ಪದವಿಯೊಂದಿಗೆ ಕೌಶಲ್ಯವನ್ನು ಅಳವಡಿಸಿಕೊಳ್ಳಬೇಕು: ಕೃಷ್ಣಗೌಡ. ಹೆಚ್. ಪಾಟೀಲ

Untitled
Published on

ಗದಗ: ಆಧುನಿಕವಾದ ಈ ಜಗತ್ತಿನಲ್ಲಿ ಸ್ಪರ್ಧೆ ಎಲ್ಲಾ ಕ್ಷೇತ್ರಗಳಲ್ಲೂ ಗರಿಷ್ಠ ಹಂತದಲ್ಲಿದೆ ಮತ್ತು ದಿನನಿತ್ಯವೂ ಬದಲಾವಣೆಗಳೊಂದಿಗೆ ಸಾಗುತ್ತಿರುವ ಈ ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಪಡೆದ ಪದವಿ ಶಿಕ್ಷಣ ಬದಲಾವಣೆಗಳಿಗೆ ಹೊಂದಿಕೊಳ್ಳದೇ ಹೋಗಬಹುದು, ಅಂತಹ ಸಂದರ್ಭದಲ್ಲಿ ಬರೀ ಓದಿನ ಜ್ಞಾನ ಅಪ್ರಸ್ತುತವಾಗಬಹುದು. ಆದ್ದರಿಂದ ವಿದ್ಯಾರ್ಥಿಗಳು ಕೌಶಲ್ಯ ಆಧಾರಿತವಾದ ವಿಶೇಷವಾದ ಜ್ಞಾನವನ್ನು ಸಹ ಪದವಿಯ ಜೊತೆ ಜೊತೆಯಲ್ಲಿ ಅಳವಡಿಸಿಕೊಂಡಲ್ಲಿ ಬದಲಾದ ಸನ್ನವೇಶದಲ್ಲಿ ಯಶಸ್ವಿ ಜೀವನವನ್ನು ನಡೆಸಬಹುದು. ಅದ್ದರಿಂದ ಯುವಕರು ಇಂದು ಕಲಿಕೆಯೊಂದಿಗೆ ಕೌಶಲ್ಯಕ್ಕೂ ಆದ್ಯತೆ ನೀಡಬೇಕೆಂದು ಕಾಂಗ್ರೆಸ್ ಯುವ ಧುರೀಣರಾದ ಕೃಷ್ಣಗೌಡ. ಹೆಚ್. ಪಾಟೀಲರವರು ಕಲ್ಯಾಣಸಿರಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ ಹಾಗೂ ಎನ್.ಎಸ್.ಎಸ್. ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತಾ ಹೇಳಿದರು.

ಮುಂದುವರಿದು ಮಾತನಾಡಿದ ಅವರು ವಿದ್ಯಾರ್ಥಿ ದಿಸೆಯಲ್ಲಿ ಪ್ರಾಮಾಣಿಕವಾಗಿ ಹಾಗೂ ಸಕ್ರೀಯವಾಗಿ ಕಲಿಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಉದ್ಯೋಗ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವಂತೆ ಪ್ರತಿಭಾನ್ವಿತ ಪದವೀಧರರಾಗಿ ಹೊರಹೊಮ್ಮಬೇಕು, ಇಲ್ಲವೇ ಉದ್ಯೋಗ ನೀಡುವ ಉದ್ಯೋಗದಾತರಾಗುವಂತಹ ತಾಂತ್ರಿಕ ಕೌಶಲ್ಯ ಹಾಗೂ ವ್ಯವಹಾರ ಜ್ಞಾನವನ್ನಾದರೂ ರೂಪಿಸಿಕೊಳ್ಳಬೇಕು. ಅದಕ್ಕೆಂದೆ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ವ್ಯವಸ್ಥೆ ಇರುತ್ತದೆ. ಇದನ್ನು ಸದ್ಭಳಕೆ ಮಾಡಿಕೊಂಡು ವ್ಯಕ್ತಿತ್ವ ರೂಪಿಸಿಕೊಂಡು ಬೆಳೆಯಿರಿ ಎಂದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಗದಗ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಅರ್.ಎಸ್. ಬುರುಡಿ ಅವರು ಚುನಾವಣೆಯ ಮೂಲಕ ನೂತನವಾಗಿ ಆಯ್ಕೆಯಾಗಿದ್ದ ವಿದ್ಯಾರ್ಥಿ ಒಕ್ಕೂಟ ಎಲ್ಲಾ ಪ್ರತಿನಿಧಿ ಕಾರ್ಯದರ್ಶಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿ ವಿಲಾಸಿ ಜೀವನಕ್ಕೆ ಮಾರುಹೋಗದೇ ತಮ್ಮ ಜವಾಬ್ದಾರಿಯನ್ನು ಅರಿತು ಸಾಧನೆಯ ಸಾಧಕರಂತೆ, ವಿದ್ಯೆಯನ್ನು, ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡು ಶ್ರೇಷ್ಠ ಸಂಸ್ಕಾರವAತರಾಗಬೇಕು ಮತ್ತು ಗುರಿ ಮುಟ್ಟುವ ತನಕ ಜ್ಞಾನದ ಹಸಿವಿನಿಂದ ಅಧ್ಯಯನಶೀಲರಾಗಬೇಕು, ಅಂದಾಗ ಮಾತ್ರ ವಿದ್ಯಾರ್ಥಿ ಜೀವನ ಸಾರ್ಥಕವಾಗುತ್ತದೆ. ಮತ್ತು ನೀವು ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ತಂದೆ-ತಾಯಿ ಗುರು-ಹಿರಿಯರನ್ನು ಪ್ರೀತಿ ಗೌರವದಿಂದ ಕಾಣುವಂತಹ ಸಂಸ್ಕಾರವAತರಾದಾಗ ಮಾತ್ರ ನಿಮ್ಮ ಜ್ಞಾನಕ್ಕೆ ಹಾಗೂ ನಿಮ್ಮ ಸ್ಥಾನಕ್ಕೆ ಒಂದು ಮೌಲ್ಯವಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರಾ. ಬಿ.ಬಿ. ಗೌಡರ ಮಾತನಾಡಿ ನಮ್ಮ ಈ ಕಾಲೇಜ ಆರಂಭಿಕ ಬೆಳವಣಿಗೆಯಲ್ಲಿಯೇ ಪ್ರತಿವರ್ಷ ಉತ್ತಮ ಕ್ರೀಡಾಪಟುಗಳನ್ನು ವಿಶ್ವವಿದ್ಯಾಲಯ ಮಟ್ಟಕ್ಕೆ ಸಿದ್ದಪಡಿಸಿ ಕೊಡುಗೆಯಾಗಿ ನೀಡಿದೆ. ಶೈಕ್ಷಣಿಕವಾದ ಫಲಿತಾಂಶವು ಕೂಡ ಪ್ರತಿ ವರ್ಷ ಶೇ.೯೫ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದು, ಈಗಾಗಲೇ ಅನೇಕ ವಿದ್ಯಾರ್ಥಿಗಳು ಉದ್ಯೋಗವನ್ನು ಹೊಂದಿ ಜೀವನ ರೂಪಿಸಿಕೊಂಡಿದ್ದು ನಮ್ಮ ಸಂಸ್ಥೆಯ ಹೆಮ್ಮೆಯಾಗಿದೆ ಎಂದರು ಹಾಗೂ ಸಂಸ್ಥೆ ಸಾಗಿ ಬಂದ ಬೆಳವಣಿಗೆಯ ಸಮಗ್ರ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುವುದರೊಂದಿಗೆ ಪ್ರೋತ್ಸಾಹಿಸಲಾಯಿತು. ನೂತನವಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಜ್ಞಾನದ ಸಂಕೇತವಾದ ಪೆನ್ನು ಹಾಗೂ ಗುಲಾಬಿ ಹೂ ನೀಡುವ ಮೂಲಕ ಆತ್ಮಿಯವಾಗಿ ಸ್ವಾಗತಿಸಲಾಯಿತು.

ಕಾರ್ಯಕ್ರಮವು ಕುಮಾರಿ. ಪೂಜಾ ಹೊಂಬಳ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾದ ಪ್ರೊ. ಎನ್.ಐ. ವಡಿಗೇರಿ ಸ್ವಾಗತ ಕೋರಿದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ಬಿ.ಎಂ. ನದ್ದಿಮುಲ್ಲಾ ಅತಿಥಿ ಅಭ್ಯಾಗತರನ್ನು ಪರಿಚಯಿಸಿದರು, ಪ್ರೊ. ಗುಲ್ಶಾನ್ ಶೇಖ ಅವರು ವಂದಿಸಿದರು ಹಾಗೂ ಕಾರ್ಯಕ್ರಮವನ್ನು ಪ್ರೊ. ಚಂದನಾ ಹಿರೇಮಠ ಹಾಗೂ ಪ್ರೊ. ಅನ್ನಪೂರ್ಣ ಕಬಾಡಿ ಅವರು ಜಂಟಿಯಾಗಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net