷಣೆ ನೀಡಿದೆ ಎಂದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರಾದ ಬಸವರಾಜ ಲಾಳಗಟ್ಟಿರವರು ಮಾತನಾಡಿ ಹೆಚ್.ಐ.ವಿ ಕಾರ್ಯಕ್ರಮ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯಗತಗೊಂಡಿದ್ದು, ಹೆಚ್.ಐ.ವಿ ಸೋಂಕಿತ ಗರ್ಭಿಣಿ ಮಹಿಳೆಯಿಂದ ಹುಟ್ಟಿದ ಮಕ್ಕಳು ಹೆಚ್.ಐ.ವಿ.ಯಿಂದ ಮುಕ್ತವಾಗಿದ್ದು ಉತ್ತಮ ಪ್ರಗತಿಯಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ನಮ್ಮ ಜಿಲ್ಲೆಯು ಹೆಚ್.ಐ.ವಿ ನಿಯಂತ್ರಣದಲ್ಲಿಉತ್ತಮ ಪ್ರಗತಿ ಸಾಧಿಸಿದ್ದು, ಹೆಚ್.ಐವಿ ಸೋಂಕಿನ ಪ್ರಮಾಣ 0.03% ಇದ್ದು, ಹೆಚ್.ಐ.ವಿ. ಸೋಂಕನ್ನು ಸೊನ್ನೆಗೆತರಲು ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ತಿಳಿಸಿದರು.

ತಾಯಿಯಿಂದ ಮಗುವಿಗೆ ಹೆಚ್.ಐ.ವಿ ಸೋಂಕಿನ ನಿರ್ಮೂಲನೆಗಾಗಿ, ಹೆಪಟೆಟಿಸ್‍ಹಾಗೂ ಸಿಫಿಲಿಸ್ ನಿರ್ಮೂಲನೆಗಾಗಿ ಗರ್ಭಿಣಿ ಮಹಿಳೆಯರಿಗೆ ಈ ಮೂರು ರೋಗಗಳ ತಪಾಸಣೆ ಮಾಡಿ, ಸಾಮೂಹಿಕ ಸೀಮಂತ ಕಾರ್ಯಕ್ರಮ ಮಾಡುವುದರ ಮುಖಾಂತರ ಜಾಗೃತಿಯನ್ನು ಮೂಡಿಸಲಾಯಿತು.

ಹೆಚ್‍ಐವಿ ಸೋಂಕಿತರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಹಾಗೂ ಜಿಲ್ಲೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿದರು. ಯೋಜನೆಗಳಾದ ಅನ್ನ ಅಂತ್ಯೋದಯ ಯೋಜನೆ, ವಿಶೇಷ ಪಾಲನಾ ಯೋಜನೆ, ವಸತಿ ಸೌಲಭ್ಯ, ಧನಶ್ರೀ ಯೋಜನೆ, ಚೇತನಾಯೋಜನೆ, ಮೈತ್ರಿ ಯೋಜನೆ, ಉಚಿತ ಕಾನೂನು ಸೇವೆ ಹಾಗೂ ಮೂಲಭೂತ ತರಬೇತಿಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ಮಹೇಶ ಕೊಪ್ಪಳ, ಶ್ರೀಮತಿ ಚವಡಿ ಮೇಲ್ವಿಚಾರಕರು ನಗರ ಆರೋಗ್ಯ ಕೇಂದ್ರ, ಮುರ್ನಾಳ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

ಪ್ರಾರಂಭದಲ್ಲಿ ಶ್ರೀಮತಿ ಅನುಸೂಯಾ ಟಂಕಸಾಲಿ ಪ್ರಾರ್ಥಿಸಿದರು, ಶ್ರೀಮತಿ ಚನ್ನಮ್ಮ ಸ್ವಾಗತಿಸಿದರು, ಶ್ರೀಮತಿ ರೇಣುಕಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net